ಕಾಂಗ್ರೆಸ್ ವಲಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

0
8

ಕನ್ನಡಮ್ಮ ಸುದ್ದಿ-ಕೊಪ್ಪಳ: ಜಿಲ್ಲಾ ಪಂಚಾಯತಿಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪದಂತೆ ಅಧ್ಯಕ್ಷರಾಗಿದ್ದ ರಾಜಶೇಖರ್ ಹಿಟ್ನಾಳ ಹಾಗೂ ಉಪಾಧ್ಯಕ್ಷೆ ಲಕ್ಷ್ಮವ್ವ ನಿರಲೋಟಿ ರಾಜಿನಾಮೆಯಿಂದ ತೆರವುಗೊಂಡಿರುವ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಗೆ ಡಿ.28ರಂದು ದಿನ ನಿಗದಿಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಇಲ್ಲಿನ ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬಹುಮತದಿಂದ ಆಡಳಿತದಲ್ಲಿದ್ದು, 5 ವರ್ಷಗಳಲ್ಲಿ 30 ತಿಂಗಳಂತೆ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ, ಅದರಂತೆ ಮೊದಲ ಅವಧಿಗೆ ಎಸ್.ಬಿ.ನಾಗರಳ್ಳಿ ಹಾಗೂ ರಾಜಶೇಖರ ಹಿಟ್ನಾಳ ಅಧ್ಯಕ್ಷರಾಗಿ ಅಧಿಕಾರ ನಡೆಸಿ ರಾಜಿನಾಮೆಯನ್ನು ನೀಡಿದ್ದು, ಉಪಾಧ್ಯಕ್ಷೆಯಾಗಿದ್ದ ಲಕ್ಷ್ಮವ್ವ ಸಿದ್ಧಪ್ಪ ನಿರಲೋಟಿ ಅವರು ಸಹ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದು, ಇನ್ನೂಳಿದ ಅವಧಿಗೆ ಹೊಸದಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಹಾದಿ ಸುಗಮವಾಗಿದ್ದು, ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ತಿಂಗಳಿಂದ ಶುರುವಾಗಿವೆ. ಜಿಲ್ಲಾ ಪಂಚಾಯ್ತಿಯಲ್ಲಿ ಒಟ್ಟು 29 ಸ್ಥಾನಗಳಲ್ಲಿ ಕಾಂಗ್ರೆಸ್ 17, ಬಿಜೆಪಿ 11 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಪಕ್ಷದಲ್ಲಿನ ಒಪ್ಪಂದಗಳ ಪ್ರಕಾರ ಎರಡನೇ ಅವಧಿಗೆ ಗಂಗಾವತಿ ಭಾಗದ ಸದಸ್ಯರಿಗೆ ಅವಕಾಶ ನೀಡಬೇಕು ಎಂದು ಹೇಳಲಾಗುತ್ತಿದ್ದು, ಇದರ ಅನ್ವಯ ಕಾಂಗ್ರೆಸ್ ಪಕ್ಷದ ಹೇರೂರು ಕ್ಷೇತ್ರದ ಅಮರೇಶ ಗೋನಾಳ, ಮತ್ತು ಸಿದ್ದಾಪುರ ಮತಕ್ಷೇತ್ರದ ವಿಶ್ವನಾಥ ರಡ್ಡಿ ಹೊಸಮನಿ ನಡುವೆ ತೀವ್ರ ಪೈಪೆÇೀಟಿ ಇರುವುದು ಕಂಡುಬರುತ್ತಿದೆ.
ಮಾಜಿ ಸಚಿವ ಕನಕಗಿರಿ ಕ್ಷೇತ್ರದ ಮಾಜಿ ಶಾಸಕರು ಆಗಿರುವ ಶಿವರಾಜ ತಂಗಡಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನು ತಮ್ಮ ಬೆಂಬಲಿಗರಿಗೆ ನೀಡಬೇಕು ಎಂಬ ಆಸೆಯನ್ನು ಬಲವಾಗಿ ಹೊಂದಿದ್ದಾರೆ. ಅಮರೇಶ ಗೋನಾಳ ತಂಗಡಗಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಅವರಿಗೆ ಅಥವಾ ವಿಶ್ವನಾಥ್‍ಗೆ ಸ್ಥಾನ ಒಲಿಯಲಿದೆ ಎಂದು ಹೇಳಲಾಗುತ್ತದೆ. ಪಕ್ಷದ ಎಲ್ಲ ಮುಖಂಡರು ಹಾಗೂ ಸದಸ್ಯರೊಂದಿಗೆ ಜೊತೆ ಚರ್ಚೆ ನಡೆಸಿ ಒಮ್ಮತದಿಂದ ಆಯ್ಕೆ ಮಾಡಲಾಗುವುದು ಎಂದು ಶಿವರಾಜ ಶಿವರಾಜ ತಂಗಡಗಿ ಹೇಳುತ್ತಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಮತ್ತು ಗಂಗಾವತಿ ಪ್ರಬಲ ನೀರಾವರಿ ಪ್ರದೇಶಗಳ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದು, ತಮ್ಮ ವರ್ಚಸ್ಸು ವೃದ್ಧಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಅಧಿಕಾರ ವರದಾನ ಮಾಡಿಕೊಳ್ಳುವ ಚಿಂತನೆಯಲ್ಲಿ ತೊಡಗಿರುವ ತಂಗಡಗಿ ಅವರು ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸಲಿರುವರು ಎನ್ನಲಾಗುತ್ತಿದೆ.
ಉಪಾಧ್ಯಕ್ಷ ಸ್ಥಾನ ಕೊಪ್ಪಳ ಅಥವಾ ಯಲಬುರ್ಗಾ ಭಾಗದ ಕಾಂಗ್ರೆಸ್ ಜಿಲ್ಲಾ ಪಂಚಾಯ್ತಿ ಸದಸ್ಯೆಯೊಬ್ಬರಿಗೆ ನೀಡಲು ಚಿಂತನೆ ನಡೆದಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಎರಡು ತಿಂಗಳಿಂದ ಜಿ.ಪಂ.ನ ಸ್ಥಾಯಿ ಸಮಿತಿಗಳಿಗೆ ಹೊಸ ಅಧ್ಯಕ್ಷರುಗಳನ್ನು ಆಯ್ಕೆ ಮಾಡಿದ್ದು, ಪ್ರಸ್ತುತ ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತಂತ್ರಗಾರಿಕೆ ನಡೆಸಿದೆ. ಕಲಬುರ್ಗಿಯ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ಡಿ.28ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿ ಪ್ರಕಾರ ಚುನಾವಣೆ ನಡೆಯಲಿದೆ. ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಮಹಿಳೆ (ಸಾಮಾನ್ಯ) ಮೀಲಸಿದೆ. ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನ ಪ್ರತಿಷ್ಠೆಯ ವಿಷಯವಾಗಿದ್ದು, ಕಾಂಗ್ರೆಸ್‍ನಲ್ಲಿರುವ ವಿವಿಧ ಬಣದಲ್ಲಿ ತೀವ್ರ ರಾಜಕೀಯ ಚಟುವಟಿಕೆ ನಡೆಯುತ್ತಿದ್ದು, ತಮ್ಮ ಆಸ್ತಿತ್ವಕ್ಕಾಗಿ ಹೆಣಗಾಡುತ್ತಿರುವರು ಎಂದು ತಿಳಿದು ಬಂದಿದೆ.

loading...