ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ಮೂವರು ಉಗ್ರರು ಹತ

0
8

ಶ್ರೀನಗರ:- ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ (ಸಿಎಎಸ್‌ಒ) ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ಇದರೊಂದಿಗೆ, ಕಾಶ್ಮೀರ ಕಣಿವೆಯಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ವಿವಿದ ಕಾರ್ಯಾಚರಣೆಗಳಲ್ಲಿ 116 ಉಗ್ರರು ಹತ್ಯೆಯಾಗಿದ್ದಾರೆ.

ಈ ಮಧ್ಯೆ, ಭದ್ರತಾ ಕಾರಣಗಳಿಗಾಗಿ ಅನಂತ್‍ನಾಗ್‍ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಆಧರಿಸಿ, ಸೇನೆ, ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಅನಂತ್‌ನಾಗ್‌ನ ರೂನಿಪೋರಾದಲ್ಲಿ ಸೋಮವಾರ ಮುಂಜಾನೆ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಯುಎನ್‌ಐಗೆ ತಿಳಿಸಿದ್ದಾರೆ.

ಭದ್ರತಾ ಪಡೆಗಳು ಒಂದು ನಿರ್ದಿಷ್ಟ ಪ್ರದೇಶದೆಡೆಗೆ ಸಾಗುತ್ತಿದ್ದಾಗ ಅಡಗಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಭಾರೀ ಗುಂಡಿನ ಚಕಮಕಿ ನಡೆದಿದೆ. ಘರ್ಷಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಘಟನಾ ಸ್ಥಳದಿಂದ ಒಂದು ಎಕೆ -47 ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಗ್ರರ ಗುರುತು ಪತ್ತೆ ಮಾಡಲಾಗುತ್ತಿದೆ. ಇತ್ತೀಚಿನ ವರದಿ ಬಂದಾಗ ಕಾರ್ಯಾಚರಣೆ ಇನ್ನೂ ನಡೆಯುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಯಾವುದೇ ಪ್ರತಿಭಟನೆಗಳನ್ನು ತಡೆಯಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

loading...