ಅನುಭವಿಸಿದಾಗಲೆ ಕಾಯಕದ ಮಹತ್ವ ತಿಳಿಯಲು ಸಾಧ್ಯ: ಶ್ರೀಗಳು

0
22

ಕನ್ನಡಮ್ಮ ಸುದ್ದಿ-ಧಾರವಾಡ: ಕಾಯ ದಂಡಿಸದ ಹೊರತು ಕಾಯಕದ ಮಹತ್ವ ಗೊತ್ತಾಗುವುದಿಲ್ಲ ಅದನ್ನು ಅನುಭವಿಸಿದಾಗಲೇ ಕಾಯಕದ ಮಹತ್ವ ಗೊತ್ತಾಗುತ್ತದೆ ಎಂದು ಚಿಕ್ಕತೊಟ್ಟಲಕೆರೆ ಅಟವಿಸ್ವಾಮಿ ಮಠದ ಶ್ರೀ ಶಿವಲಿಂಗ ಸ್ವಾಮಿಜಿ ಹೇಳಿದರು.
ಮುರುಘಾಮಠದಲ್ಲಿ ಮುರುಘರಾಜೇಂದ್ರ ಪ್ರಸಾದ ನಿಲಯ ಶತಮಾನೋತ್ಸವ ಹಾಗೂ ಶ್ರಾವಣ ಪ್ರಯುಕ್ತ ಆಯೋಜಿಸಿದ್ದ ಮೃತ್ಯುಂಜಯ ಲೀಲಾವಿಲಾಸ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಸ್ಥಾವರ ಲಿಂಗ ಇಲ್ಲ. ದೇಹವೇ ದೇವಾಲಯ, ಆತ್ಮವೇ ದೇವರು ಎಂಬುದು ಕನ್ನಡಿಗರ ಶಕ್ತಿ. ಕರ್ನಾಟಕವೇ ಒಂದು ಜ್ಯೋತಿಲಿಂರ್ಗ ಎಂದರು. ಸಾಹಿತಿ ರಂಜಾನ್‌ ದರ್ಗಾ ಮಾತನಾಡಿ, ಸಮಾಜ ಸುಧಾರಣೆ ಆಗಬೇಕಾದರೆ ಸಮಾಜದಲ್ಲಿ ಪವಿತ್ರ ತರಂಗಗಳು ಇರಬೇಕು. ಅಂತಹ ಪವಿತ್ರ ತರಂಗಗಳನ್ನು ಸಮಾಜದಲ್ಲಿ ಹರಡಿದವರು ಮೃತ್ಯುಂಜಯಪ್ಪಗಳು ಎಂದರು. ಬೆಳಗಾವಿ ಕಾರಂಜಿ ಮಠದ ಗುರುಸಿದ್ದ ಶ್ರೀ, ನರಗುಂದ ವಿರಕ್ತಮಠದ ಶಿವಕುಮಾರ ಶ್ರೀ, ಕೌಲಗೇರಿ ಶಿವಾನಂದ ಮಠದ ಸರಸ್ವತಿ ಶಿವಾನಂದಶ್ರೀ, ಬೈಲಹೊಂಗಲದ ನೀಲಕಂಠ ಶ್ರೀ ಮಾತನಾಡಿದರು.
ಇದೇ ವೇಳೆ ವಚನಕಾರರ ಸಮಗ್ರ ಕ್ರಾಂತಿ, ಸಂಗೀತ ಬಸವೇಶ್ವರ ಮತ್ತು ಮರಾಠಿ ಷಟಸ್ಥಳ, ಬಸವಣ್ಣನವರ ಪರ್ಯಾಯ ಸಮಾಜ ಗ್ರಂಥಗಳನ್ನು ಮುರುಘಾಮಠದ ಮಲ್ಲಿಕಾರ್ಜುನ ಲೋಕಾರ್ಪಣೆ ಮಾಡಿದರು. ರಾಮಕೃಷ್ಣ ಮರಾಠೆ, ರಂಜಾನ್‌ ದರ್ಗಾ, ಬಿ.ಎಫ್‌.ಜೇಗರಡ್ಡಿ ಅವರನ್ನು ಸನ್ಮಾನಿಸಲಾಯಿತು. ಸುಜಾತಾ ಗುರವ ಕಮ್ಮಾರ ಅವರು ವಚನ ಸಂಗೀತ ಪ್ರಚುರಪಡಿಸಿದರು.

loading...