ಅವ್ಯವಹಾರದ ಆರೋಪ ಸತ್ಯಕ್ಕೆ ದೂರ: ವಂಟಮುತ್ತೆ

0
37

ಚಿಕ್ಕೋಡಿ 13: ಪಟ್ಟಣದ ಬಸವೇಶ್ವರ ಕೋ-ಆಪ್‌ ಕ್ರೆಡಿಟ್‌ ಸೊಸಾಯಿಟಿಯ ಅಭಿವೃದ್ಧಿ ಸಹಿಸಲಾರದೆ ಸ್ವಂತ ಸ್ವಾರ್ಥಕ್ಕಾಗಿ ಕೆಲವರು ವಿನಾಕಾರಣ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದು, ಅದು ಸತ್ಯಕ್ಕೆ ದೂರವಾಗಿದೆ ಎಂದು ನಿರ್ದೇಶಕ ಪ್ರಕಾಶ ವಂಟಮುತ್ತೆ ಹೇಳಿದರು. ಪಟ್ಟಣದ ಸೋಮವಾರ ಪೇಠದಲ್ಲಿರುವ ಸಂಘದ ಸಭಾಭವನದಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ತ ದಾಖಲೆಗಳು ಇಲ್ಲದೆ ಬೇರೆಯವರ ಹೆಸರಿನಲ್ಲಿ ಬೇನಾಮಿಯಾಗಿ ಸಾಲ ನೀಡಿಲ್ಲ. ಯಾವುದೇ ಭದ್ರತೆ ಪಡೆಯದೇ 70 ಲಕ್ಷ ರೂ. ಸಾಲ ನೀಡಿರುವ ಆರೋಪ ಸಂಪೂರ್ಣ ಸುಳ್ಳು ಇದರ ಹಿಂದೆ ಕಾಣದ ಕೈಗಳ ಕೈವಾಡವಿರಬಹುದೆಂದು ಕಂಡು ಬರುತ್ತದೆ. ನಿರ್ದೇಶಕಿಯರಾದ ಉಮಾ ಕಾಶಿನಾಥ ನೂಲಿ ಹಾಗೂ ಮಹಾನಂದಾ ವಿಶ್ವನಾಥ ಬೆಲ್ಲದ ಅವರ ಆರೋಪದಲ್ಲಿ ಹುರುಳಿಲ್ಲ. ಅವರು ಸಹಕಾರಿಯ ನಿರ್ದೇಶಕರಾಗಿ ಇಲ್ಲ ಸಲ್ಲದ ಆರೋಪ ಮಾಡಿದ್ದರಿಂದ ಅವರ ಮೇಲೆ ಮಾನನಷ್ಟ ಮೊಕದ್ದಮೆ ಏಕೆ ಹೂಡಬಾರದು ಎಂದು ನೋಟಿಸ್‌ ನೀಡಲಾಗುವುದು ಎಂದು ತಿಳಿಸಿದರು. ಶುಕ್ರವಾರ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಭೇಟಿ ನೀಡಿ ಎಲ್ಲ ನಿರ್ದೇಶಕರು ಹಾಗೂ ಆಪಾದನೆ ಮಾಡಿರುವ ಮಹಿಳಾ ನಿರ್ದೇಶಕರು ಸಹ ಆರೋಪಗಳು ನಮ್ಮ ಗಮನಕ್ಕೆ ಬರದೇ ಬಾಯಿ ಮಾತಿನ ಚರ್ಚೆಯಿಂದ ಹೀಗೆ ಮಾಡಿರುವುದಾಗಿ ತಿಳಿಸಿದ್ದಾರೆ ಎಂದರು. ಕಳೆದ ಮೂರು ವರ್ಷಗಳ ಹಿಂದೆ 3 ಜನ ಆಡಳಿತ ಮಂಡಳಿ ಸದಸ್ಯರು ರಾಜೀನಾಮೆ ನೀಡಿದ್ದಾರೆ.  ಸಹಕಾರಿಯ ಅಧ್ಯಕ್ಷ ಮಧುಕರ ಮೆಹತಾ, ಉಪಾಧ್ಯಕ್ಷ ಈರಣ್ಣಾ ಪುಠಾಣೆ, ಎಸ್‌.ಎಲ್‌ ಡಂಬಳ, ಅಶೋಕ ಹಂಪನ್ನವರ ಜಗನ್ನಾಥ ವಂಟಮುತ್ತೆ, ಶಿರೀಷ ಮೆಹತಾ ಉಪಸ್ಥಿತರಿದ್ದರು.

loading...