ಉತ್ತರ ಕರ್ನಾಟಕದ ಭೂಸ್ವರ್ಗ: ಕಪ್ಪತ್ತಗುಡ್ಡ

0
53

ಮುಂಡರಗಿ: ಕಾಲು ಇದ್ದವರು ಕಪ್ಪತ್ತಗಿರಿ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು ಎನ್ನುವುದು ಈ ಭಾಗದ ಒಂದು ಜನಪ್ರೀಯ ನುಡಿ. ಜನ ಮಾನಸದಲ್ಲಿ ಮನೆ ಮಾಡಿರುವ ಈ ನುಡಿಗಳು ಕಪ್ಪತಗುಡ್ಡದ ಹಿರಿಮೆ, ಗರಿಮೆ ಮತ್ತು ಮಹತ್ವವನ್ನು ಸಾರಿ ಹೇಳುತ್ತವೆ.

ಸುಮಾರು 25ವರ್ಷಗಳ ಹಿಂದೆ ಕಪ್ಪತ್ತಗುಡ್ಡದ ಗಿರಿಸಾಲಿನ ಮೇಲೆ ಮೋಡವಾದರೆ ಖಂಡಿತವಾಗಿ ಮಳೆ ಬರುತ್ತಿತ್ತು. ಅಷ್ಟು ಪ್ರಮಾಣದ ಅರಣ್ಯ ಅಲ್ಲಿತ್ತು ”ಗುರ್ಜಿ ಗುರ್ಜಿ ಎಲ್ಲಾಡಿ ಬಂದಿ, ಹಳ್ಳ-ಕೊಳ್ಳ ತಿರುಗಾಡಿ ಬಂದಿ, ಕಾರ ಮಳಿಯೋ ಕಪ್ಪತ್ತ ಮಳೀಯೋ ಸುರಿಸುರಿಯೋ ಮಳಿರಾಯ” ಎನ್ನುವ ಜಾನಪದ ಹಾಡು ಇಲ್ಲಿ ಸುರಿಯುವ ಮಳೆಗೆ ಸಾಕ್ಷಿಯಾಗಿತ್ತು.
ಇಂತಹ ಕಪ್ಪತ್ತಗುಡ್ಡವು ಎಂಭತ್ತು ಸಾವಿರ ಎಕರೆ ವಿಸ್ತ್ರೀರ್ಣದ 63ಕಿ.ಮೀ. ಉದ್ದದ, ಉತ್ತರ ಕರ್ನಾಟಕದ ಪಶ್ಚಿಮ ಘಟ್ಟ, ಮಧ್ಯ ಕರ್ನಾಟಕದ ಹೃದಯ ಭಾಗದಲ್ಲಿದೆ. ಕಪ್ಪತ್ತಗುಡ್ಡದಲ್ಲಿ ಏನಿದೆ? ಎಂದು ಪ್ರಶ್ನೆ ಮಾಡುವುದಕ್ಕಿಂತ ಕಪ್ಪತ್ತಗುಡ್ಡದಲ್ಲಿ ಏನಿಲ್ಲ! ಎಂದು ಕೇಳುವುದು ಸೂಕ್ತವೆನಿಸುತ್ತದೆ.

ಕಪ್ಪತ್ತಗುಡ್ಡವು ಬೇರಿನ ಸಂಪತ್ತಿನ ಆಗರವಾಗಿದೆ. ಒಂದು ಮಳೆ ಬಿದ್ದರೆ ಸಾಕು ಈ ಬೇರುಗಳು ಚಿಗುರೊಡೆದು ನಳನಳಿಸುತ್ತವೆ. ಕಪ್ಪತ್ತಗುಡ್ಡದ ಮಣ್ಣಿನಲ್ಲಿ ಚಿನ್ನವಿದೆ. ಸಸ್ಯಗಳಲ್ಲಿ ಔಷಧೀಯ ಗುಣವಿದೆ. ಸಂಜೀವಿನಿ ಸಸಿ ಹೊಂದಿರುವ ಇದು ಔಷಧಿ ಸಸ್ಯಗಳ ರಾಶಿ ಎಂದು ಕರೆಯಿಸಿಕೊಂಡಿದೆ. ಕಪ್ಪತ್ತಗುಡ್ಡದ ಗಾಳಿಯಲ್ಲಿ ವಿದ್ಯುತ್‍ಇದೆ. ಗಾಳಿಯಂತ್ರಗಳು ಭಾರತ ದೇಶದಲ್ಲಿ ಮೊಟ್ಟ ಮೊದಲು ಸ್ಥಾಪನೆಯಾಗಿದ್ದು ಈ ಕಪ್ಪತ್ತಗುಡ್ಡದಲ್ಲಿಯೇ.
ಕಪ್ಪತ್ತಗುಡ್ಡದಲ್ಲಿ 300ಕ್ಕೂ ಹೆಚ್ಚು ಜಾತಿಯ ವಿವಿಧ ಔಷಧೀಯ ಸಸ್ಯಗಳು ಇಲ್ಲಿವೆ. ಇಂತಹ ಔಷಧಿ ಸಸ್ಯಗಳಲ್ಲಿ ಕರಿಲೆಕ್ಕಿ, ಅಶ್ವಗಂಧ, ಚದುರಂಗ, ಅಮೃತಬಳ್ಳಿ, ಗೊಳಗುಳಕಿ, ಬಲಮುರುಗಿ, ಎಡಮುರುಗಿ, ಕವಳಿ ಮುಂತಾದವುಗಳನ್ನು ಹೆಸರಿಸಬಹುದು. ಕಪ್ಪತ್ತಗುಡ್ಡದಲ್ಲಿ ದೊರೆಯುವ ಅದಿರಿನಲ್ಲಿ ಕಬ್ಬಿಣದ ಪ್ರಮಾಣ ಶೇ.60 ರಿಂದ 63ರಷ್ಟು ಇದೆ. ಈ ಗುಡ್ಡದಲ್ಲಿ ಚಿನ್ನ ಸೇರಿದಂತೆ ಹೆಮಟೈಟ್, ಲಿಮೋನೈಟ್ ಮತ್ತು ಸಿಡೆಕೈಟ್ ಮೊದಲಾದ ಖನಿಜಗಳು ದೊರೆಯುತ್ತವೆ.

ಇಂತಹ ಖನಿಜಭರಿತ ಹಾಗೂ ಫಲವತ್ತಾದ ಭೂಮಿಯಲ್ಲಿ ಬೆಳೆದ ಔಷಧೀಯ ಸಸ್ಯಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಆಯುರ್ವೇದ ತಜ್ಷರು ಅಭಿಪ್ರಾಯ ಪಡುತ್ತಾರೆ. ಇಲ್ಲಿಯ ಔಷಧೀಯ ಸಸ್ಯಗಳನ್ನು ಬಾಂಬೆ, ಪುಣಾ, ಬೆಂಗಳೂರು, ಹೈದ್ರಾಬಾದ್ ಮೊದಲಾದ ಭಾಗಗಳಿಗೆ ಸಾಗಿಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ನಿತ್ಯ ಆಯುರ್ವೇದ ತಜ್ಞರು ಸಂಶೋಧನೆ ನಡೆಸುತ್ತಿರುತ್ತಾರೆ. ಆದರೆ ದುಷ್ಕರ್ಮಿಗಳು ಪ್ರತೀ ವರ್ಷ ಗುಡ್ಡಕ್ಕೆ ಬೇಸಿಗೆಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಬೆಂಕಿ ಹಚ್ಚುವುದರಿಂದ ಸಂಪದ್ಭರಿತಗುಡ್ಡದ ಗುಡ್ಡದ ನೆತ್ತಿಯು ಸುಟ್ಟು ಕರಕಲಾಗುತ್ತದೆ.
ಬೆಂಕಿ ಹಚ್ಚಿದರೆ ಬೇಗ ಹುಲ್ಲು ಚಿಗುರುತ್ತದೆ ಎಂಬ ಪ್ರತೀತಿ ಇರುವುದರಿಂದ ದನಗಾಹಿಗಳು ಗುಡ್ಡಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಪ್ಪತ್ತಗುಡ್ಡದಲ್ಲಿ 30ಕ್ಕೂ ಹೆಚ್ಚು ಕೆರೆಗಳು, ಹಳ್ಳಗಳು, ಝರಿಗಳು, ಕೊಳ್ಳಗಳು ಮತ್ತು ಪಡಿಗಳಿವೆ. ಇವು ಕಪ್ಪತ್ತಗುಡ್ಡದಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೀರಿನ ದಾಹವನ್ನು ಹಿಂಗಿಸುತ್ತಿದ್ದವು. ಅವು ಈಗ ಹೂಳು ತುಂಬಿ ಹೆಚ್ಚು ನೀರು ನಿಲ್ಲದಂತಾಗಿದೆ. ಹೂಳು ತುಂಬಿರುವ ಕೆರಗಳ ಹೂಳೆತ್ತಿ ಅವುಗಳನ್ನು ಪುನಶ್ಚೇತನಗೊಳಿಸಬೇಕಿದೆ. ಅವುಗಳ ಮೂಲಕ ಅರಣ್ಯದಲ್ಲಿರುವ ಪ್ರಾಣಿಗಳಿಗೆ ಕುಡಿಯಲು ನೀರು ಒದಗಿಸಿದರೆ ಪ್ರಾಣಿಗಳು ನಾಡಿಗೆ ಬರುವುದು ಕಡಿಮೆಯಾಗುತ್ತದೆ.

2006ರ ವನ್ಯಪ್ರಾಣಿಗಳ ಗಣತಿ ಪ್ರಕಾರ ಕಪ್ಪತಗುಡ್ಡದಲ್ಲಿ ಕೃಷ್ಣಮೃಗ-370, ಕಾಡುಕುರಿ-66, ಚುಕ್ಕೆ ಜಿಂಕೆ-35, ಮುಳ್ಳಹಂದಿ-165, ಕಾಡುಹಂದಿ-295, ಚಿರತೆ-4, ತೋಳ-40, ನರಿ-85, ಕತ್ತೆಕಿರುಬ-12, ಕಾಡಬೆಕ್ಕು- 14 ಹೀಗೆ ಒಟ್ಟು 1089 ವನ್ಯ ಪ್ರಾಣಿಗಳಿವೆ ಎಂದು ತಿಳಿದು ಬಂದಿದೆ. ಗುಡ್ಡದಲ್ಲಿ 700ರಿಂದ 1000ಕ್ಕೂ ಹೆಚ್ಚು ನವಿಲುಗಳು, ಹೈನಾ, ಸಾರಂಗಗಳಿವೆ. ಸಾವಿರಾರು ಪ್ರಾಣಿಗಳಿಗೆ ಆಶ್ರಯ ತಾಣವಾಗಿರುವ ಕಪ್ಪತಗುಡ್ಡವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಬೇಕು.

-ಭಾಗ್ಯಲಕ್ಷ್ಮಿ ಇನಾಮತಿ, ಶಿಕ್ಷಕಿ

loading...