ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ ಡ್ರಾ ಸಾಧಿಸಿದ ಭಾರತ

0
1

ದೋಹಾ:- ಗುರುಪ್ರೀತ್‌ ಸಿಂಗ್ ಸಂಧು ಅವರ ದಿಟ್ಟ ರಕ್ಷಣಾತ್ಮಕ ಗೋಲ್‌ ಕೀಪರ್‌ ಕೌಶಲ್ಯದಿಂದ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ ಭಾರತ ತಂಡ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಡ್ರಾ ಸಾಧಿಸಿತು. ಆ ಮೂಲಕ ‘ಇ’ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಮೊದಲನೇ ಅಂಕ ಪಡೆಯಿತು.
ಮಂಗಳವಾರ ತಡರಾತ್ರಿ ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಸಮಬಲದ ಹೋರಾಟ ನಡೆಸಿದ ಭಾರತ ಹಾಗೂ ಕತಾರ್‌ ತಂಡಗಳು 0-0 ಅಂತರದಲ್ಲಿ ಡ್ರಾಗೆ ತಪ್ತಿಪಟ್ಟುಕೊಂಡವು.
ಅನಾರೋಗ್ಯದಿಂದ ಬಳಲುತ್ತಿದ್ದ ನಿಯಮಿತ ನಾಯಕ ಸುನೀಲ್‌ ಚೆಟ್ರಿ ಅನುಪಸ್ಥತಿಯಲ್ಲಿ ಗೋಲ್‌ ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ತಂಡವನ್ನು ಮುನ್ನಡೆಸಿದರು. 103ನೇ ಶ್ರೇಯಾಂಕದ ಭಾರತ 62ನೇ ಸ್ಥಾನ ಹೊಂದಿರುವ ಕತಾರ್‌ಗಿಂತ 41 ಶ್ರೇಯಾಂಕ ಕೆಳಗೆ ಇದೆ.
ಇತ್ತೀಚಿಗಷ್ಟೆ ಅರ್ಜುನ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಬೆಂಗಳೂರು ಎಫ್‌ಸಿ ತಂಡದ ಗುರುಪ್ರೀತ್‌ ಸಿಂಗ್‌ ಸಂಧು ಪಂದ್ಯವೀಡಿ ಎದುರಾಳಿ ಮುಂಚೂಣಿ ಆಟಗಾರರನ್ನು ಗೋಲು ಗಳಿಸುವ ಪ್ರಯತ್ನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕತಾರ್‌ ಸ್ಟ್ರೈಕರ್‌ಗಳು ಸುಮಾರು 27 ಬಾರಿ ಗೋಲಿನ ಕಡೆ ಬಾರಿಸಿದ್ದ ಶಾಟ್‌ಗಳನ್ನು ಸಂಧು ತಡೆಯುವಲ್ಲಿ ಸಫಲರಾಗಿದ್ದರು. ಇದರಿಂದ ಹೆಚ್ಚಿನ ಸಂತಸಕ್ಕೆ ಒಳಗಾದ ನೂತನ ಕೋಚ್‌ ಇಗೋರ್‌ ಸ್ಟಿಮ್ಯಾಕ್‌ ಅವರು ಪಂದ್ಯ ಗೆದ್ದಷ್ಟೆ ಖುಷಿಪಟ್ಟರು.
ಎದುರಾಳಿ ಕತಾರ್‌ ತಂಡಕ್ಕೆ ಹಲವು ಬಾರಿ ಗೋಲು ಗಳಿಸುವ ಅವಕಾಶ ಒದಗಿ ಬಂದಿತ್ತು. ಇಸ್ಮಾಯಿಲ್‌ ಮೊಹಮ್ಮದ್‌ 85ನೇ ನಿಮಿಷದಲ್ಲಿ ಗೋಲಿನತ್ತ ಬಲವಾಗಿ ಹೊಡೆದ ಚೆಂಡನ್ನು ಗುರುಪ್ರೀತ್‌ ಸಿಂಗ್‌ ಸಂಧು ತಡೆದರು. ಆ ಮೂಲಕ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದರು.
ಎರಡನೇ ಅವಧಿಯಲ್ಲಿ ಭಾರತದ ಸಹಾಲ್‌ ಸಮದ್ ಹಾಗೂ ಉದಾಂತ ಸಿಂಗ್‌ ಅವರು ಎರಡು ಬಾರಿ ಗೋಲು ಗಳಿಸಲು ಭಾರಿ ಪ್ರಯತ್ನ ಮಾಡಿದ್ದರು. ಆದರೆ, ಇತರೆ ಆಟಗಾರರು ಈ ವೇಳೆ ಸಹಕಾರ ನೀಡದ ಕಾರಣ ಇವರಿಬ್ಬರ ಗೋಲು ವಂಚಿತರಾದರು.
ಭಾರತದ ನಿಯಮಿತ ನಾಯಕ ಸುನೀಲ್‌ ಚೆಟ್ರಿ ಅವರ ಅನುಪಸ್ಥಿತಿ ಪಂದ್ಯದಲ್ಲಿ ಕಾಡಲೇ ಇಲ್ಲ. ಏಕೆಂದರೆ, ಗುರುಪ್ರೀತ್‌ ಕತಾರ್‌ನ ಅಬ್ದೆಲ್‌ ಕರೀಮ್‌, ಅಬ್ದುಲ್‌ ಅಝಿಜ್‌ ಹಾಟೆಮ್‌ ಹಾಗೂ ಅಲ್ಮೋಝ್‌ಅಲಿ ಅವರ ಗೋಲುಗಳನ್ನು ನಿಯಂತ್ರಿಸಿದರು. ಜತೆಗೆ, ತಂಡವನ್ನು ಸಮರ್ಥವಾಗಿ ನಿಭಾಯಿಸಿದರು.
ಲೆಬನಾನ್‌, ದಕ್ಷಿಣ ಕೊರಿಯಾ, ಇರಾಕ್‌, ಬ್ರೆಜಿಲ್‌, ಅರ್ಜೆಂಟೀನಾ, ಪರುಗ್ವೆ ಹಾಗೂ ಕೊಲಂಬಿಯಾ ತಂಡಗಳೆದುರು ಕತಾರ್‌ ಈ ಹಿಂದೆ ಗೋಲು ಗಳಿಸದೆ ವಿಫಲವಾಗಿತ್ತು. ಇದೀಗ ಆ ತಂಡಗಳ ಸಾಲಿನಲ್ಲಿ ಭಾರತ ಹೊಸದಾಗಿ ಸೇರ್ಪಡೆಯಾಗಿದೆ.
ಇದಕ್ಕೂ ಮುನ್ನ ಭಾರತ ತಂಡ ಒಮನ್‌ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು.

loading...