ಕಾಯಕದಲ್ಲಿ ದೈವತ್ವ ಕಂಡ ನಿಜಶರಣ ಅಂಬಿಗರ ಚೌಡಯ್ಯ

0
3

ಗದಗ: ನಿಜ ಶರಣ ಅಂಬಿಗರ ಚೌಡಯ್ಯನವರು ಕಾಯಕದಲ್ಲಿ ದೈವತ್ವ ಕಂಡವರು. ಜಾತಿ, ಮತ, ಪಂಥದ ಹೆಸರಿನಲ್ಲಿ ನಡೆಯುತ್ತಿರುವ ಮೂಡನಂಬಿಕೆ ಕಂದಾಚಾರಗಳನ್ನು ತೊಲಗಿಸಿ ವಚನಗಳ ಮೂಲಕ ಸಮಾಜದಲ್ಲಿ ಲೋಪ ದೋಷಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಶ್ರಮಿಸಿದವರು ಎಂದು ಗದಗ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎಸ್‌.ಪಿ. ಬಳಿಗಾರ ಅವರು ನುಡಿದರು.
ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ಇವತ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 12 ನೇ ಶತಮಾನದವರಾದ ಅಂಬಿಗರ ಚೌಡಯ್ಯನವರು ದಿಟ್ಟ ನಿಷ್ಟುರ ವಚನಕಾರರಾಗಿದ್ದರು. ಅವರ ಹೆಸರೇ ವಚನಗಳ ನಾಮಾಂಕಿತವಾಗಿದ್ದು, ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಎನ್ನುವ ಹಾಗೆ ಅವರ ವಚನಗಳು ನೇರ ನಿಷ್ಟುರವಾಗಿದ್ದರೂ ವಚನಗಳಲ್ಲಿನ ಸಾರಗಳು ಅರ್ಥಪೂರ್ಣವಾಗಿದ್ದು ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ಜಿ.ಪಂ. ಅಧ್ಯಕ್ಷ ಎಸ್‌.ಪಿ. ಬಳಿಗಾರ ತಿಳಿಸಿದರು.
ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ. ಸಂಕನೂರ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ ಮಾತನಾಡಿ ಅಂಬಿಗರ ಚೌಡಯ್ಯನವರು ನಾಡು ಕಂಡಂತಹ ಅಪರೂಪದ ಶರಣರು. ಜಾತ್ಯಾತೀತ ಸಮಾಜ ಕಟ್ಟಬೇಕೆನ್ನುವ ಉದ್ದೇಶದಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಸಮಾಜದಲ್ಲಿನ ಮೂಡನಂಬಿಕೆ, ಡಾಂಬಿಕತನ, ಲೋಪದೋಷಗಳನ್ನು ತೊಲಗಿಸಿ ನೇರವಾದ, ನಿಷ್ಟುರವಾದ ವಚನಗಳನ್ನು ರಚಿಸುವುದರ ಮೂಲಕ ಸಮಾಜ ಸುಧಾರಣೆಗೆ ಹಾಗೂ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಕಾಯಕತತ್ವ, ಸದಾಚಾರ, ಸನ್ಮಾರ್ಗದಿಂದ ಸಂಪಾದನೆ, ಇದ್ದುದರಲ್ಲಿ ತೃಪ್ತಿಪಡುವುದರ ಮೂಲಕ ಆದರ್ಶ ಬದುಕನ್ನು ಸಾಗಿಸಬೇಕು ಎನ್ನುವುದೇ ಅಂಬಿಗರ ಚೌಡಯ್ಯನವರ ಸಂದೇಶವಾಗಿತ್ತು ಎಂದು ಎಸ್‌.ವಿ. ಸಂಕನೂರ ತಿಳಿಸಿದರು.
ಕಲಾಶ್ರೀ ಮಲ್ಲಿಕಾರ್ಜುನ ಹಾದಿಯವರು ಮಾತನಾಡಿ ಅಂಬಿಗರ ಚೌಡಯ್ಯ ನವರು ವೃತ್ತಿಯಿಂದ ಡೋಣಿ ನಡೆಸುವ ಕಾಯಕದವರಾಗಿದ್ದರು. ವೃತ್ತಿ ಕಾಯಕದ ಬಗ್ಗೆ ಅಪಾರ ಗೌರವ ಹೊಂದಿದ್ದರು. ತಾನು ಕೇವಲ ತುಂಬಿದ ಹೊಳೆಯಲ್ಲಿ ಡೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ. ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯವುಳ್ಳ ಅಂಬಿಗ ಎಂದು ತಮ್ಮ ವಚನದಲ್ಲಿ ಹೇಳಿದ್ದಾರೆ. ಕಾವಿ ಬಟ್ಟೆ ತೊಟ್ಟರೆ ಮಾತ್ರ ಶರಣರಲ್ಲ. ವ್ಯಕ್ತಿಯಲ್ಲಿರುವ ಶೀಲವಂತಿಕೆ ಬಹುಮುಖ್ಯ. ನಾಟಕೀಯವಾಗಿ, ಡಾಂಬಿಕವಾಗಿ ಕಾವಿ ತೊಡುವುದಕ್ಕಿಂತ ಮನುಷ್ಟ ಯಾವ ರೀತಿ ಆದರ್ಶ ಜೀವನವನ್ನು ಸಾಗಿಸಬೇಕೆಂದು ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಾರಿದ್ದಾರೆ. ಸಮಾಜದ ಸುಧಾರಣೆಗಾಗಿ ನೇರ ನಿಷ್ಟುರ ವಚನಗಳನ್ನು ರಚಿಸಿ ಮೂಡನಂಬಿಕೆ, ಕಂದಾಚಾರಗಳ ನಿರ್ಮೂಲನೆಯಲ್ಲಿ ತೊಡಗಿದರು ಎಂದು ತಿಳಿಸಿ ಅಂಬಿಗರ ಚೌಡಯ್ಯನವರ ಜೀವನ ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಫುಟ್‌ಬಾಲ್‌ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿನೋದ ಜಾಲಗಾರ, ಹನುಮಂತಪ್ಪ ಜಾಲಗಾರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರರಾದ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿಯ ಕಾರ್ಯದರ್ಶಿ ಜೆ.ಬಿ. ಗಾರವಾಡ, ಸಿ.ಬಿ. ಬಾರಕೇರ, ಬಿ.ಜಿ. ಬಾರಕೇರ, ಲಕ್ಷ್ಮಣ ಬಾರಕೇರ, ಹೂಗಾರ, ಹಿರೇಮಠ, ಸಮುದಾಯದ ಗಣ್ಯರು, ಪದಾಧಿಕಾರಿಗಳು, ಹಿರಿಯರು ಉಪಸ್ಥಿತರಿದ್ದರು.

loading...