ಕಾಡುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಕೋಮಾರ

0
23

ಕನ್ನಡಮ್ಮ ಸುದ್ದಿ-ಯಲ್ಲಾಪುರ: ವರ್ತಮಾನದ ಆಗುಹೋಗುಗಳ ಬಗೆಗೆ ಸದಾಕಾಲ ವಿದ್ಯಾರ್ಥಿಗಳು ಲಕ್ಷವಿರಿಸಬೇಕು. ಸುತ್ತಮುತ್ತಲಿನ ಪರಿಸರದ ಬದಲಾವಣೆಗಳನ್ನು ಗಮನಿಸುವ ಗುಣ ಹೊಂದಿರಬೇಕು ಹಾಗಾದಾಗ ಮಾತ್ರ ಪರಿಸರದ ಜೊತೆ ಬದುಕಬಹುದು.ಎಂದು ಉಪವಲಯರಣ್ಯಾಧಿಕಾರಿ ಪ್ರಕಾಶ ಯರಗಟ್ಟಿ ಹೇಳಿದರು.
ಅವರು ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಇಡಗುಂದಿ ವಲಯ ಅರಣ್ಯ ಇಲಾಖೆ, ಸರ್ವೋದಯ ಪ್ರೌಢಶಾಲೆ ಸಂಯುಕ್ತವಾಗಿ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪರಂಪರೆಯಿಂದ ಪರಿಸರ ರಕ್ಷಣೆಯನ್ನು ಹಿರಿಯರು ಮಾಡಿರುವ ಕಾರಣ ನಾವು ನೆಮ್ಮದಿಯಿಂದ ಇರಲು ಸಾಧ್ಯ. ನಮ್ಮ ಸುತ್ತಲಿನ ವನ್ಯ ಜೀವಿಗಳ ಕುರಿತಾದ ಕಾಳಜಿ ಅತೀ ಮುಖ್ಯ ಎಂದರು..
ಶಿಕ್ಷಣ ಸಮಿತಿಯ ಅಧ್ಯಕ್ಷ ಗ ನಾ ಕೋಮಾರ ಅಧ್ಯಕ್ಷತೆವಹಿಸಿ ಮಾತನಾಡಿ ಮನುಷ್ಯನು ತಾನು ಬದುಕುವುದರ ಜೊತೆಗೆ ಪೃಕೃತಿಯನ್ನೂ ರಕ್ಷಿಸಬೇಕು. ಉತ್ತಮ ಪರಿಸರವಿದ್ದಾಗ ಮಾತ್ರ ಉತ್ತಮ ಆರೋಗ್ಯವೂ ಲಭ್ಯವಾಗಲಿದೆ. ಕಾಡುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕು ಎಂದರು.
ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಪ್ರಶಾಂತ ಪ್ರಾಸ್ತಾವಿಕ ಮಾತನಾಡಿ ಪ್ಲಾಸ್ಟಿಕ್‌ ಮುಕ್ತವಾದ ಪರಿಸರವು ಇಂದಿನ ತುರ್ತು ಅಗತ್ಯವಾಗಿದೆ. ಪಶ್ಚಿಮ ಘಟ್ಟದ ಪ್ರದೇಶವು ಅಪರೂಪದ ಜೀವ ವೈವಿದ್ಯಗಳನ್ನು ಹೊಂದಿದ್ದು ಸಂಶೋಧನೆಗಳಿಗೆ ಆಕರವಾಗಿದೆಎಂದರು.
ಮುಖ್ಯಾಧ್ಯಾಪಕ ಎಮ್‌ ಕೆ ಭಟ್ಟ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಒಕ್ಕೂಟದ ಅಧ್ಯಕ್ಷ ಶ್ರೀಪಾದ ಗದ್ದೆ ಕಳಚೆ, ಜಿ ಎನ್‌ ಕೋಮಾರ ,ಉಪಸ್ಥಿತರಿದ್ದರು. ಚೈತ್ರಾ ಮತ್ತು ಚೈತನ್ಯ ಸಂಗಡಿಗರು ಪರಿಸರಗೀತೆ ಹಾಡಿದರು. ಎಮ್‌ ಕೆ ಭಟ್ಟ ಸ್ವಾಗತಿಸಿದರು., ಸೇವಾ ಪ್ರತಿನಿಧಿ ರಾಜೇಶ್ವರಿ ಹೆಗಡೆ ನಿರೂಪಿಸಿದರು. ಶಿಕ್ಷಕ ಜಿ ಎಸ್‌ ಗಾಂವ್ಕಾರ ವಂದಿಸಿದರು. ನಂತರ ಶಾಲಾ ಕೈತೋಟದಲ್ಲಿ ಮಕ್ಕಳು, ಸಾರ್ವಜನಿಕರು,ಮಹಿಳಾ ಸಂಘದ ಪದಾಧಿಕಾರಿಗಳು ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಿದರು.

loading...