ಅಧಿಕಾರ ವಿಕೇಂದ್ರಿಕರಣದ ಕಗ್ಗೊಲೆ ದೇಸಳ್ಳಿ ಆರೋಪ

0
15

ಕನ್ನಡಮ್ಮ ಸುದ್ದಿ-ಮುಂಡಗೋಡ: ಶಾಸಕರು ಹಾಗೂ ಸ್ಥಳೀಯ ಜಿ.ಪಂ ಸದಸ್ಯರು ಅಧಿಕಾರ ವಿಕೇಂದ್ರಿಕರಣದ ಕಗ್ಗೊಲೆ ನಡೆಸಿ ಗ್ರಾಮ ಪಂಚಾಯತ ಯೋಜನೆಗಳಲ್ಲಿ ಕೂಡ ಹಸ್ತಕ್ಷೇಪ ಮಾಡುವ ಮೂಲಕ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತಾಲೂಕಿನ ಇಂದೂರ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ್ ದೇಸಳ್ಳಿ ಆರೋಪಿಸಿದರು.
ಮಂಗಳವಾರ ತಾಲೂಕಿನ ಇಂದೂರ ಗ್ರಾ.ಪಂ ಸಭಾಂಗಣದಲ್ಲಿ ಉಪಾಧ್ಯಕ್ಷರು ಹಾಗೂ ಬಹುತೇಕ ಸದಸ್ಯರ ಸಮ್ಮುಖದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಈ ವಿಷಯ ತಿಳಿಸಿದರು. ಆಶ್ರಯ ಯೋಜನೆಯಡಿ ಮನೆ ನೀಡಬೇಕಾದರೆ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಾಮಾನ್ಯ. ಆದರೆ ಕಳೆದ 3 ವರ್ಷಗಳಿಂದ ಮನೆ ಪಟ್ಟಾ, ಗ್ಯಾಸ್ ಸಿಲಿಂಡರ್ ವಿತರಣೆ ಸೇರಿದಂತೆ ಎಲ್ಲವನ್ನು ಅವರೇ ಮಾಡುತ್ತಿದ್ದಾರೆ. ಸ್ಥಳಿಯ ಜಿ.ಪಂ ಸದಸ್ಯರು ಯಾವುದೇ ವಿಷಯವನ್ನು ಗ್ರಾ.ಪಂ ಗಮನಕ್ಕೆ ತರದೆ ಶಾಸಕರು ಹೇಳಿದ್ದಾರೆಂದು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳಿಂದ ಮನೆ ಪಟ್ಟಾ ಪಡೆದುಕೊಂಡು ಫಲಾನುಭವಿಗಳ ಮನೆಗೆ ಮುಟ್ಟಿಸಿ ತಾವೇ ಜನರಿಗೆ ಮನೆ ನೀಡಿರುವುದಾಗಿ ಹೇಳುತ್ತ ಹೊರಟಿದ್ದಾರೆ. ಹಾಗಿದ್ದರೆ ಗ್ರಾ.ಪಂ ಅಧ್ಯಕ್ಷರು ಸದಸ್ಯರ ಅವಶ್ಯಕತೆ ಏನಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದ ಅವರು, ತಮ್ಮ ಶಾಸಕರು ಹಾಗೂ ಸರ್ಕಾರ ಇದೆ ಎಂದು ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ಗ್ರಾ.ಪಂ, ಜಿ.ಪಂ ಹಾಗೂ ಶಾಸಕರು ಅವರವರ ಕೆಲಸ ಅವರೇ ಮಾಡಬೇಕು ಎಲದಕ್ಕೂ ಸರ್ವಾಧಿಕಾರ ತೋರಿದರೆ ಸಲ್ಲದು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಹೇಳಿದರು.

ಗ್ರಾ.ಪಂ ಉಪಾಧ್ಯಕ್ಷ ಬಿಸ್ಠನಗೌಡ ಪಾಟೀಲ ಮಾತನಾಡಿ, ಪಲಾನುಭವಿಗಳಿಗೆ ಮನೆ ಮಂಜೂರಿಯಾಗಿ 90 ದಿನದೊಳಗಾಗಿ ಮನೆ ನಿರ್ಮಾಣ ಪ್ರಾರಂಬಿಸಿ ಮೊದಲನೇ ಬಿಲ್ ಹಣ ಪಡೆದುಕೊಳ್ಳಬೇಕೆಂಬ ನಿಯಮವಿದೆ. ಇಲ್ಲದೇ ಹೋದರೆ ಆನ್ ಲೈನ್ ನಲ್ಲಿ ಬ್ಲಾಕ್ ಆಗಿಬಿಡುತ್ತದೆ. ಆದರೆ ಇಲ್ಲಿ ಮನೆ ಮಂಜೂರಿಯಾಗಿ ತಿಂಗಳು ಕಳೆದರೂ ತಾವೇ ಬಂದು ವಿತರಿಸುವವರೆಗೆ ಯಾರಿಗೂ ಪಟ್ಟಾ ನೀಡದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ದೋರಣೆಯಿಂದಾಗಿ ಪಲಾನುಭವಿಗಳಿಗೆ ಪಟ್ಟಾ ಸಿಗುವುದು ವಿಂಬವಾಗುತ್ತಿರುವುದರಿಂದ ಪಾನುಭವಿಗಳಿಗೆ ಸಕಾಲದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲಾಗದೆ ಇದ್ದ ಮನೆಯನ್ನು ನೆಲಸಮಗೊಳಿಸಿಕೊಂಡು ಸಾಲ ಸೋಲ ಮಾಡಿ ಅರ್ಧಂಭರ್ಧ ಕಟ್ಟಿಕೊಂಡ ಮನೆ ಬಿಲ್ ಹಣ ಬರದೆ ಪರದಾಡುವಂತಾಗಿದೆ. ಇಂದೂರ ಗ್ರಾ.ಪಂ ನ್ಲಲಿಯೇ ಸುಮಾರು 40 ಮನೆಗಳಿಗೆ ಜಿ.ಪಿ.ಎಸ್ ಮಾಡಿದರೂ ಹಣ ಬಿಡುಗಡೆಯಾಗುತ್ತಿಲ್ಲ. ತಾಲೂಕಿನಲ್ಲಿ ನೂರಾರು ಮನೆಗಳ ಬಿಲ್ ಆಗದೆ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಜಗದೀಶ ಓಣಿಕೇರಿ, ನೀಲವ್ವ ಸುಣಗಾರ, ಚನ್ನಮ್ಮ ಸುರಗಿಮಠ, ಗೌರವ್ವ ಹಿರೇಹಳ್ಳಿ, ರುದ್ರವ್ವ ಬಡಿಗೇರ, ನಾಗರಾಜ ಗೋಣೆಪ್ಪನವರ, ಕಸ್ತೂರಿ ಹರಿಜನ, ಗಣೇಶ ಕೀರ್ತೆಪ್ಪನವರ, ದ್ರಾಕ್ಷಾಯಿಣಿ ಕರಿಬಸನಗೌಡ್ರ, ಯ್ಲಲವ್ವ ಹೂಲಿಕಟ್ಟಿ, ಶರೀಪ ದುಂಡಸಿ, ಬೇಗಂ ದೊಡ್ಮನಿ ಮುಂತಾದ ಸದಸ್ಯರು ಉಪಸ್ಥಿತರಿದ್ದರು.

loading...