ಒಣ ಮೀನು ವ್ಯಾಪಾರ ಬಲು ಜೋರು, ವ್ಯಾಪಾರಸ್ತರ ಮುಖದಲ್ಲಿ ಮಂದಹಾಸ

0
53

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಮಾಂಶಹಾರಿ ಪ್ರೀಯರು ಒಣ ಮೀನುಗಳ ಖರೀದಿಯಲ್ಲಿ ಮುಂದಾಗಿದ್ದು, ಮಳೆಗಾಲದಲ್ಲಿ ಒಣ ಮೀನಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಒಣ ಮೀನು ವ್ಯಾಪಾರ ಮಾಡುವ ಮೀನುಗಾರ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ.
ಮಳೆಗಾಲದ ಸಮಯದಲ್ಲಿ ಸಮುದ್ರದಲ್ಲಿ ಕಾಣಿಸಿಕೊಳ್ಳುವ ತುಫಾನ್‌ ಮತ್ತು ಅಲೆಗಳ ರಭಸ ಹೆಚ್ಚಾಗಿರುವುದರಿಂದ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಮಳೆಗಾಲದಲ್ಲಿ ಪ್ರತಿ ವರ್ಷವೂ ಹಸಿ ಮೀನುಗಳ ಅಭಾವವುಂಟಾಗುವುದರಿಂದ ಒಣ ಮೀನಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದ್ದು, ಗ್ರಾಹಕರು ಮೀನು ಮಾರುಕಟ್ಟೆಯಲ್ಲಿ ಒಣ ಮೀನುಗಳ ಖರೀದಿಗೆ ಮುಂದಾಗುತ್ತಿದ್ದು, ಒಣ ಮೀನಿನ ಖರೀದಿ ಕೂಡ ಹೆಚ್ಚಾಗಿದೆ.
ಮಳೆಗಾಲದಲ್ಲಿ ಸಮುದ್ರದಲ್ಲಿ ಕಾಣಿಸಿಕೊಳ್ಳುವ ತುಫಾನ್‌ ನಿಂದ ಮೀನುಗಾರಿಕೆ ಅಪಾಯಕಾರಿಯಾಗಿರುತ್ತದೆ. ಅಲ್ಲದೆ ಮೀನುಗಳು ಸಂತಾನಾಭಿವೃದ್ಧಿ ಮಾಡಿಕೊಳ್ಳುವ ಅವಧಿ ಕೂಡ ಇದಾಗಿರುವುದರಿಂದ ಸರ್ಕಾರ ಜೂನ್‌ 1ರಿಂದ ಜುಲೈ 30ರ ವರೆಗೆ 60 ದಿನಗಳು ಯಾಂತ್ರಿಕೃತ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಹಾಗಾಗಿ ಮೀನು ಮಾರುಕಟ್ಟೆಯಲ್ಲಿ ಮೀನಿನ ಅಭಾವ ಉಂಟಾಗಿರುವುದರಿಂದ ಹೊಳೆ ಮೀನಿನ ದರ ಗಗನಕ್ಕೇರುತ್ತದೆ. ಹಾಗಾಗಿ ಮಾಂಶಹಾರಿ ಪ್ರೀಯರು ಮಳೆಗಾಲದಲ್ಲಿ ಒಣ ಮೀನುಗಳನ್ನು ಖರೀಧಿಸಿ ಶೇಖರಿಸಿಡುವ ಕಾರ್ಯಕ್ಕೆ ಮುಂದಾಗುತ್ತಿರುವುದರಿಂದ ಈ ಸಮಯದಲ್ಲಿ ಒಣ ಮೀನಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತಿದ್ದು, ಮೀನು ಮಾರುಕಟ್ಟೆಯಲ್ಲಿ ಒಣ ಮೀನುಗಳ ಖರೀದಿ ಜಾಸ್ತಿಯಾಗಿದೆ. ಅಲ್ಲದೇ ಕರಾವಳಿ ಭಾಗದ ಮೀನುಗಾರರು ಮಳೆಗಾಲದ ಪೂರ್ವದಲ್ಲಿ ವಿವಿಧ ಜಾತಿಯ ಮೀನುಗಳನ್ನು ಉಪ್ಪು ಹಾಕಿ ಒಣಗಿಸಿಡುತ್ತಾರೆ. ಈ ಉಪ್ಪು ಮಿಶ್ರಿತ ಒಣ ಮೀನಿಗೆ ಭಾರಿ ಬೇಡಿಕೆಯಿದ್ದು, ಬಂಗಡೆ, ದೋಡಿ, ಮೊರಿ, ಶೆಟ್ಲಿ(ಸಿಗಡಿ), ದನಸಿ ಇತರೆ ಒಣ ಮೀನುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿರುವುದರಿಂದ ತಾಲೂಕು, ಜಿಲ್ಲೆಯವರಷ್ಟೇ ಅಲ್ಲದೆ ಬೃಹತ್‌ ಶಹರಗಳಲ್ಲಿರುವ ಮಾಂಶಹಾರಿ ಪ್ರೀಯರು ಒಣ ಮೀನನ್ನು ಖರೀದಿಸಿ ಒಯ್ಯುತ್ತಾರೆ.
ಮಳೆಗಾಲದಲ್ಲಿ ಮೀನಿನ ಅಭಾವ ಉಂಟಾಗುವುದರಿಂದ ಮೀನಿನ ದರ ಹೆಚ್ಚಾಗುತ್ತದೆ. ದರ ಹೆಚ್ಚಾಗಿದೆ ಎಂದು ಪ್ರತಿನಿತ್ಯ ಬೆಳೆ ಸಾರು ಊಟ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ವಿವಿಧ ಜಾತಿಯ ಒಣ ಮೀನನ್ನು ಖರೀಧಿಸಿ ಮನೆಯಲ್ಲಿ ಸಂಗ್ರಹಿಸಿಟ್ಟು ಆಗಾಗ ಬಳಕೆ ಮಾಡುತ್ತೇವೆ ಎಂದು ಮಾಂಶಹಾರಿ ಪ್ರೀಯರಾದ ಗಜಾನನ ನಾಯ್ಕ, ಗಣಪತಿ ದಿವಾಕರ, ಪ್ರದೀಪ ಭಂಡಾರಿ, ಸಾವೆರ್‌ ನೊರೊನ್ಹಾ, ಮೋಹನ ನಾಯ್ಕ, ಮಾರುತಿ ಶೇಟ್‌, ಜುಜೆ ಪಾಯಸ್‌, ಪರಮೇಶ್ವರ ಗೌಡ, ದತ್ತಾತ್ರೇಯ ಶೇಟ್‌, ಮತ್ತೇಸ್‌ ಫರ್ನಾಂಡಿಸ್‌, ಸೆಂಡ್ರಿಕ್‌ ಫರ್ನಾಂಡಿಸ್‌, ರಾಜೇಶ ಶೇಟ್‌, ಆಜಾದ್‌ ಶೇಖ್‌, ಅಹಮದ್‌ ಸಾಬ್‌ ಅವರ ಮಾತಾಗಿದೆ.

ಈ ಕುರಿತು “ಕನ್ನಡಮ್ಮ” ಪತ್ರಿಕೆಗೆ ಪ್ರತಿಕ್ರಿಯಿಸಿದ ಮೀನುಗಾರ ಮಹಿಳೆ ಮುಕ್ತಾ ಮೇಸ್ತಾ ಅವರು, ಬಂಗಡೆ, ದೋಡಿ, ಶಾರ್ಕ್‌, ಶೆಟ್ಲಿ(ಸಿಗಡಿ), ದನಸಿ ಸೇರಿದಂತೆ ವಿವಿಧ ಜಾತಿಯ ಒಣ ಮೀನುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ದೊಡ್ಡ ಬಂಗಡೆ 100 ರೂ ಗೆ 10 ಆದರೆ, ಸಣ್ಣ ಬಂಗಡೆ 100 ರೂ ಗೆ 15, ದೊಡ್ಡ ದೋಡಿ ಮೀನು 100 ರೂ ಗೆ 8 ಆದರೆ, ಸಣ್ಣ ದೋಡಿ 18, ದೊಡ್ಡ ಶಾರ್ಕ್‌ 1 ಜೊತೆಗೆ 700 ರಿಂದ 800 ರೂ ಆದರೆ, ಸಣ್ಣ ಶಾರ್ಕ್‌ 8, ಶೆಟ್ಲಿ ಹಾಗೂ ದನಸಿ ಮೀನಿನ ಸಿದ್ದಿಗೆ 25 ರಿಂದ 30 ರೂ, ಇತರೆ ಜಾತಿಯ ಮೀನುಗಳ ಪಾಲಿಗೆ 50 ರಿಂದ 100 ರೂ ವರೆಗೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಮೀನಿನ ಅಭಾವವಾದಾಗ ಒಣ ಮೀನಿನ ದರ ಏರಿಕೆಯಾದರೂ ಈ ಬಾರಿ ಮಳೆಗಾಲದಲ್ಲಿ ಒಣ ಮೀನಿನ ವ್ಯಾಪಾರ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

loading...