ಕಾರವಾರ ಉದ್ಯೋಗ ಮೇಳ ಆಯೋಜನೆ ಕುರಿತು ಬೆಂಗಳೂರಿನಲ್ಲಿ ಸಚಿವರ ಸಭೆ

0
78

ಕಾರವಾರ : ಕಾರವಾರದಲ್ಲಿ ನವೆಂಬರ್ 12ಮತ್ತು 13ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳವನ್ನು ಸಮರ್ಪಕವಾಗಿ ಆಯೋಜಿಸುವ ಕುರಿತು ಸಮಾಲೋಚನೆ ನಡೆಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ಹಿರಿಯ ಅಧಿಕಾರಿಗಳ ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳ ಸಮಾಲೋಚನಾ ಸಭೆಯನ್ನು ಸೋಮವಾರ ನಡೆಸಿದರು.
ಬೆಂಗಳೂರಿನ ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಸಚಿವ ರುದ್ರಪ್ಪ ಲಮಾಣಿ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಉದ್ಯೋಗ ಮೇಳ ನೋಡಲ್ ಅಧಿಕಾರಿ ಸದಾಶಿವ ಪ್ರಭು, ಆಳ್ವ ಫೌಂಡೇಶನ್‍ನ ವಿವೇಕ ಆಳ್ವ, ಕಾಸಿಯಾ, ಫಿಕ್ಕಿ, ಅವೇಕ್, ಅಸೋಚಾಂ, ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ವಿವಿಧ ವಾಣಿಜ್ಯ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಚಿವ ಆರ್.ವಿ.ದೇಶಪಾಂಡೆ ಅವರು ಮಾತನಾಡಿ, ಕಾರವಾರ ಉದ್ಯೋಗ ಮೇಳದ ಗರಿಷ್ಟ ಪ್ರಯೋಜನ ಯುವಜನತೆಗೆ ಸಿಗುವಂತೆ ಮಾಡಬೇಕಿದೆ. ಇದಕ್ಕಾಗಿ ಬೆಂಗಳೂರಿನಲ್ಲಿರುವ ಎಲ್ಲಾ ಕ್ಷೇತ್ರಗಳ ಪ್ರಮುಖ ಕಂಪೆನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಲಾಗುವುದು. ಈಗಾಗಲೇ ಈ ಕುರಿತು ವೆಬ್‍ಸೈಟ್ ತೆರೆಯಲಾಗಿದ್ದು, ಇದರಲ್ಲಿ ಆಸಕ್ತ ಕಂಪೆನಿಗಳು ಹೆಸರನ್ನು ನೋಂದಾಯಿಸಬೇಕು. ವಾಣಿಜ್ಯ ಸಂಘ ಸಂಸ್ಥೆಗಳು ಸಹ ಉದ್ಯೋಗ ಮೇಳದ ಯಶಸ್ಸಿಗೆ ಕೈಜೋಡಿಸಬೇಕು. ನೆರೆಯ ಮುಂಬೈ, ಗೋವಾದಿಂದಲೂ ಕಂಪೆನಿಗಳನ್ನು ಮೇಳಕ್ಕೆ ಆಹ್ವಾನಿಸಲಾಗುತ್ತಿದೆ ಎಂದರು.
ವೆಬ್‍ಸೈಟ್‍ನಲ್ಲಿ ಉದ್ಯೋಗಾಕಾಂಕ್ಷಿಗಳಿಗೂ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ನೋಂದಾವಣೆ ಕಾರ್ಯ ಆರಂಭವಾಗಿದೆ. ಹೆಸರು ನೋಂದಾಯಿಸಿದವರಿಗೆ ಓರಿಯೆಂಟೇಶನ್ ತರಗತಿಗಳನ್ನು ಬ್ಯಾಚ್‍ವಾರು ಆಯೋಜಿಸಲಾಗುವುದು. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸೂಕ್ತ ತರಬೇತಿ ಹಾಗೂ ಕೌಶಲ್ಯಗಳು, ಸಂವಹನ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು. ಉದ್ಯೋಗ ಮೇಳದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಉದ್ಯೋಗ ಮೇಳ ಆಯೋಜನೆಯ ರೂಪುರೇಶೆಗಳನ್ನು ವಿವರಿಸಿದರು.

loading...

LEAVE A REPLY

Please enter your comment!
Please enter your name here