ಕತ್ತಿ ಸಹೋದರರನ್ನು ಕಡೆಗಣಿಸಿದ ಮತದಾರರು

0
881
ಕನ್ನಡಮ್ಮ ಸುದ್ದಿ
ಬೆಳಗಾವಿ 03: ಹುಕ್ಕೇರಿ ತಾಲೂಕಿನ ಎರಡು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕತ್ತಿ ಸಹೋದರರನ್ನು ಕಡೆಗಣಿಸುವ ಮೂಲಕ ಮತದಾರರು ಕಾಂಗ್ರೆಸ್‍ಗೆ ಹುಕ್ಕೇರಿ ಪುರಸಭೆಯಲ್ಲಿ ಸ್ಪಷ್ಟ ಬಹುಮತ ನೀಡಿದ್ದರೆ, ಸಂಕೇಶ್ವರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದಾಗಿ ಕತ್ತಿ ಸಹೋದರರಿಗೆ  ಜಿಲ್ಲಾ ರಾಜಕಾರಣದಲ್ಲಿ ಭಾರೀ ಹಿನ್ನಡೆ ಅನುಭವಿಸುವಂತಾಗಿದೆ.
ತಾಲೂಕು ಸೇರಿದಂತೆ ಜಿಲ್ಲಾಮಟ್ಟದಲ್ಲಿ ದಶಕಗಳಿಂದ ಸಂಘ ಸಂಸ್ಥೆಗಳ ಮೇಲೆ ಬಲವಾದ ಹಿಡಿತ ಹೊಂದಿದ್ದ ಕತ್ತಿ ಸಹೋದರರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಿಲ್ಲಾ ರಾಜಕಾರಣದಲ್ಲಿ ಸ್ವಲ್ಪ ಇರಿಸು-ಮುರಿಸು ಉಂಟು ಮಾಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದ ಜನತೆ ಕತ್ತಿ ಸಹೋದರರ ಆಡಳಿತವನ್ನು ವಿರೋಧಿಸಿ ಮತಚಲಾವಣೆ ಮಾಡಿದ್ದು, ಅದೇ ಟ್ರೆಂಡ್ ಮುಂದುವರೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಕಳೆದ 2013ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಹುಕ್ಕೇರಿ ಹಾಗೂ ಸಂಕೇಶ್ವರ ಪುರಸಭೆಗಳಲ್ಲಿ ಅವಿರೋಧ ಆಯ್ಕೆಗೆ ಒತ್ತು ನೀಡುವ ಮೂಲಕ ನಿರಾಯಾಸವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಡಿತ ಸಾಧಿಸಿದ್ದ ಕತ್ತಿ ಸಹೋದರರು ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಅವರು ನೇರವಾಗಿ ಚುನಾವಣೆ ಅಖಾಢಕ್ಕೆ ಧುಮಕಿದ್ದು ಈ ಬದಲಾವಣೆಗೆ ಪ್ರಮುಖ ಕಾರವೆನ್ನಬಹುದಾಗಿದೆ.
ಇದಲ್ಲದೇ ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣಗಳಲ್ಲಿ ಬಿಜೆಪಿ ಬಲಿಷ್ಟ  ನಾಯಕತ್ವದ ಕೊರತೆ, ಟಿಕೆಟ್ ನೀಡುವಲ್ಲಿ ಗೊಂದಲ, ಆಡಳಿತ ವಿರೋಧಿ ಅಲೆಯೇ ಕತ್ತಿ ಸಹೋದರರ ಹಿನ್ನಡೆಗೆ ಕಾರಣವೆನ್ನುವ ರಾಜಕೀಯ ವಿಶ್ಲೇಷಣೆಗಳು ಕೇಳಬರಲಾರಂಭಿಸಿವೆ.
  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಅಂತಲೆ ಬಿಂಬಿತರಾಗಿರುವ ರಮೇಶ ಕತ್ತಿ ಅವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವಕ್ಷೇತ್ರದ ಪಟ್ಟಣಗಳಲ್ಲಿ ಹಿನ್ನಡೆ ಅನುಭವಿಸಿರುವುದು ಭವಿಷ್ಯದ ರಾಜಕೀಯ ಕುರಿತು ಆತಂಕ ಹುಟ್ಟುವಂತಾಗಿದೆ.
loading...