ಕೀಚನಾಳ ಗ್ರಾಮಕ್ಕೆ ಅಡಿಕೆ ದಬ್ಬೆಯ ಸಂಕವೇ ಹೆದ್ದಾರಿ

0
42

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಕೀಚನಾಳ ಗ್ರಾಮದ ಬಳಿ ಇರುವ ಹಳ್ಳಕ್ಕೆ ಸೇತುವೆ ಇಲ್ಲದೇ ಮಳೆಗಾಲದಲ್ಲಿ ಗ್ರಾಮಸ್ಥರು ಜೀವ ಅಂಗೈಯಲ್ಲಿ ಹಿಡಿದು ಅಡಿಕೆ ದಬ್ಬೆ ಮೇಲೆ ಕಾಲಿಟ್ಟರೆ ಎಲ್ಲಿ ಮುರಿದುಬೀಳುತ್ತದೆಯೋ ಎಂಬ ಆತಂಕದಿಂದಲೇ, ಮಳೆಗಾಲದಲ್ಲಿ ಮರಕ್ಕೆ ತಂತಿ ಬಿಗಿದು ಅಡಕೆ ದಬ್ಬೆಯಿಂದ ಸೇತುವೆ ನಿರ್ಮಿಸಿಕೊಂಡು ಹಳ್ಳ ದಾಟುತ್ತಿದ್ದಾರೆ.
ತಾಲ್ಲೂಕಿನ ದೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೀಚನಾಳ ಗ್ರಾಮದ ಬಳಿ ಬಳಗಾರ ಹಳ್ಳ ಹಾದು ಹೋಗಿದ್ದು, ಆ ಹಳ್ಳ ದೇಹಳ್ಳಿ ಹಾಗೂ ವಜ್ರಳ್ಳಿ ಗ್ರಾಮ ಪಂಚಾಯ್ತಿಗಳನ್ನು ಬೇರ್ಪಡಿಸುತ್ತದೆ. ಕೀಚನಾಳದಲ್ಲಿ 7-8 ಮನೆಗಳಿದ್ದು, 40 ಕ್ಕೂ ಹೆಚ್ಚು ಜನರು ವಾಸುತ್ತಿದ್ದಾರೆ. ಆ ಗ್ರಾಮಕ್ಕೆ ತೆರಳಲು ಇರುವ ಒಂದೇ ದಾರಿಯ ಮಧ್ಯೆ ಈ ಹಳ್ಳವಿದ್ದು, ಅದನ್ನು ದಾಟದೇ ಹೋಗಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವಾಗ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಹೊರಗಿನ ಸಂಪರ್ಕವನ್ನೇ ಕಡಿದುಕೊಳ್ಳುವಂತಾಗುತ್ತದೆ.
ಇಲ್ಲಿನ ವಿದ್ಯಾರ್ಥಿಗಳು ಹಳ್ಳದ ಕಾರಣದಿಂದಲೇ ಅನಿವಾರ್ಯವಾಗಿ ಹೊರ ಊರುಗಳಲ್ಲಿ ಉಳಿದು ಶಾಲೆಗೆ ಹೋಗುವಂತಾಗಿದೆ.ಈಗ್ರಾಮಗಳಲ್ಲಿ ಕನಿಷ್ಠ ಪ್ರಾಥಮಿಕ ಆರೋಗ್ಯ ಕೆಂದ್ರವೂ ಇಲ್ಲ,ಮಳೆಗಾಲದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಸಾಗಿಸುವುದು ಸಾಧ್ಯವಿಲ್ಲದ ಮಾತಾಗಿದೆ.
ಗ್ರಾಮಸ್ಥರ ಬಹುವರ್ಷದ ಬೇಡಿಕೆಯಂತೆ 2006 ರಲ್ಲಿ ಆಗಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಅನುದಾನದಲ್ಲಿ ಕಾಲು ಸೇತುವೆ ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ 2013 ರ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಸೇತುವೆ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹೊಸ ಸೇತುವೆ ನಿರ್ಮಿಸುವ ಭರವಸೆ ನೀಡಿ ಹೋಗಿದ್ದು ಬಿಟ್ಟರೆ ಸೇತುವೆ ನಿರ್ಮಾಣಗೊಂಡಿಲ್ಲ. ಅದರ ನಂತರ ಮಳೆಗಾಲದಲ್ಲಿ ಗ್ರಾಮಸ್ಥರ ಬದುಕು ದುಸ್ಥರವಾಗಿದ್ದು, ಪ್ರತಿ ವರ್ಷ ಮರಕ್ಕೆ ತಂತಿ ಬಿಗಿದು ಅಡಕೆ ದಬ್ಬೆಯ ಸೇತುವೆಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
ಪರಿಹಾರ ದೊರಕದ ಈ ಸಮಸ್ಯೆಯ ನಡುವೆ ಕೃಷಿಯೂ ಸಾಕು, ಬವಣೆಯೂ ಸಾಕು, ಈ ಊರೂ ಸಾಕು ಎನ್ನುವಷ್ಟರ ಮಟ್ಟಿಗೆ ಗ್ರಾಮಸ್ಥರು ಬೇಸತ್ತಿದ್ದಾರೆ. ಕೇವಲ ಚುನಾವಣೆ ಬಂದಾಗ ಮಾತ್ರ ಗ್ರಾಮದತ್ತ ಕಾಲಿಡುವ ಜನಪ್ರತಿನಿಧಿಗಳು ಇನ್ನಾದರೂ ನಮ್ಮತ್ತ ಗಮನ ಹರಿಸಿ ಸೇತುವೆ ನಿರ್ಮಾಣಕ್ಕೆ ಇಚ್ಛಾಶಕ್ತಿ ತೋರಿಸಬೇಕು. ಗ್ರಾಮಕ್ಕೆ ರಸ್ತೆ ಇತರ ಮೂಲ ಸೌಕರ್ಯ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

loading...