ಇಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನದ ಸಂಭ್ರಮ

0
26

ಹೈದರಾಬಾದ್: ಇಂದು ಭಾರತದ ಹಾಕಿ ದಂತಕಥೆ, ಮೇಜರ್ ಧ್ಯಾನ್ ಚಂದ್ರ 114 ನೇ ಹುಟ್ಟು ಹಬ್ಬ. ಇವರ ಅಪ್ರತಿಮ ದೇಶಪ್ರೇಮ ಹಾಗೂ ಅದ್ಭುತ ಕ್ರೀಡಾ ಸಾಧನೆಯಿಂದಾಗಿಯೇ ಇವರು ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಭಾರತದಾದ್ಯಂತ ಆಚರಿಸಲಾಗುತ್ತಿದೆ.

ಭಾರತೀಯ ಸೇನೆ ಸೇರಿ ಮೇಜರ್ ಎಂದೇ ಕರೆಸಿಕೊಂಡವರು ಧ್ಯಾನ್ ಚಂದ್. ಸ್ವಾತಂತ್ರ್ಯ ಪೂರ್ವದಲ್ಲೇ ಒಲಿಂಪಿಕ್ಸ್ನಲ್ಲಿ ಸತತ ಮೂರು ಬಾರಿ ಹಾಕಿಯಲ್ಲಿ ಭಾರತಕ್ಕೆ ಚಿನ್ನ ಗೆಲ್ಲಿಸಿಕೊಟ್ಟ ಹಿರಿಮೆ ಧ್ಯಾನ್ ಚಂದ್ ಅವರಿಗೆ ಸಲ್ಲುತ್ತದೆ. 1928, 1932 ಹಾಗೂ 1936 ರಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿಯಲ್ಲಿ ಚಿನ್ನಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿತ್ತು. ಇದರಲ್ಲಿ ಧ್ಯಾನ್ ಚಂದ್ರದ್ದು ನಿರ್ಣಾಯಕ ಪಾತ್ರವಾಗಿತ್ತು.

ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ 400ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಧ್ಯಾನ್ ಚಂದ್ 1948ರಲ್ಲಿ ತಮ್ಮ 42ನೇ ವಯಸ್ಸಿನಲ್ಲೇ ನಿವೃತ್ತಿ ಪಡೆದು ಭಾರತದ ಹಾಕಿ ದಂತಕಥೆಯಾಗಿ ಉಳಿಯುತ್ತಾರೆ.

ಹಾಕಿ ದಂತಕಥೆ ಹುಟ್ಟಿದ ಮಹತ್ವದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಘೋಷಿಸಲಾಗಿದೆ. ಈ ದಿನ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ದ್ರೋಣಾಚಾರ್ಯ ಪ್ರಶಸ್ತಿ, ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ನೀಡಲಾಗುತ್ತದೆ. ಅಲ್ಲದೇ ರಾಜ್ಯದ ಕ್ರೀಡಾ ಸಾಧಕರಿಗೆ ಕರ್ನಾಟಕ ರಾಜ್ಯದಲ್ಲಿ ರಾಜ್ಯಪಾಲರು ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.
ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ದಿನವಾದ ಈ ದಿನವನ್ನು ದೇಶದಲ್ಲೇ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಹರಿದುಬರುತ್ತಿವೆ. ಈ ಬಗ್ಗೆ ಹಾಕೀ ಇಂಡಿಯಾ ತನ್ನ ಟ್ವಿಟ್ಟರ್ ಅಕೌಂಟ್ನಲ್ಲಿ ಪೋಸ್ಟ್ ಹಾಕಿ, ಕ್ರೀಡಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದೆ. ಅಲ್ಲದೆ ಭಾರತದ ಹಾಕಿ ಆಟಗಾರರು ದೆಹಲಿಯಲ್ಲಿರುವ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಮ್ನಲ್ಲಿರುವ ಧ್ಯಾನ್ ಚಂದ್ ಪುತ್ಥಳಿಯೆದುರು ಸೆಲ್ಫೀ ಕ್ಲಿಕ್ಕಿಸಿರುವ ಫೋಟೋವನ್ನು, ಹಾಕಿ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.

loading...