ಕಾಂಗ್ರೆಸ್ ಶಕ್ತಿ ಕುಂದಿಲ್ಲ: ಬಸವರಾಜ್ ಹಿಟ್ನಾಳ್

0
24

ಕನ್ನಡಮ್ಮ ಸುದ್ದಿ-ಗಂಗಾವತಿ: ಜನಮನದಲ್ಲಿ ಚಿರಸ್ಥಾಯಿಯಾಗಿರುವ ಕಾಂಗ್ರೆಸ್‍ತನ್ನ ಶಕ್ತಿ ಕಳೆದುಕೊಂಡಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಡಿಸಿಸಿ ಅಧ್ಯಕ್ಷ ಬಸವರಾಜ್ ಹಿಟ್ನಾಳ್ ಹೇಳಿದರು.
ನಗರದ ಅನ್ಸಾರಿ ಗೃಹ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಗರಸಭೆ ಚುನಾವಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಆಂತರಿಕವಾಗಿ ಭಿನ್ನಾಭಿಪ್ರಾಯ ಹೊಂದಿದ ಪಕ್ಷದ ಪ್ರಮುಖರಿಂದಲೇ ಪಕ್ಷಕ್ಕೆ ಹಾನಿಯಾಗಿದೆ, ಜಿಲ್ಲೆಯ ಐದು ಸ್ಥಾನಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವರವಾಗುವ ಲಕ್ಷಗಳಿದ್ದವು ಆದರೆ ಬೆನ್ನಿಗೆ ಚೂರಿ ಹಾಕುವ ಜನರಿಂದಾಗಿ ಎಂಎಲ್‍ಎ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಯಕರ್ತರು ದೃತಿಗೆಡಬೇಡಿ ಯಾರೇ ಅಭ್ಯರ್ಥಿಗಳಾದರೂ ಪಕ್ಷಕ್ಕೆ ಗೆಲುವು ತಂದು ಕೊಡುವ ನಿಟ್ಟಿನಲ್ಲಿ ಶ್ರಮವಹಿಸಿ, ನಿಷ್ಠಾವಂತೆ ಕಾರ್ಯಕರ್ತರನ್ನು ಪಕ್ಷ ಎಂದೂ ಕಡೆಗಣಿಸಲ್ಲ, ಪಕ್ಷಕ್ಕೆ ದ್ರೋಹ ಬಗೆದವರಿಗೆ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಭಟ್ ಮಾತನಾಡಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕಾರ್ಯ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದ್ದು, ಎಲ್ಲ ಸಮುದಾಯಗಳಿಗೆ ಸೂಕ್ತ ಪ್ರಾತಿನಿದ್ಯ ನೀಡುವುದರೊಂದಿಗೆ ಪಕ್ಷ ತನ್ನ ಮೂಲ ಆಶಯವನ್ನು ಇನ್ನೂ ಪಾಲಿಸುತ್ತಿದೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ಗುಜ್ಜಲ ನಾಗರಾಜ್ ಮಾತನಾಡಿ, ಪಕ್ಷ ನಿಷ್ಠರನ್ನು ಸೋಲಿಸುವುದಕ್ಕಾಗಿಯೇ ಕೆಲವೊಂದು ವರ್ಗ ಸನ್ನದ್ಧವಾಗಿತ್ತದೆ ದ್ರೋಹದ ಕೆಲಸ ಮಾಡುವವರು ಎಂದೂ ಕೂಡಾ ಪ್ರಗತಿ ಕಾಣುವುದಿಲ್ಲ, ಅನ್ಸಾರಿ ಜನ್ರಪೀಯ ಮತ್ತು ಅಭಿವೃದ್ಧಿಯ ಹರಿಕಾರ ಇಂಥ ನಾಯಕನನ್ನು ಸೋಲಿಸುವ ಮುಖೇನ ಪಕ್ಷಕ್ಕೆ ಬಹುದೊಡ್ಡ ಹಾನಿ ಎಸಗಲಾಗಿದೆ, ಅನ್ಸಾರಿಯವರು ಚುನಾವಣೆಯಲ್ಲಿ ಜಯ ಸಾಧಿಸಿದ್ದರೆ ಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದರು ಅವರಲ್ಲಿರುವ ಸಾಮಥ್ರ್ಯವನ್ನು ನಾನು ಕಂಡಿದ್ದೇನೆ ಎಂದು ಗುಣಗಾನ ಮಾಡಿದರು.ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ಪ್ರಧಾನಿ ಮೋದಿ ನಿಷ್ಕಳಂಕಿತ ರಾಜಕಾರಣಿ ಎಂದು ಸಾರಲಾಗುತ್ತಿದೆ, ಆದರೆ 35 ಸಾವಿರ ಕೋಟಿ ರೂ ಹಗರಣದಲ್ಲಿ ಅವರ ಹೆಸರು ಕೇಳಿ ಬರುತ್ತಿದೆ, ಅಬ್ಬರದ ಪ್ರಚಾರವೇ ವಿನಾಃ ಕೃತಿ ಕಡಿಮೆ ಎಂದು ಟೀಕಿಸಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಾಮೀದ್‍ಸಾಬ್ ಮನಿಯಾರ್ ಮಾತನಾಡಿ, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ ಆದರೆ ಟಿಕೆಟ್ ದೊರಕುವುದು ಒಬ್ಬರಿಗೆ ಮಾತ್ರ ಆದ್ದರಿಂದ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಾಗುವುದು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬೇಡಿ ಪಕ್ಷ ತೆಗೆದುಕೊಳ್ಳುವ ಕ್ರಮದಿಂದಾಗಿ ಮುಂದೆ ಅಧಿಕಾರ ವಂಚಿತರಾಗುವುದಲ್ಲದೆ, 3 ರಿಂದ 5 ವರ್ಷಗಳ ವರೆಗೆ ಉಚ್ಛಾಟಗೊಳ್ಳುವ ಸಾಧ್ಯತೆಗಳಿದ್ದು ನಿಗಮ ಮಂಡಳಿ ಇತರೆ ನಾಮಿನೇಟ್ ಹುದ್ದೆಗಳನ್ನು ನೀಡುವುದರೊಂದಗೆ ಪಕ್ಷಕ್ಕೆ ದುಡಿದವರಿಗೆ ಸೂಕ್ತ ಸ್ಥಾನಮಾನ ಕೊಡಲಾಗುತ್ತದೆ ಎಂದು ಭರವಸೆ ನಿಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮನೋಹರ ಸ್ವಾಮಿ, ರುದ್ರೇಶ್ ಡ್ಯಾಗಿ, ದಾನಪ್ಪ ದರೋಜಿ, ಶೈಲಜಾ ಹಿರೇಮಠ, ಮಲ್ಲಮ್ಮ ಕುರಿತಲೆ, ನವಾಬ್‍ಸಾಬ್ ಸೇರಿದಂತೆ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.

loading...