ಆಡಿಯೋ ವಿವಾದ; ಯಡಿಯೂರಪ್ಪ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

0
9

ಬೆಂಗಳೂರು:- ‘ಅಪರೇಷನ್ ಕಮಲ’ದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‍ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಮಾ 25ಕ್ಕೆ ಮುಂದೂಡಿದೆ.

ಪ್ರಕರಣದ ಇತರ ಆರೋಪಿಗಳಾದ ಪ್ರೀತಂ ಗೌಡ ಹಾಗೂ ಶಿವನಗೌಡ ನಾಯಕ್ ಕೂಡ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಅರ್ಜಿದಾರರ ಪರ ವಕೀಲರು, ಈ ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿಲ್ಲ. ಕಲಬುರ್ಗಿ ಹೈಕೋರ್ಟ್ ಈ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ. ಆದ್ದರಿಂದ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್‍ ಪರ ವಕೀಲರು, ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ದೊರೆತಿರುವುದರಿಂದ ನಿರೀಕ್ಷಣಾ ಜಾಮೀನಿನ ಅಗತ್ಯವಿಲ್ಲ ಎಂದು ವಾದಿಸಿದರು.

ಇದಕ್ಕೆ ಯಡಿಯೂರಪ್ಪ ಪರ ವಕೀಲರು, ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ದೊರೆತಿದೆ. ಅದು ತೆರವಾದಲ್ಲಿ ಮತ್ತೆ ಅರ್ಜಿದಾರರಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಪ್ರಾಸಿಕ್ಯೂಷನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.

loading...