ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ಬುದ್ಧನ ಬೋಧನೆಗಳನ್ನು ಸ್ಮರಿಸೋಣ- ಪ್ರಧಾನಿ

0
6

ನವದೆಹಲಿ:- ಭಗವಾನ್ ಬುದ್ಧನ ಬೋಧನೆಗಳ ನಿರಂತರ ಪ್ರಸ್ತುತತೆ ಬಗ್ಗೆ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರೋನವೈರಸ್ ವಿರುದ್ಧದ ನಮ್ಮ ಹೋರಾಟದಲ್ಲಿ ಬುದ್ಧನ ಬೋಧನೆಗಳನ್ನು ಸ್ಮರಿಸಬೇಕಾಗಿದೆ ಎಂದು ಹೇಳಿದ್ದಾರೆ.
ವಿಶ್ವದ ಎಲ್ಲ ಭಾಗಗಳ ಬೌದ್ಧ ಸಂಘಗಳ ಸರ್ವೋಚ್ಚ ಮುಖ್ಯಸ್ಥರು ಪಾಲ್ಗೊಂಡಿದ್ದ ವರ್ಚ್ಯುಯಲ್‍ ಪ್ರಾರ್ಥನಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ನಿರಂತರ ಪ್ರಯತ್ನಗಳಿಂದ ಸವಾಲಿನ ಸಂದರ್ಭಗಳನ್ನು ಜಯಿಸಲು ಬುದ್ಧ ನಮಗೆ ಕಲಿಸಿದ್ದಾನೆ. ಹೋರಾಟದಲ್ಲಿ ಎಂದಿಗೂ ಹಿಂದೆ ಸರಿಯಬಾರದು ಎಂಬುದನ್ನು ಬುದ್ಧ ಕಲಿಸಿದ್ದಾನೆ. ಕರೋನವೈರಸ್ ವಿರುದ್ಧದ ನಮ್ಮ ಹೋರಾಟದಲ್ಲಿ ಅವರ ಬೋಧನೆಗಳನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮಾನವೀಯತೆ ಸೇವೆಯ ಸಂದೇಶವನ್ನು ಬುದ್ಧ ಜಗತ್ತಿಗೆ ನೀಡಿದ್ದಾನೆ ಎಂದು ಪ್ರತಿಪಾದಿಸಿರುವ ಮೋದಿ, ಈ ಕಷ್ಟದ ಸಮಯದಲ್ಲಿ ದೇಶ ಮತ್ತು ವಿದೇಶಗಳಲ್ಲಿ ಸಂಕಷ್ಟ ಎದುರಿಸುತ್ತಿರುವವರೊಂದಿಗೆ ಭಾರತ ನಿಸ್ವಾರ್ಥವಾಗಿ ನಿಂತಿದೆ ಎಂದು ಹೇಳಿದ್ದಾರೆ.
ಬುದ್ಧ, ಭಾರತದ ಸಾಕ್ಷಾತ್ಕಾರ ಮತ್ತು ಸ್ವಯಂ ಸಾಕ್ಷಾತ್ಕಾರಗಳ ಸಂಕೇತವಾಗಿದ್ದಾನೆ. ಈ ಸ್ವಯಂ ಸಾಕ್ಷಾತ್ಕಾರದೊಂದಿಗೆ, ಭಾರತ, ಮಾನವೀಯತೆ ಮತ್ತು ಪ್ರಪಂಚದ ಹಿತದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದನ್ನೂ ಹೀಗೆಯೇ ಮುಂದುವರಿಸಲಿದೆ. ಭಾರತ, ಜಗತ್ತಿನಾದ್ಯಂತದ ಇತರ ದೇಶಗಳಿಗೆ ಸಹಾಯ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಕರೋನವೈರಸ್ ಸೋಲಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಾಗಿದೆ.’’ ಎಂದು ಪ್ರಧಾನಿ ಹೇಳಿದ್ದಾರೆ.
ಕೊವಿಡ್‍-19 ಬಿಕ್ಕಟ್ಟಿನ ಮಧ್ಯೆ ಸಮಾಜಕ್ಕೆ ಸೇವೆ ಸಲ್ಲಿಸಲು ಕೆಲಸ ಮಾಡುತ್ತಿರುವ ವಿವಿಧ ಜನರನ್ನು ಗೌರವ ಸೂಚಿಸಿರುವ ಪ್ರಧಾನಿ, ಸಂಕಷ್ಟದ ಸಮಯದಲ್ಲಿ ಅನೇಕರು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಇತರರಿಗೆ ಸಹಾಯ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಅವರನ್ನು ಗೌರವಿಸಬೇಕು ಮತ್ತು ಪ್ರಶಂಸಿಸಬೇಕು ಎಂದು ಹೇಳಿದ್ದಾರೆ.
ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದ ಏಳಿಗೆಗೆ ಭಗವಾನ್ ಬುದ್ಧ ಕೊಡುಗೆ ನೀಡಿದ್ದಾರೆ. ಬುದ್ಧ, ಜ್ಞಾನೋದಯವನ್ನು ಕಂಡು ಇತರರ ಬದುಕಿನಲ್ಲೂ ಬೆಳಕು ಮೂಡಿಸಿದ್ದಾನೆ ಎಂದು ಪ್ರಧಾನಿ ಹೇಳಿದರು.
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ಕ್ರೀಡಾ ಖಾತೆ ರಾಜ್ಯ ಸಚಿವ ಕಿರೆನ್ ರಿಜಿಜು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

loading...