ಒಳ ಚರಂಡಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಂಸದ ಸಂಗಣ್ಣ

0
24

ಕನ್ನಡಮ್ಮ ಸುದ್ದಿ-ಗಂಗಾವತಿ: 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳ ಚರಂಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಯೋಜನೆಯ ಎಇಇ ಶಂಕರನಾಯ್ಕಗೆ ತಾಕೀತು ಮಾಡಿದರು.
ಅಮೃತ ನಗರ ಯೋಜನೆ ಕಾಮಗಾರಿ ವೀಕಿಸಿದ ಅವರು, ಗಾಂಧಿ ವೃತ್ತ, ಮಹಾವೀರ ವೃತ್ತ, ಸಿಬಿಎಸ್ ವೃತ್ತ, ದುರ್ಗಮ್ಮ ದೇವಸ್ಥಾನದ ಹತ್ತಿರ ನಿರ್ಮಾಣಗೊಂಡಿರುವ 50 ಲಕ್ಷ ರೂ. ವೆಚ್ಚದ ಫುಟ್‍ಪಾತ್ ಕಾಮಗಾರಿ ಅವರು ವೀಕ್ಷಿಸಿದರು.
ಒಳ ಚರಂಡಿ ಯೋಜನೆ ಇಲಾಖೆ ತ್ವರಿತಗೊಳಿಸದ ಕಾರಣದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ನಗರಸಭೆ ಅಧ್ಯಕ್ಷ ಸಣ್ಣ ಹುಲಿಗೆಮ್ಮ ಕಾಮದಡ್ಡಿ ಪತಿ, ಬಿಜೆಪಿ ಮುಖಂಡ ದೇವಪ್ಪ ಕಾಮದೊಡ್ಡಿ ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಮತ್ತು ಶಾಸಕ ಪರಣ್ಣ ಮುನವಳ್ಳಿಗೆ ತಿಳಿಸಿದರು.
ನಗರಸಭೆಯಿಂದ ನೂತನ ರಸ್ತೆಗಳನ್ನು ನಿರ್ಮಿಸಿದೆ. ನಗರಸಭೆ ಗಮನಕ್ಕೆ ತರದೆ ಒಳ ಚರಂಡಿ ಯೋಜನೆಯ ಅಧಿಕಾರಿಗಳು ಚರಂಡಿ ನಿರ್ಮಿಸಲು ಎಲ್ಲೆಂದರೆಲ್ಲಿ ಗುಂಡಿಗಳನ್ನು ತೋಡುವ ಕಾರಣದಿಂದ ರಸ್ತೆಗಳು ಹಾಳಾಗಿ ಹೋಗಿವೆ. ಗುಂಡಿಗಳನ್ನು ಮುಚ್ಚದ ಕಾರಣದಿಂದ ವಾಹನ ಸವಾರರು ಅಪಘಾತಕ್ಕೆ ಈಡಾಗಿದ್ದಾರೆ. ಇವರು ಮಾಡುವ ಕಾಮಗಾರಿಯಿಂದ ಉತ್ತಮ ರಸ್ತೆಗಳ ಹದೆಗೆಟ್ಟು ಹೋಗಿವೆ. ರಸ್ತೆ ತೋಡದಂತೆ ಮಾಡಿರುವ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿರುವ ಕಾರಣದಿಂದ ಎಇಇ ಶಂಕರನಾಯ್ಕ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ದೇವಪ್ಪ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ನಗರಸಭೆ ಸದಸ್ಯ ಶೇಖನಬಿಸಾಬ, ತಿಪ್ಪೇರುದ್ರಸ್ವಾಮಿ ವಕೀಲರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೀರೇಶ್ ಬಲಕುಂದಿ ಇದ್ದರು.

loading...