ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿ: ಶಾಸಕ ಪರಣ್ಣ

0
22

ಕನ್ನಡಮ್ಮ ಸುದ್ದಿ-ಗಂಗಾವತಿ: ಈ ಭತ್ತದ ನಾಡಿನಲ್ಲಿ ಜು.30 ಮತ್ತು 31 ರಂದು ಎರಡು ದಿನಗಳ ಕಾಲ 6ನೇ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇದರ ಯಶಸ್ವಿಗಾಗಿ ಅಧಿಕಾರಿಗಳು ಶ್ರಮಿಸಬೇಕು ಎಂದು ಸಮ್ಮೇಳನ ಸಮಿತಿಯ ಗೌರವ ಅಧ್ಯಕ್ಷ, ಶಾಸಕ ಪರಣ್ಣ ಮುನವಳ್ಳಿ ಶುಕ್ರವಾರ ತಿಳಿಸಿದರು.
ಮಂಥನ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಾಸ್ಯ ದಿಗ್ಗಜ ಬೇವಿನಾಳ ಪ್ರಾಣೇಶರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪ್ರಾಣೇಶ ಅವರು ನಮ್ಮ ಭತ್ತದ ನಾಡಿನ ಸುವಾಸನೆಯನ್ನು ದೇಶ ವಿದೇಶಗಳಲ್ಲಿ ಪ್ರಚುರ ಪಡಿಸಿದ್ದಾರೆ. ಇವರು ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಜವಾಬ್ದಾರಿಗಳು ಸಮ್ಮೇಳನ ಅದ್ಧೂರಿಯಾಗಿ ನಡೆಯಲು ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದು ಹೇಳಿದ ಶಾಸಕ ಪರಣ್ಣ, ಈಶಾನ್ಯ ಸಾರಿಗೆ ನಿಗಮದವರು ಎರಡು ದಿನಗಳ ಕಾಲ ಉಚಿತವಾಗಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಉಚಿತ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು. ನಗರಸಭೆ ಸಮ್ಮೇಳನದ ಹಿಂದಿನ ದಿನದಿಂದ ಎಲ್ಲ ವಾರ್ಡ್‍ಗಳ ಸ್ವಚ್ಛತೆ ಮತ್ತು ಚರಂಡಿಗೆ ಕ್ರಿಮಿ ನಾಶಕ ಸಿಂಪಡಿಸಬೇಕು ಮತ್ತು ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳಿಗೆ, ಅಧಿಕಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಳನ್ನು ಸ್ಥಬ್ದ ಚಿತ್ರ ಸಮೇತ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಬೇಕು ಎಂದು ಹೇಳಿದರು.
ಸಮ್ಮೇಳನ ಹಮ್ಮಿಕೊಂಡಿರುವ ಮುಖ್ಯ ಸ್ಥಳದ ವೇದಿಕೆಗೆ ಶ್ರೀಚನ್ನಬಸವಸ್ವಾಮಿ ಮಹಾಮಂಟಪ ಎಂದು ಹೆಸರಿಡಬೇಕು ಎಂದು ಮುನವಳ್ಳಿ ಹೇಳಿದರು.
ಪಟ್ಟಣದಲ್ಲಿ 7 ಮಹಾದ್ವಾರಗಳನ್ನು ನಿರ್ಮಿಸಿ ಅವುಗಳಿಗೆ ಗಂಡುಗಲಿ ಕುಮಾರರಾಮ, ಹೇರೂರು ವಿರುಪನಗೌಡ ತಾತಾ, ಬಸವರಾಜ ಕೋಟೆ, ಚಂದ್ರಶೇಖರ ನೂಲ್ವಿ, ಭಾವ್ಯಕ್ಯನಿಧಿ ಎಂ.ಎಸ್.ಅನ್ಸಾರಿ, ಸಿಬಿಎಸ್ ಬ್ಯಾಂಕ ಸಂಸ್ಥಾಪಕ ಅಧ್ಯಕ್ಷ, ಸಹಕಾರಿ ಧುರೀಣ ಸಿದ್ದಾಪುರ ಮಂಜುನಾಥ ಮತ್ತು ಅಂದಾನಕುಮಾರ ಹೆಸರಿಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕು ಅಧ್ಯಕ್ಷ ಎಸ್.ಬಿ.ಗೊಂಡಬಾಳ, ತಹಶೀಲ್ದಾರ ಎಲ್.ಡಿ.ಚಂದ್ರಕಾಂತ, ತಾಪಂ ಅಧ್ಯಕ್ಷ ವಿರುಪಾಕ್ಷಗೌಡ ಮಾಲೀಪಾಟೀಲ್ ಪಾಲ್ಗೊಂಡಿದ್ದರು.

loading...