ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣ ಕಾರ್ಮಿಕ ಸಂಘಟನೆಗಳಿಗೆ ನೀಡದಂತೆ ಆಗ್ರಹ

0
22

ದಾಂಡೇಲಿ: ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಕನಿಷ್ಟ ವೇತನದ ಹಿನ್ನಲೆಯಲ್ಲಿ ಉಚ್ಚ ನ್ಯಾಯಾಲಯದ ದಿ: 29/03/2019 ರ ಆದೇಶದಂತೆ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ವೇತನದ ಬಾಕಿ (ಅರಿಯರ್ಸ್‌) ಹಣದಲ್ಲಿ ಕಡಿತ ಮಾಡಿ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿಯಲ್ಲಿ ಸ್ಥಾನ ಪಡೆದ ಕಾರ್ಮಿಕ ಸಂಘಟನೆಗಳಿಗೆ ನೀಡಲು ಮುಂದಾಗಿರುವುದನ್ನು ವಿರೋಧಿಸಿ, ಕಾರ್ಮಿಕರಿಗೆ ಸಿಗಬೇಕಾದ ಬಾಕಿ ಹಣ ಕಾರ್ಮಿಕರಿಗೆ ನೀಡಬೇಕೆಂದು ಆಗ್ರಹಿಸಿ ನಗರದ ಬ್ಲಾಕ್‌ ಕಾಂಗ್ರೆಸ್‌ ಕಾಗದ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್‌ ಅವರಿಒಗೆ ಲಿಖಿತ ಮನವಿ ನೀಡಿ ಆಗ್ರಹಿಸಿದೆ.
ಈ ಬಗ್ಗೆ ಸೋಮವಾರ ನಗರದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ ತಂಗಳ ಅವರು ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಕಾರ್ಮಿಕರಿಗೆ ಕನಿಷ್ಟ ವೇತನದಲ್ಲಿ ಆದ ಹೆಚ್ಚಳವನ್ನು ತಕ್ಷಣ ಅವರಿಗೆ ನೀಡುವುದರ ಜೊತೆಗೆ ಅವರಿಗೆ ಬರಬೇಕಾದ ಬಾಕಿ (ಅರಿಯರ್ಸ್‌) ಮೊತ್ತಕ್ಕೆ ಶೇಕಡಾ 6% ರಷ್ಟು ಬಡ್ಡಿ ಹಾಕಿ ನೀಡುವಂತೆ ಆದೇಶಿಸಿದ್ದು, ಆ ಪ್ರಕಾರವಾಗಿ ವೆಸ್ಟ್‌ ಕೊಸ್ಟ್‌ ಪೇಪರ್‌ ಮಿಲ್‌ ನವರು ಈಗಾಗಲೇ ಕಾರ್ಮಿಕರಿಗೆ ಕನಿಷ್ಟ ವೇತನದಲ್ಲಿ ಆದ ಹೆಚ್ಚಳವನ್ನು ಏಪ್ರಿಲ್‌ 2019 ನೇಯ ತಿಂಗಳಿನಿಂದ ಕಾರ್ಮಿಕರಿಗೆ ನೀಡುತ್ತಿರುವುದು ಸಂತಸದ ಸಂಗತಿ ಮತ್ತು ಸ್ವಾಗತಾರ್ಹವಾಗಿದೆ ಎಂದು ಸೈಯದ ತಂಗಳ ಹೇಳಿದರು.
ಆದರೆ ಈ ಮಧ್ಯೆ ಹಲವು ಕಾರ್ಮಿಕರು ನಮ್ಮ ಬಳಿ ಬಂದು ಅವರಿಗೆ ಬರಬೇಕಾದ ಕನಿಷ್ಟ ವೇತನದ ಬಾಕಿ ಮೊತ್ತದಲ್ಲಿ ಕಾಗದ ಕಾರ್ಖಾನೆಯವರು ಹಣ ಕಡಿತಮಾಡಿ ಜಂಟಿ ಸಂಧಾನ ಸಮಿತಿಯಲ್ಲಿ ಸ್ಥಾನ ಪಡೆದ ಕಾರ್ಖಾನೆಯ ಕಾರ್ಮಿಕ ಸಂಘಟನೆಗಳಿಗೆ ಸಂಗ್ರಹಿಸಿ ನೀಡುವವರಿರುವುದು ತಿಳಿದು ಬಂದಿದೆ. ಇದರಿಂದಾಗಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿರುತ್ತಾರೆ. ಈ ವಿಷಯವು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಂದಿರುತ್ತದೆ. ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರ ಪಾಲಿನ ಹಣದಲ್ಲಿ ಕಡಿತಮಾಡಿ ನೇರವಾಗಿ ಕಾರ್ಮಿಕ ಸಂಘಟನೆಗಳಿಗೆ ನೀಡುವ ಕ್ರಮವು ಸರಿಯಾದುದಲ್ಲ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಸೈಯದ ತಂಗಳ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಆಯಾ ಕಾರ್ಮಿಕ ಸಂಘಟನೆಗಳು ಕಾರ್ಮಿಕರಿಗಾಗಿ ಕೆಲಸ ಮಾಡಲು ಕಾರ್ಮಿಕರಿಂದ ಸದಸ್ಯತ್ವದ ಮೂಲಕ ಹಣವನ್ನು ಪಡೆದುಕೊಂಡಿರುತ್ತವೆ. ಹಾಗೂ ಅದೇ ಹಣದಲ್ಲಿ ಕಾರ್ಮಿಕ ಪರವಾಗಿ ಕೆಲಸ ಮಾಡಬೇಕಾಗಿರುತ್ತದೆ. ಒಂದಾನುವೇಳೆ ಕಾರ್ಮಿಕರ ಪರವಾಗಿ ಕೆಲಸ ಮಾಡಲು ಹೆಚ್ಚಿನ ಹಣ ಬೇಕಾದಲ್ಲಿ ಕಾರ್ಮಿಕರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸುವುದು ವಾಡಿಕೆಯಾಗಿರುತ್ತದೆ. ಕನಿಷ್ಟ ವೇತನದಲ್ಲಿ ಆದ ಹೆಚ್ಚಳವು ರಾಜ್ಯ ಸರ್ಕಾರದ ಅಧಿಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಆಗಿದ್ದು, ಇದರಲ್ಲಿ ನೇರವಾಗಿ ಕಾರ್ಮಿಕ ಸಂಘಟನೆಗಳ ಪಾಲು ಇರುವುದಿಲ್ಲ. ಈ ಕಾರಣದಿಂದಾಗಿ ಕಾರ್ಮಿಕರಿಗೆ ನೀಡುವ ಬಾಕಿ (ಅರಿಯರ್ಸ್‌) ನಲ್ಲಿ ಯಾವುದೇ ರೀತಿಯ ಹಣವನ್ನು ಸಂಗ್ರಹಿಸಿ ಕಾರ್ಮಿಕ ಸಂಘಟನೆಗಳಿಗೆ ನೀಡಬಾರದೆಂದು ಮನವಿ ನೀಡಲಾಗಿದೆ ಎಂದು ತಂಗಳ ಹೇಳಿದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಹಾಗೂ ಪಕ್ಷದ ವಕ್ತಾರ ಆದಂ ದೇಸೂರು, ಪಕ್ಷದ ಉಪಾಧ್ಯಕ್ಷರುಗಳಾದ ವಿ.ಆರ್‌.ಹೆಗಡೆ, ಕರೀಂ ಅಜ್ರೇಕರ ಉಪಸ್ಥಿತರಿದ್ದರು.

loading...