ಕಾಂಗ್ರೆಸ್‌ ಅಭ್ಯರ್ಥಿಯಿಂದ ಹಣ ಹಂಚಿಕೆ ಆರೋಪ: ಅಭ್ಯರ್ಥಿಗಳಿಂದ ಪ್ರತಿಭಟನೆ

0
23

ಕನ್ನಡಮ್ಮ ಸುದ್ದಿ-ದಾಂಡೇಲಿ: ಬಹು ನಿರೀಕ್ಷಿತ ನಗರ ಸಭಾ ಚುನಾವಣೆಯ ಮುನ್ನ ದಿನ ಗುರುವಾರ ರಾತ್ರಿ ಕೆಲವೆಡೆ ಹಣ, ಹೆಂಡ ಹಂಚಿದ ಬಗ್ಗೆ ಮಾಹಿತಿ ವ್ಯಕ್ತವಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ನಗರದ ವಾರ್ಡ್‌ ನಂ:13 ರಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿ ಮನೆ ಮನೆಗೆ ತೆರಳಿ ಹಣ ಹಂಚುತ್ತಿದ್ದಾರೆಂದು ಆರೋಪಿಸಿ.
ಆ ವಾರ್ಡಿನ ಮಿಕ್ಕುಳಿದ ಅಭ್ಯರ್ಥಿಗಳು 14 ನೇ ಬ್ಲಾಕ್‌ ಬಳಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕಾಂಗ್ರೆಸ್‌ ಅಭ್ಯರ್ಥಿ ತಸ್ವರ್‌ ಸೌದಾಗರ ಅವರು ತನ್ನ ಸ್ವಂತ ದ್ವಿಚಕ್ರ ವಾಹನದ ಮೂಲಕ ಮನೆ ಮನೆಗೆ ತೆರಳಿ ಹಣ ಹಂಚುತ್ತಿದ್ದಾರೆಂದು ಅದೇ ವಾರ್ಡಿನ ಸ್ವತಂತ್ರ ಅಭ್ಯರ್ಥಿ ಪಾರೂಕು ಅವರು ನೇರವಾಗಿ ಆರೋಪಿಸಿ ಸ್ಥಳಕ್ಕೆ ಪೊಲೀಸ್‌ ಸಿಬ್ಬಂದಿಯನ್ನು ಕರೆಸಿಕೊಂಡು ತನಿಖೆ ಮಾಡುವಂತೆ ಒತ್ತಾಯಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ, ತನಗೆ ಹಣ ಹಂಚುತ್ತಿದ್ದವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ ಎಂದು ನುಣುಚಿಕೊಂಡು, ತಸ್ವರ್‌ ಸೌದಾಗರ ಅವರನ್ನು ಮೇಲಾಧಿಕಾರಿಗಳು ಬರುವವರೇಗೆ ತಡೆದು ನಿಲ್ಲಿಸಿ ತನಿಖೆಗೊಳಪಡಿಸದಿರುವುದೇ ಉಳಿದ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು. ಸ್ವತಂತ್ರ ಅಭ್ಯರ್ಥಿ ಪಾರೂಕು ಅವರು ಹಣ ಹಂಚಿಕೆಯಲ್ಲಿ ತೊಡಗಿದ್ದ ತಸ್ವರ್‌ ಸೌದಾಗರ ಅವರನ್ನು ಮತ್ತು ಅವರ ವಾಹನವನ್ನು ಪರಿಶೀಲಿಸಿ ಎಂದು ಬೇಡಿಕೊಂಡರೂ ಪೊಲೀಸ್‌ ಸಿಬ್ಬಂದಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರತಿಭಟನೆಗೆ ಕಾರಣವಾಯಿತೆಂದು ಉಳಿದ ಅಭ್ಯರ್ಥಿಗಳ ಉವಾಚ.. ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತಸ್ವರ ಸೌದಾಗರ ಅವರನ್ನು ನೀವೆನೂ ಮಾಡುತ್ತಿದ್ದೀರಿ ಎಂದು ಕೇಳಿದಾಗ, ತಸ್ವರ್‌ ಅವರು ಕೊನೆಯ ದಿನವಾದ ಇಂದು ಮತದಾರರ ಬಳಿ ಕೊನೆಯದಾಗಿ ಮತ ಚಲಾಯಿಸುವಂತೆ ವಿನಂತಿಸಲು ಬಂದಿದ್ದೇನೆಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದರು.
ಇಷ್ಟೊತ್ತಿಗಾಗಲೇ ಅದೇ ವರ್ಡಿನ ಉಳಿದ ಅಭ್ಯರ್ಥಿಗಳಾದ ಪಕ್ಷೇತರರಾಗಿ ಕಣಕ್ಕೀಳಿದಿರುವ ಮೋಹನ ಹಲವಾಯಿ, ಮೌಲಸಾಬ ಹುನಗುಂದ, ಬಿಜೆಪಿ ಅಭ್ಯರ್ಥಿ ಮಂಜುನಾಥ ಪಾಟೀಲ ಅವರುಗಳ ಹಾಗೂ ಅವರ ಬೆಂಬಲಿಗರು ಸ್ಥಳಕ್ಕೆ ಆಗಮಿಸಿ, ಹಣ ಹಂಚಿ ವಾಮಾಮಾರ್ಗದಿಂದ ಚುನಾವಣೆಯಲ್ಲಿ ಗೆಲ್ಲಲು ಹೊರಟಿರುವ ತಸ್ವರ್‌ ಸೌದಾಗರ ಅವರನ್ನು ಡಿಸ್‌ಕ್ವಾಲಿಪೈ ಮಾಡಬೇಕೆಂದು ಪಟ್ಟು ಹಿಡಿದರು. ಜೊತೆಗೆ ಹಣ ಹಂಚುತ್ತಿದ್ದ ತಸ್ವರ ಸೌದಾಗರ್‌ ಅವರನ್ನು ಪೊಲೀಸ್‌ ಸಿಬ್ಬಂದಿ, ಮೇಲಾಧಿಕಾರಿಗಳು ಬರುವವರೆಗೆ ತಡೆದು ನಿಲ್ಲಿಸದೇ ಹೋಗಲು ಬಿಟ್ಟಿದ್ದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿ, ನಗರ ಪೊಲೀಸ್‌ ಠಾಣೆಯ ಪಿಎಸೈ ಉಮೇಶ ಪಾವಸ್ಕರ್‌ ಹಾಗೂ ಚುನಾವಣಾಧಿಕಾರಿಗಳು ಬರುವರೆಗೆ ಪೊಲೀಸ್‌ ಸಿಬ್ಬಂದಿಗೆ ನಡು ರಸ್ತೆಯಲ್ಲೆ ತಡೆದು ನಿಲ್ಲಿಸಿದ್ದರು. ಕೊನೆಗೆ ಪಿಎಸೈ ಉಮೇಶ ಪಾವಸ್ಕರ್‌ ಹಾಗೂ ಚುನಾವಣಾಧಿಕಾರಿ ಡಾ: ನಾಸೀರ್‌ ಅಹ್ಮದ ಜಂಗಬಾಯಿಯವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರು.
ಮತಯಾಚಿಸಲಷ್ಟೆ ಹೋಗಿದ್ದೆ: ತಸ್ವರ್‌ ಸೌದಾಗರ ನಾನು ಹಣ ಹಂಚಲು ಹೋಗಿಲ್ಲ. ನನ್ನ ಮನೆಯ ಹಿಂಬದಿಯಲ್ಲಿರುವ ಕೆಲ ಮನೆಗಳಿಗೆ ಪ್ರಚಾರ ಮಾಡಲು ಹಾಗೂ ಮತಯಾಚಿಸಲು ಹೋಗಿದ್ದು ಹೌದು. ಆದ್ರೆ ವಾಮಾ ಮಾರ್ಗದಿಂದ ಮತ ಪಡೆಯುವ ದುರುದ್ದೇಶ ನನ್ನದಿಲ್ಲ.
ಪ್ರಜಾಪ್ರಭುತ್ವದ ವ್ಯವಸ್ಥೆಗೆ ಗೌರವಕೊಟ್ಟು ಚುನಾವಣೆಯನ್ನು ಎದುರಿಸುತ್ತಿದ್ದೇನೆ ವಿನ: ಹಣದ ಮೂಲಕ ಮತ ಖರೀದಿ ಮಾಡುವ ಜಾಯಮಾನ ನನ್ನದಲ್ಲ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿರುವ ತಸ್ವರ ಸೌದಾಗರ ಅವರು ಆನಂತರ ಪೊಲೀಸ್‌ ಅಧಿಕಾರಿಗಳು, ಚುನಾವಣಾಧಿಕಾರಿಗಳು ನನ್ನ ಮನಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.

loading...