ಆ.27ರಿಂದ ಆರಾಧನಾ ಮಹೋತ್ಸವ ಕಾರ್ಯಕ್ರಮ

0
28

ಕನ್ನಡಮ್ಮ ಸುದ್ದಿ-ಶಿರಸಿ: ರಾಘವೇಂದ್ರ ಸ್ವಾಮಿಯವರ 347ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ಆ.27ರಿಂದ 29ರವರೆಗೆ ನಗರದ ರಾಘವೇಂದ್ರ ಮಠದಲ್ಲಿ ನಡೆಯಲಿದೆ.
ಇಲ್ಲಿನ ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಡಿ.ಡಿ.ಮಾಡಗೇರಿ ಮಾತನಾಡಿ, ಆರಾಧನಾ ಮಹೋತ್ಸವದಲ್ಲಿ ಪ್ರತೀ ದಿನ ಮುಂಜಾನೆ 7.30ರಿಂದ 10 ಗಂಟೆವರೆಗೆ ವೇದಘೋಷ, ಅಷ್ಟೋತ್ತರ, ಪವಮಾನ ಸೂಕ್ತ ಪಠಣ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ತುಳಸಿ ಅರ್ಚನೆ ನೆರವೇರಲಿದೆ. ಆ.27ರಂದು ದ್ವಾದಶಾಕ್ಷರ ಜಪ ಮತ್ತು ಹವನ, ಸಂಜೆ.4.30ರಿಂದ ಗೌರಿ ಮಹಿಳಾ ಸಮಾಜದವರಿಂದ ಭಜನೆ, 5.45 ಗಂಟೆಯಿಂದ ವಿ.ಕೆ.ಜೋಶಿ ಅವರಿಂದ ಭಾಗವತ ಕುರಿತು ಉಪನ್ಯಾಸ ನಡೆಯಲಿದೆ. ಆ.28ರಂದು ಮುಂಜಾನೆ ಪವಮಾನ ಹವನ, ಸಂಜೆ 4.30ರಿಂದ ದೈವಜ್ಞ ಮಹಿಳಾ ಮಂಡಳದ ಸದಸ್ಯರಿಂದ ಭಜನೆ, 5.45 ಗಂಟೆಯಿಂದ ಭಾವಿ ಸಮೀರ ಗುರುಕುಲ ಪ್ರಾಧ್ಯಾಪಕ ವಿ.ಪಾಂಡುರಂಗಾಚಾರ್‌ ಅವರಿಂದ ರಾಘವೇಂದ್ರರ ಕುರಿತು ಉಪನ್ಯಾಸ ನಡೆಯಲಿದೆ. ಆ.29ರಂದು ಮುಂಜಾನೆ ಧನ್ವಂತರಿ ಜಪ ಮತ್ತು ಹವನ, ಸಂಜೆ 4.30ರಿಂದ ಇನ್ಹವ್ಹೀರ್ಲ್‌ ಕ್ಲಬ್‌ ಸದಸ್ಯರಿಂದ ಭಜನೆ, 5.45ರಿಂದ ಶ್ರೀ ರಾಘವೇಂದ್ರ ಮಹಿಮೆ ಕುರಿತು ಉಪನ್ಯಾಸ ನಡೆಯಲಿದೆ. ಆ.26ರಂದು ಮುಂಜಾನೆ 7.30ರಿಂದ ವಿ.ಶ್ರೀಕಾಂತ ಭಟ್ಟ ಆಚಾರ್ಯರ ನೇತೃತ್ವದಲ್ಲಿ ಪೌರ್ಣಿಮೆ ಯಜುರ್ವೇದ ಉಪಾಕರ್ಮ ಹೋಮ ನಡೆಯಲಿದೆ ಎಂದು ತಿಳಿಸಿದರು. ಆ.28ರಂದು ಮಧ್ಯಾರಾಧನೆ ನಿಮಿತ್ತ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 6 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಮಠದ ಆವಾರದಲ್ಲಿನ ರಾಯರ ಬೃಂದಾವನ ನಿರ್ಮಾಣ ಅಭಿವೃದ್ಧಿ ಮಾಡಲಾಗಿದೆ. ಗರ್ಭಗುಡಿ ನವೀಕರಣ ಮಾಡಲಾಗಿದೆ. ಶಿಲೆ ಹೊಸ್ತಿಲು, ಬಾಗಿಲು ಚೌಕಟ್ಟು ನಿರ್ಮಿಸಲಾಗಿದೆ. 6 ಲಕ್ಷ ರೂ. ಈಗಾಗಲೇ ವೆಚ್ಚವಾಗಿದೆ. ರಾಘವೇಂದ್ರ ಸ್ವಾಮಿ, ಹನುಮಂತ ಹಾಗೂ ರಾಮ ಮೂರ್ತಿಗೆ ಬಂಗಾರ ಲೇಪಿಸಲಾಗಿದೆ. ಬೃಂದಾವನ ಹಾಗೂ ನವಗ್ರಹ ದ ಗೋಪುರ ನಿರ್ಮಿಸಲಾಗುವುದು. ವಿವಿಧ ಅಭಿವೃದ್ಧಿ ಕಾರ್ಯ ಮಾಡಬೇಕಿದ್ದು 10 ಲಕ್ಷ ರೂ. ಬೇಕಾಗಬಹುದಾಗಿದೆ ಎಂದು ಹೇಳಿದರು.
ಈ ವೇಳೆ ಸಮಿತಿಯ ಪ್ರಮುಖರಾದ ಕೆ.ವಿ.ಭಟ್ಟ, ರಾಘವೇಂದ್ರ ಆನವಟ್ಟಿ, ಗಣಪತಿ ಶೆಟ್ಟಿ ಕಾಗೇರಿ, ಅರವಿಂದ ಪೈ, ಶ್ರೀನಿವಾಸ ಹೆಬ್ಬಾರ, ನಾಗೇಶ ಕಾಮತ್‌, ಆರ್‌.ಎಲ್‌.ನಾಯ್ಕ ಇದ್ದರು.

loading...