ಓದು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ: ನಾಗುಬಾಯಿ

0
26

ಕನ್ನಡಮ್ಮ ಸುದ್ದಿ-ದಾಂಡೇಲಿ: ಶಿಕ್ಷಣ ಸಂಸ್ಥೆಯ ಬಂಗೂರ ನಗರ ಪದವಿ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ದಾಂಡೇಲಿ ಸಮೀಪದ ಗಾವಠಾಣ ಗ್ರಾಮದಲ್ಲಿ 22ನೇ ರಾಷ್ಟ್ರಮಟ್ಟದ ಅಂಗವಾಗಿ ಓದುವ ದಿನ ಮತ್ತು ಓದುವ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಗಾವಠಾಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗುಬಾಯಿ ಉದ್ಘಾಟಿಸಿ ಮಾಡುತ್ತಾ ಓದುವ ಹವ್ಯಾಸವನ್ನು ರೂಪಿಸಿಕೊಳ್ಳುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ. ಅಲ್ಲದೇ ಪುಸ್ತಕಗಳನ್ನು ಓದುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಬೌದ್ಧಿಕ ಶಕ್ತಿಯನ್ನು ವೃದ್ಧಿಸುತ್ತವೆ. ಪಾಲಕರು ತಪ್ಪದೆ ತಮ್ಮ ಮಕ್ಕಳನ್ನೂ ಶಾಲೆಗೆ ಕಳುಹಿಸಿಕೊಡಬೇಕು ಎಂದ ಅವರು ಗಾವಠಾಣ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಆರಂಭಿಸುವುದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಸ್‌.ಎಸ್‌. ಗುಡಿಮನಿ ಮಾತನಾಡಿ ನಿತ್ಯ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ, ಮನರಂಜನೆ ಹಾಸ್ಯ ಉಂಟು ಮಾಡುವ ಪುಸ್ತಕಗಳನ್ನು ಓದುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಪುಸ್ತಕ ಏಕಾಂತದ ಸಂಗಾತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಗೂರ ನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಶೋಭಾ ಶರ್ಮಾ ಮಾತನಾಡುತ್ತಾ ಇತ್ತೀಚೆಗೆ ಟಿ.ವಿ. ಮೊಬೈಲ್‌ಗಳ ಹಾವಳಿ ಎಲ್ಲರಲ್ಲಿಯೂ ಓದುವ ಹವ್ಯಾಸ ಕಡಿಮೆಯಾಗಿಸಿದ್ದು ಖೇದಕರ ಸಂಗತಿ. ಪುರಾಣ, ಪುಣ್ಯ ಪುರುಷರಿಂದ ರಚಿತವಾದ ಭಗವತ್‌ ಗೀತೆ, ಖುರಾನ ಮತ್ತು ಬೈಬಲ್‌ನÀಂತಹ ಧಾರ್ಮಿಕ ಗ್ರಂಥಗಳು ಜಾಗತಿಕ ಶಾಂತಿಯ ತತ್ವಗಳನ್ನು ಪ್ರತಿಪಾದಿಸುತ್ತಿದ್ದು, ಇಂತಹ ಗ್ರಂಥಗಳನ್ನು ಎಲ್ಲರೂ ಓದುವ ಹವ್ಯಾಸ ರೂಪಿಸಿಕೊಳ್ಳಬೇಕೆಂದು ವಿನಂತಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತ ಗಾವಡೆ, ಗಂಗಾ ಗಾವಡೆ, ಉಪನ್ಯಾಸಕರಾದ ಪ್ರೊ.ಎಸ್‌.ಎಸ್‌. ಹಿರೇಮಠ, ಪ್ರೊ.ಎಸ್‌.ವಿನಯ, ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾ ವಿದ್ಯಾಲಯದ ಗ್ರಂಥಪಾಲಕ ಡಾ.ಎಸ್‌.ಕೆ.ಬಾಗೇವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ತೃಪ್ತಿ ನಾಯಕ ಕಾರ್ಯಕ್ರಮ ನಿರೂಪಿಸಿದರು. ಎನ್‌.ಎಸ್‌.ಎಸ್‌. ಸಂಯೋಜಕ ಪ್ರೊ.ಎಸ್‌.ಎಸ್‌.ಹಿರೇಮಠ ವಂದಿಸಿದರು. ಗ್ರಾಮದ 50ಕ್ಕೂ ಹೆಚ್ಚು ನಾಗರಿಕರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದವರಿಗೆ ಉಚಿತ ಪುಸ್ತಕಗಳÀನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

loading...