ಅಕ್ರಮ ಚಟುವಟಿಕೆಗಳ ತಾಣವಾದ ಮಣಕಿ ಗ್ರೌಂಡ್

0
24

ಕನ್ನಡಮ್ಮ ಸುದ್ದಿ-ಕುಮಟಾ: ಬಹುತೇಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಪಟ್ಟಣದ ಐತಿಹಾಸಿಕ ಮಹಾತ್ಮಗಾಂಧಿ ಮೈದಾನ (ಮಣಕಿ ಗ್ರೌಂಡ್) ಅಭಿವೃದ್ಧಿ ಕಾಣದೆ, ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ಮೈದಾನದೂದ್ದಕ್ಕು ಮದ್ಯದ ಬಾಟಲಿಗಳ ಕಾರುಬಾರು. ಕತ್ತಲಾಯಿತೆಂದರೆ ವ್ಯಸನಿಗರ ಅಡ್ಡಾವಾಗುತ್ತಿದ್ದರೂ ಹೇಳೋರಿಲ್ಲ, ಕೇಳೋರಿಲ್ಲ, ಎಂಬ ದುಸ್ಥಿತಿ ಎದುರಾಗಿರುವುದರಿಂದ ಐತಿಹಾಸಿಕ ಮಣಕಿ ಮೈದಾನಕ್ಕೆ ಮಂಕು ಕವಿದಂತಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ಮುಂದಾಗಬೇಕೆಂದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಪಟ್ಟಣದ ಹೃದಯಭಾಗದಲ್ಲಿರುವ ಮಣಕಿ ಮೈದಾನ ಜಿಲ್ಲೆಯಲ್ಲಿಯೇ ವಿಶಾಲವಾದ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಸೇರಿದಂತೆ ಹಲವು ಗಣ್ಯರ ಕಾರ್ಯಕ್ರಮಗಳಿಗೆ ಈ ಮೈದಾನ ಶಾಕ್ಷಿಯಾಗಿದೆ. ಕುಮಟಾ ಉತ್ಸವ, ಹಬ್ಬ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಅಲ್ಲದೆ ವಿವಿಧ ರಾಜಕೀಯ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರ ಮುಖಂಡರುಗಳಿಗೂ ಈ ಮೈದಾನದ ಪರಿಚಯವಿದೆ. ಇಂಥ ಐತಿಹಾಸಿಕ ಹಿನ್ನೆಲೆಯಿರುವ ಮೈದಾನವು ಮೂಲ ಸೌಕರ್ಯಗಳಿಲ್ಲದೆ ಬಣಗುಡುತ್ತಿದೆ.

ಅಲ್ಲದೆ ತಾಲೂಕು ಆಡಳಿತ ಈ ಮೈದಾನದಲ್ಲಿ ಎಲ್ಲ ರಾಷ್ಟ್ರೀಯ ದಿನಾಚಣೆ ಮತ್ತು ಹಬ್ಬಗಳನ್ನು ಆಚರಿಸುತ್ತದೆಯೋ ಹೊರತು ಅಭಿವೃದ್ಧಿ ಕಡೆಗೆ ಗಮನ ಹರಿಸಿಲ್ಲ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಈ ಮೈದಾನ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿಯಾಯಿತೆಂದರೆ ಮದ್ಯ ವೆಸನಿಗರ ಅಡ್ಡಾವಾಗುತ್ತದೆ. ಎಲ್ಲಿ ನೋಡಿದರೂ ಮದ್ಯದ ಬಾಟಿಲಿಗಳು ಕಾಣ ಸಿಗುತ್ತಿದ್ದು, ಪೊಲೀಸ್ ಇಲಾಖೆ ಇಂಥಹ ಅಕ್ರಮ ಚಟುವಟಿಕೆಗಳನ್ನು ತಡೆಯುವುದನ್ನು ಬಿಟ್ಟು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂಥ ಸುಂದರ ಮತ್ತು ವಿಶಾಲ ಮೈದಾನ ಅಭಿವೃದ್ಧಿ ಹೊಂದದಿರುವುದಕ್ಕೆ ಅನೇಕ ಕ್ರೀಡಾ ಪ್ರೇಮಿಗಳು, ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುವ ಜತೆಗೆ ಅಭಿವೃದ್ಧಿಗಾಗಿ ಒತ್ತಾಯಿಸಿದ್ದಾರೆ. ಆದರೆ, ಮಣಕಿ ಮೈದಾನದ ಸಂಬಂಧ ಕಂದಾಯ ಇಲಾಖೆ ಮತ್ತು ಕೆನರಾ ಎಜುಕೇಶನ್ ಸೊಸೈಟಿಯ ನಡುವೆ ವಿವಾದ ಏರ್ಪಟ್ಟು ಸೊಸೈಟಿಯು ಹೈ ಕೋರ್ಟ್ ಮೆಟ್ಟಿಲೇರಿದ್ದರಿಂದ ಮೈದಾನದ ಅಭಿವೃದ್ಧಿ ಸಾಧ್ಯವಾಗಿಲ್ಲ. ಇಲಾಖೆಯು ಮೈದಾನವನ್ನು 99 ವರ್ಷಗಳ ವರೆಗೆ ಸೊಸೈಟಿಗೆ ಲೀಜ್ ನೀಡಿತ್ತು. ಲೀಜ್ ಅವಧಿ ಮುಗಿದ ಬಳಿಕವು ಮೈದಾನ ಸೊಸೈಟಿಯ ವಶದಲ್ಲಿದ್ದರಿಂದ ಆ ಮೈದಾನವನ್ನು ತಮ್ಮಗೆ ನೀಡಬೇಕೆಂದು ಸೊಸೈಟಿ ಕೋರ್ಟ್ ಮೊರೆ ಹೋಗಿದೆ. ಪ್ರಕರಣ ಕೋರ್ಟ್‍ನಲ್ಲಿರುವುದರಿಂದ ಮೈದಾನದ ಅಭಿವೃದ್ಧಿಗೆ ಸರ್ಕಾರಿ ಹಣ ಬಳಕೆ ಮಾಡಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ. ನೂರು ವರ್ಷಗಳಿಗೂ ಅಧಿಕ ಅವಧಿಗೆ ನಿರ್ವಹಣೆ ಮಾಡುತ್ತಿರುವುದರಿಂದ ಮೈದಾನ ನಮಗೆ ಸೇರಬೇಕೆಂಬುದು ಸೊಸೈಟಿಯ ವಾದವಾಗಿದೆ.

loading...