ಕನ್ನಡದ ಸಾರ್ವಭೌಮತ್ವಕ್ಕೆ ಜನಪ್ರತಿನಿಧಿಗಳಿಂದಲೇ ಧಕ್ಕೆ ಚಿಂಚಣಿ ಶ್ರೀಗಳ ವಿಷಾದ

0
54

ನಿಪ್ಪಾಣಿ 31: ಗಡಿಯಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ ಎಂದು ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮೀಜಿ ಹೇಳಿದರು. ಸ್ಥಳೀಯ ಆಶೀರ್ವಾದ ಸಾಂಸ್ಕೃತಿಕ ಭವನದಲ್ಲಿ ಬುಧವಾರದಂದು ಸಂಜೆ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕೋಡಿ ಮತ್ತು ನಿಪ್ಪಾಣಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಬೆಳಗಾವಿ ಜಿಲ್ಲಾ ಗಡಿ ಹೋರಾಟಗಾರರ ಸಮಾವೇಶದ ಸಮಾರೋಪ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.ಗಡಿಯಲ್ಲಿ ಕನ್ನಡ ಶಾಲೆಗಳನ್ನು ಜೀವಂತ ಮಾಡಿ,ಸರಕಾರಿ ಶಾಲೆಗಳನ್ನು ಕನ್ನಡೀಕರಣಗೊಳಿಸಿ ಎಂಬ ಬೇಡಿಕೆಗಳೊಂದಿಗೆ ಕನ್ನಡಪರ ಹೋರಾಟಗಾರರು ಜನಪ್ರತಿನಿಧಿಗಳ ಮನೆ ಎದುರು ಧರಣಿ ನಡೆಸಬೇಕು.ಮರಾಠಿ,ಮಹಾರಾಷ್ಟ್ರ ವಿರೋಧಿಸಬೇಡಿ ಅವರಿಗೆ ನಮ್ಮ ಕನ್ನಡದ ಪರಿಚಯ ಮಾಡಿ ಕೊಡಿ.ಕನ್ನಡ ಸಂಸ್ಕೃತಿ,ಇತಿಹಾಸ,ಸರಳತೆಯನ್ನು ಪರಿಚಯಿಸಿ.ಸ್ವಾತಂತ್ರ್ಯ ಸಿಗುವ ಮೊದಲು ಕನ್ನಡ ಮರಾಠಿಗರು ಭಾಯಿ-ಭಾಯಿ.ಪ್ರಸ್ತುತ ಕೆಲ ಲೋಪದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ.ಕನ್ನಡದಲ್ಲಿ ಸಹಿ ಮಾಡಿದರೆ ಅಪರಾಧವಲ್ಲ.ಕನ್ನಡದಲ್ಲೇ ಸಹಿ ಮಾಡಿ.ಕನ್ನಡಿಗರ ಮೇಲಿನ ಎಲ್ಲ ಕೇಸ್‌ಗಳನ್ನು ವಾಪಸ್‌ ಪಡೆಯಬೇಕಿರುವುದು ಇಂದಿನ ಅಗತ್ಯ.ಕಳಸಾ-ಬಂಡೂರಿ ಹೋರಾಟಕ್ಕೆ ಜಯ ಸಿಗಲು ಕಾಲ ಕೂಡಿಬಂದಿದೆ ಎಂದರು.ಮುಖ್ಯ ಅತಿಥಿ ಸಾಹಿತಿ ಡಾ.ಗುರುಲಿಂಗ ಕಾಪಸೆ ಮಾತನಾಡಿ,ಕರ್ನಾಟಕದಲ್ಲಿ ವಚನಕಾರರ ಮತ್ತು ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರಿ ಪ್ರಭಾವವಿದೆ.ಕನ್ನಡಕ್ಕೆ ಹೆಚ್ಚಿನ ಜ್ಞಾನಪೀಠಗಳು ಲಭಿಸಿದ್ದು,ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ.ಜಗತ್ತಿನ ಅತ್ಯಂತ ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಒಂದಾಗಿದೆ ಎಂದು ಕೊಂಡಾಡಿದರು.ಸರ್ವಾಧ್ಯಕ್ಷ ಸಿದ್ಧನಗೌಡ ಪಾಟೀಲ ಮಾತನಾಡಿ,ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗಬೇಕು ಎಂದು ಆಗ್ರಹಿಸಿದರು.ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದರು.ಕಸಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್‌, ಪ್ರೊ.ಎಸ್‌.ವೈ.ಹಂಜಿ,ಡಾ.ಗುರುಪಾದ ಮರಿಗುದ್ದಿ, ಪ್ರಾ.ಎಂ.ಬಿ.ಕೋಥಳಿ, ಉಪಪ್ರಾ.ಎಸ್‌.ಜಿ.ಖರಾಬೆ,ರವೀಂದ್ರ ಶೆಟ್ಟಿ ವೇದಿಕೆಯಲ್ಲಿದ್ದರು.ಗಡಿ ಹೋರಾಟಗಾರರಾದ ಬಿ.ಆರ್‌.ಪಾಟೀಲ,ಅನೀಲ ನೇಷ್ಠಿ,ರವೀಂದ್ರ ತೋಟಿಗೇರ,ಸಂಜಯ ಪಾಟೀಲ,ಎಂ.ಡಿ.ಅಲಾಸೆ,ಕಸ್ತೂರಿ ಭಾವಿ,ಎಸ್‌.ಎಲ್‌.ಕಾಮನೆ,ಬಸವರಾಜ ಖಾನಪ್ಪನವರ,ಸಂಜೀವ ಬಡಿಗೇರ ಅವರುಗಳನ್ನು ಸತ್ಕರಿಸಲಾಯಿತು.ವಿದ್ಯಾವತಿ ಜನವಾಡೆ,ಈರಣ್ಣಾ ಶಿರಗಾಂವಿ ನಿರೂಪಿಸಿದರು.ಪ್ರಾ.ದೇವೇಂದ್ರ ಬಡಿಗೇರ ವಂದಿಸಿದರು.

loading...