ಅಖಂಡ ಕರ್ನಾಟಕದ ಅಭಿವೃದ್ಧಿಯೇ ನನ್ನ ಆಶಯ: ಸಚಿವ ಖಾದರ್

0
16

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಅವಳಿ ನಗರವನ್ನು ರಾಜ್ಯದ ಮಾದರಿ ನಗರವನ್ನಾಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಖಂಡ ಕರ್ನಾಟಕ ಇರಬೇಕು ಎನ್ನುವುದು ನನ್ನ ಆಸೆ. ಪ್ರತ್ಯೇಕ ರಾಜ್ಯವನ್ನು ಕೇಳುವುದು ಸರಿಯಲ್ಲ. ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಪ್ರತ್ಯೇಕ ರಾಜ್ಯ ಕೇಳುವುದು ರಾಜ್ಯಕ್ಕೆ ಮಾಡುವ ದ್ರೋಹ ಎಂದರು.
ಇನ್ನು ಕರ್ನಾಟಕ ರಾಜ್ಯಾದ್ಯಂತ 63 ಸಾವಿರ ಮನೆ ನಿರ್ಮಾಣ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಅ. 1ರಂದು ಹುಬ್ಬಳ್ಳಿಯಲ್ಲಿಯೇ ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬಿಆರ್‍ಟಿಎಸ್ ಕಾಮಗಾರಿ ನ. 1ರೊಳಗೆ ಮುಗಿಯಬೇಕೆಂದು ಅದೇಶ ಮಾಡಿದ್ದೇನೆ. ನ. 1ರೊಳಗೆ ಕಾಮಗಾರಿ ಮುಗಿಯದಿದ್ರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಇನ್ನು 20 ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ಮಾಡುತ್ತೇವೆ ಎಂದರು.
ಸಚಿವರಾದ ನಂತರ ಮೊದಲ ಬಾರಿಗೆ ವಾಣಿಜ್ಯ ನಗರಿಗೆ ಆಗಮಿಸಿದ ಸಚಿವರಿಗೆ ನಗರದ ವಿವಿಧ ಸಂಘಟನೆಗಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದವು. ನಗರದ ಜಗದೀಶ ನಗರ ಮೂಲ ನಿವಾಸಿಗಳಿಗೆ ಹಕ್ಕು ಪತ್ರ ಹಾಗೂ ಮನೆ ಹಸ್ತಾಂತರಿಸುವಂತೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಿದರು. ಜಗದೀಶ ನಗರ ನಿವಾಸಿಗಳ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಅನೇಕ ಬಾರಿ ಪಾಲಿಕೆ, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ ಇಲ್ಲಿಯರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಜಗದೀಶ ನಗರ ನಿವಾಸಿಗಳು ತುಂಬಾ ಸಮಸ್ಯೆ ಅನುಭವಿಸುವಂತಾಗಿದೆ ಎಂದು ದೂರಿದರು. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮನೆ ಕಳೆದುಕೊಂಡವರಿಗೆ ಇಲ್ಲಿಯವರೆಗೂ ಸರಿಯಾಗಿ ಮನೆ ಹಂಚಿಕೆ ಆಗಿಲ್ಲ. ಜಗದೀಶ ನಗರಕ್ಕೆ ರಸ್ತೆ, ಒಳಚರಂಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ನೀಡಿಲ್ಲ. ಇದರಿಂದ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ನಗರಕ್ಕೆ ಮೂಲಭೂತ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.

loading...