ಆಡಳಿತ ಮಂಡಳಿಯ ಅವಧಿ ಪೂರ್ಣಗೊಳ್ಳದೇ ಚುನಾವಣೆ ನಡೆಸಬಾರದೆಂದು ಮನವಿ

0
19

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆಯ ಹಾಲಿ ಆಡಳಿತ ಮಂಡಳಿಯ ಅವಧಿ ಪೂರ್ಣಗೊಳ್ಳದೇ ಚುನಾವಣೆ ನಡೆಸಬಾರದು ಎಂದು ಹಳಿಯಾಳ ಪುರಸಭೆಯ ಆಡಳಿತ ನಿಯೋಗವು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದೆ.
ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಸದಸ್ಯರಾದ ಸತ್ಯಜೀತ ಗಿರಿ, ಉಮೇಶ ಬೋಳಶೆಟ್ಟಿ, ಸುರೇಶ ತಳವಾರ, ಸುಬಾನಿ ಹುಬ್ಬಳ್ಳಿ ಇವರುಗಳು ಮಂಗಳವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಈ ಬಗ್ಗೆ ಬರೆದ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಹಳಿಯಾಳ ಪುರಸಭೆಯ ಸಾರ್ವತ್ರಿಕ ಚುನಾವಣೆಯು 7-3-2013 ರಂದು ಜರುಗಿದ್ದು 11-3-2013 ರಂದು ಮತ ಎಣಿಕೆಯಾಗಿ ಚುನಾಯಿತ ಸದಸ್ಯರ ಹೆಸರನ್ನು ಘೋಷಿಸಲಾಯಿತು. ತದನಂತರ 14-3-2014 ರಂದು ಪುರಸಭೆಯ ಸರ್ವಸಾಮಾನ್ಯ ಸಭೆ ಜರುಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ ಆಡಳಿತಾಧಿಕಾರಿಗಳಿಂದ ಅಧಿಕಾರವನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಿಕೊಳ್ಳಲಾಯಿತು.
14-3-2014 ರಿಂದ ಆರಂಭಗೊಂಡ ಪುರಸಭೆ ಆಡಳಿತ ಅವಧಿ 14-3-2019ರ ವರೆಗೆ ಇರುವುದರಿಂದ ಈ ವಿಷಯವನ್ನು ಪರಿಶೀಲಿಸಿ ಪೂರ್ಣ ಅವಧಿಯವರೆಗೆ ಹಾಲಿ ಆಡಳಿತ ಮಂಡಳಿಯ ಸೇವೆಯನ್ನು ಮುಂದುವರಿಸಲು ಅನುವು ಮಾಡಿಕೊಡುವಂತೆ ಮನವಿಯಲ್ಲಿ ಕೋರಲಾಗಿದೆ. ಅಧ್ಯಕ್ಷ ಶಂಕರ ಬೆಳಗಾಂವಕರ, ಉಪಾಧ್ಯಕ್ಷ ಅರುಣ ಬೋಬಾಟಿ, ನಿರ್ಗಮಿತ ಸ್ಥಾಯಿ ಸಮಿತಿ ಚೇರಮನ್‌ ಗಾಯತ್ರಿ ನೀಲಜಕರ, ಸದಸ್ಯರಾದ ರಿಯಾನಾ ಬೆಟಗೇರಿ, ಸೈಯದಅಲಿ ಅಂಕೋಲೆಕರ, ಮಾಧವಿ ಬೆಳಗಾಂವಕರ (ಹಾಲಿ ಸ್ಥಾಯಿ ಸಮಿತಿ ಚೇರಮನ್‌), ಇನಾಯತುಲ್ಲಾ ಬೇಪಾರಿ, ಶ್ರೀದೇವಿ ಯಡೋಗಿ, ಮೆಹಬೂಬಸುಬಾನಿ ಹುಬ್ಬಳ್ಳಿ, ಪ್ರೇಮಾ ತೋರಣಗಟ್ಟಿ, ಶ್ರೀಕಾಂತ ಹೂಲಿ, ಸತ್ಯಜೀತ ಗಿರಿ, ಹನೋರಿಯಾ (ಮಾಲಾ) ಬೃಗಾಂಜಾ, ಬಾಬು ಮಾದರ, ಸುರೇಶ ತಳವಾರ, ಮಂಜುಳಾ ವಡ್ಡರ್‌, ಫಯಾಜ್‌ ಶೇಖ, ಉಮೇಶ ಬೋಳಶೆಟ್ಟಿ, ಮಂಜುಳಾ ಮಾನಗಾಂವಿ ಹೀಗೆ ಒಟ್ಟು 20 ಚುನಾಯಿತ ಸದಸ್ಯರ ಪೈಕಿ 19 ಚುನಾಯಿತ ಸದಸ್ಯರು ಮನವಿಪತ್ರದಲ್ಲಿ ಸಹಿ ಹಾಕಿದ್ದಾರೆ.
ಪುರಸಭೆಯಲ್ಲಿ ಒಟ್ಟು 20 ಸದಸ್ಯರ ಪೈಕಿ 15 ಸದಸ್ಯರನ್ನೊಳಗೊಂಡ ಕಾಂಗ್ರೆಸ್‌ ಪಕ್ಷದ ಆಡಳಿತ ಮಂಡಳಿ ಅಧಿಕಾರದಲ್ಲಿದೆ. ಉಳಿದ ಐವರಲ್ಲಿ ನಾಲ್ವರು ಜೆಡಿಎಸ್‌ನಿಂದ ಆಯ್ಕೆಯಾದವರಾಗಿದ್ದು ಓರ್ವರು ಪಕ್ಷೇತರರಾಗಿದ್ದಾರೆ. ಪುರಸಭೆಗೆ ಮತ್ತೆ ಚುನಾವಣೆ ನಡೆಸುವ ಬಗ್ಗೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ತಮಗೆ ಅಧಿಕಾರ ವಹಿಸಿಕೊಟ್ಟ ದಿನಾಂಕದಿಂದ ಪೂರ್ಣ ಅವಧಿಯವರೆಗೆ ಮುಂದುವರಿಯಲು ಅವಕಾಶ ನೀಡಬೇಕು ನಂತರ ಚುನಾವಣೆ ನಡೆಸಬಹುದು ಎಂಬುದು ಪುರಸಭೆ ಸದಸ್ಯರ ಅಂಬೋಣವಾಗಿದೆ.

loading...