ಅಬಕಾರಿ ಇಲಾಖೆಗೆ ಸಿಬ್ಬಂದಿ ನಿಯೋಜಿಸಲು ಆಗ್ರಹ

0
19

ಕನ್ನಡಮ್ಮ ಸುದ್ದಿ-ನರಗುಂದ: ಸ್ಥಳೀಯ ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಳೆದ 2009 ರಿಂದಲೂ ಇದ್ದು ಅಗತ್ಯ ಹುದ್ದೆಗಳನ್ನು ಭರ್ತಿಗೊಳಿಸಲು ಇಂದಿಗೂ ಸರ್ಕಾರ ಕ್ರಮಕೈಗೊಂಡಿಲ್ಲ. ಹೀಗಾಗಿ ತಾಲೂಕಿನ ಅನೇಕ ಗ್ರಾಮಸ್ಥರು ತಮ್ಮ ಊರಿನಲ್ಲಿ ಅಕ್ರಮ ಮದ್ಯದ ಹಾವಳಿ ತಡೆಗಟ್ಟಿ ಎಂದು ದೂರು ನೀಡಲು ಬಂದರೆ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ದೂರು ಸ್ವೀಕರಿಸುವವರು ಇಲ್ಲದಿರುವುದರಿಂದ ಗ್ರಾಮಸ್ಥರು ಸಮಸ್ಯೆ ಅನುಭವಿಸುವುದು ಮುಂದುವರೆದಿದೆ.
ಪಟ್ಟಣದಲ್ಲಿ ಅಬಕಾರಿ ಇಲಾಖೆ ಇದ್ದರೂ ಕೂಡಾ ಸಿಬ್ಬಂದಿ ಕೊರತೆ ಇದೆ. ಹೀಗಿದ್ದರೂ ಕೂಡ ಇಲ್ಲಿಯ ಇಲಾಖೆಯಲ್ಲಿ ಸೇವೆ ಸಲ್ಲಿಸುವತ್ತಿರುವ ಕ್ಲರ್ಕ್‌ ಅವರನ್ನು ರೋಣ ತಾಲೂಕಿನ ಅಬಖಾರಿ ಇಲಾಖೆಗೆ ಸರ್ಕಾರ ಡೆಪ್ಯೂಟೇಷನ್‌ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿಯ ಅಬಖಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್‌ ಸೇರಿದಂತೆ ಒಟ್ಟು 10 ಸಿಬ್ಬಂದಿ ಕೆಲಸ ನಿರ್ವಹಿಸಬೇಕು. ಇನ್‌ಸ್ಪೆಕ್ಟರ್‌ ಓರ್ವರು, ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌, ಎಸ್‌ಡಿಸಿ ಒಂದು ಹುದ್ದೆ, ಅಬಖಾರಿ ನಿರೀಕ್ಷಕರ ಮೂವರು ಹುದ್ದೆ ನಿಯೋಜಿತಗೊಳಿಸಬೇಕಾಗಿದ್ದು, ಆದರೆ ಇದುವರೆಗೂ 2009 ರಿಂದ ಮೂವರು ಅಬಖಾರಿ ನಿರೀಕ್ಷರ ಹುದ್ದೆಗಳು ಭರ್ತಿಯಾಗಿಲ್ಲ.
ಈಗಿರುವ ಇನ್ಸ್‌ಪೆಕ್ಟರ್‌ ಹೊನ್ನಪ್ಪ ಒಲೇಕಾರ ಸರಿಯಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಅವರು ಹಾವೇರಿಯವರಾಗಿದ್ದು ಆಗೊಮ್ಮೆ, ಈಗೊಮ್ಮೆ ಕಚೇರಿಗೆ ಬಂದು ತೆರಳುತ್ತಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಅನುಪಸ್ಥಿತಿಯಲ್ಲಿದ್ದಾರೆಂದು ಅಬಖಾರಿ ಇಲಾಖೆಯ ಸಿಬ್ಬಂದಿ ಹೇಳುತಿದ್ದಾರೆ.
ಇನ್ನು ಕಳೆದ ಎರಡು ತಿಂಗಳಿನಿಂದ ದೂರವಾಣಿ ಬಿಲ್‌ ಕಟ್ಟದಿರುವ ಪರಿಣಾಮ ಕಚೇರಿಯ ದೂರವಾಣಿ ಕೆಲಸ ಸ್ಥಗಿತಗೊಂಡಿದೆ. ಗ್ರಾಮಸ್ಥರು ತಮ್ಮ ನಿವೇದನೆ ಪರಿಹರಿಸಲು ದೂರವಾಣಿ ಮೂಲಕ ಮಾತನಾಡಿಸಲು ಪ್ರಯತ್ನಿಸಿದರೆ ದೂರವಾಣಿ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಹಿರೇಕೊಪ್ಪ ಮತ್ತು ಸಂಕದಾಳ ಮತ್ತು ಬೆನಕೊಪ್ಪ ಮತ್ತು ಮೂಗನೂರ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆದರೂ ಕೂಡ ಅಬಖಾರಿ ಇಲಾಖೆ ಇದನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುತ್ತಿಲ್ಲ.
ಅಕ್ರಮ ಮದ್ಯಮಾರಾಟ ಮಾಡುವ ಗ್ರಾಮದ ಅಂಗಡಿಗಳ ಮಾಲೀಕರ ಜೊತೆ ಅಬಖಾರಿ ಇಲಾಖೆ ಅಧಿಕಾರಿಗಳು ಕೈಜೋಡಿಸಿ ಅಕ್ರಮ ಮದ್ಯ ಮಾರಾಟಗೊಳಿಸಲು ಒಪ್ಪಂದ ಮಾಡಿಕೊಂಡಿರಬಹುದೆಂಬ ಶಂಕೆಯೂ ವ್ಯಕ್ತವಾಗುತ್ತಿದೆ. ಉತ್ತಮ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ಇಲ್ಲಿಯ ಅಬಖಾರಿ ಇಲಾಖೆಗೆ ನಿಯೋಜನೆಗೊಳಿಸಬೇಕೆಂದು ಹಿರೇಕೊಪ್ಪದ ಮಾಲಿಂಗಪ್ಪ ಕಾಕನೂರ, ಬಸಪ್ಪ ಅಮಟಿ, ತುಕಾರಾಂ ರಾಮಣ್ಣವರ, ರಮೇಶ ಕೀಲಿಕೈ ಅನೇಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

loading...