ಅಕ್ರಮ ಗೋವು ಸಾಗಾಟ, ಹತ್ಯೆ ನಿಷೇಧಿಸಲು ಆಗ್ರಹ

0
18

ಕನ್ನಡಮ್ಮ ಸುದ್ದಿ-ನರಗುಂದ: ಬಕ್ರೀದ್ ಹಬ್ಬದ ಅಂಗವಾಗಿ ತಾಲೂಕಿನಲ್ಲಿ ನಡೆಯುವ ಅಕ್ರಮ ಗೋವುಗಳ ಸಾಗಾಟ ಮತ್ತು ಹತ್ಯೆ ಮಾಡುವುದನ್ನು ಸಂಪೂರ್ಣ ನಿಷೇಧಿಸಬೇಕೆಂದು ಆಗ್ರಹಿಸಿ ಪಟ್ಟಣದ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಪ್ರತಿಭಟಣೆ ಮೂಲಕ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಭಾರತೀಯ ಸಂಪ್ರದಾಯದಲ್ಲಿ ಗೋಹತ್ಯೆ ಮಾಡುವುದು ಮಹಾಪಾಪ. ಇದನ್ನು ನಿಷೇಧಿಸಲಾಗಿದ್ದರೂ ಕಟ್ಟುನಿಟ್ಟಿನ ನಿಯಮ ಪಾಲನೆಯಾಗುತ್ತಿಲ್ಲ. ಇಡೀ ವಿಶ್ವಕ್ಕೆ ಅಹಿಂಸೆ, ಮಾನವೀಯತೆ, ಆಧ್ಯಾತ್ಮದ ದಿವ್ಯ ಸಂದೇಶಗಳನ್ನು ಸಾರುತ್ತಿರುವ ನಮ್ಮ ಭಾರತ ದೇಶದಿಂದಲೇ ಕೋಟ್ಯಾಂತರ ಗೋವು, ಎತ್ತು, ಎಮ್ಮೆ, ಕೋಣ, ಒಂಟೆ ಮುಂತಾದ ಪಶು, ಪ್ರಾಣಿಗಳನ್ನು ಸಾಗಿಸಿ ಕಸಾಯಿಖಾನೆಗಳಲ್ಲಿ ಸಾಮೂಹಿಕ ಮಾರಣಹೋಮ ನಡೆಸುತ್ತಿರುವುದು ಅಮಾನವೀಯ ಕೃತ್ಯವಾಗಿದೆ. ಇದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಗ್ರಹಿಸಿದರು.ವಿಶ್ವಹಿಂದು ಪರಿಷತ್ ತಾಲೂಕು ಘಟಕದ ಅಧ್ಯಕ್ಷ ರವಿ ಹೊಂಗಲ ಮಾತನಾಡಿ, ಇಡೀ ವಿಶ್ವದಲ್ಲೇ ಭಾರತ ಗೋಮಾಂಸ ರಪ್ತಿನಲ್ಲಿ 2ನೇ ಸ್ಥಾನದಲ್ಲಿದೆ.
ಗೋಹತ್ಯೆ ನಿರಂತರವಾಗಿ ನಡೆಯುತ್ತಿರುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಡುವಿವೆ. ಮೈಸೂರ ಸರ್ಕಾರದ ಆಡಳಿತವಿದ್ದ ಸಂದರ್ಭದ 1964 ರಲ್ಲಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತಂದಿತು. ಸುಪ್ರೀಂ ಕೋರ್ಟ್ 1994 ರಲ್ಲಿ 2009 ರಲ್ಲಿ ಹೈಕೋರ್ಟ ಗೋಹತ್ಯೆ ನಿಷೇಧಕಾನೂನು ಕಡ್ಡಾಯವಾಗಿ ಜಾರಿಗೆ ತರಲು ನಿಯಮಗಳನ್ನು ರೂಪಸಿದ್ದರೂ ಕೂಡಾ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ.ಕರ್ನಾಟಕ ಸರ್ಕಾರವು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಮೀಷನರ್ , ರಾಜ್ಯ ಗೃಹ ಕಾರ್ಯದರ್ಶಿ ಹಾಗೂ ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿ, ಎಸ್‍ಪಿಯವರಿಗೆ ಬಕ್ರೀದ್ ಹಬ್ಬ ಹಾಗೂ ಇನ್ನಿತರ ದಿನಗಳಲ್ಲಿ ಗೋವು, ಒಂಟೆ ಇನ್ನಿತರ ಜಾನುವಾರುಗಳ ಅಕ್ರಮ ಹತ್ಯೆ ಮತ್ತು ಸಾಗಾಣೆಕೆ ತಡೆಗಟ್ಟುವ ಕುರಿತು ಆದೇಶ ಹೊರಡಿಸಿದ್ದು ಗೋ,ಪ್ರೇಮಿ ಕಾರ್ಯಕರ್ತರು, ಪ್ರಾಣಿ ಪರಿಸರ ಪ್ರೇಮಿಗಳು ಇದನ್ನು ಗಮನಿಸಿ ಡಿಸಿ ಮತ್ತು ಎಸ್‍ಪಿಯವರ ಮೇಲೆ ಒತ್ತಡ ತಂದು ಗೋಹತ್ಯೆ ನಿಲ್ಲಿಸಲು ಕೋರಬೇಕೆಂದು ಅವರು ಆಗ್ರಹಿಸಿದರು.
ನಿರಂಜನ ಮಡಿವಾಳರ, ಶ್ರೀನಿವಾಸ ಗುಜಮಾಗಡಿ ಮಾತನಾಡಿದರು. ಮನವಿ ಅರ್ಪಿಸುವ ಪೂರ್ವ ಪ್ರತಿಭಟನೆಗಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಸ್ ನಿಲ್ದಾಣ ಬಳಿಯ ಶಿವಾಜಿ ವರ್ತುಲದಲ್ಲಿ ಕೆಲಕಾಲ ರಾಸ್ತಾರೋಖೋ ನಡೆಸಿದರು. ಶಂಕರಗೌಡ ಪಾಟೀಲ, ವಿಜಯ ಮಾನೆ, ವೆಂಕಟೇಶ ಖಾನಪೇಠ, ವೆಂಕನಗೌಡ ಮುದಿಯಪ್ಪನವರ, ಪ್ರಭು ಸಾತಿಹಾಳ, ಮಂಜು ಚಿತ್ರಗಾರ, ಮಂಜುನಾಥ ಬನ್ನಿಮರದ, ಬಸವರಾಜ ಬೇಲೇರಿ, ವಿಕ್ರಮ ಬೆಳದಡಿ, ಬಸನಗೌಡ ಪಾಟೀಲ, ಸಂತೋಷ ಹಂಚಿನಾಳ, ಬಸ್ಸು ಬೋವಿ, ಶ್ರೀಕಾಂತ ಪಾಟಿಲ, ಆನಂದ ಭದ್ರಶೆಟ್ಟಿ ಅನೇಕರು ಉಪಸ್ಥಿತರಿದ್ದರು.

loading...