ಕುದುರೆ ಮುಖ

0
26

ಕುದುರೆಮುಖ ಪ್ರವಾಸಿ ಮಂದಿರÀಕ್ಕೆ ಬ್ರಿಟಿಷ್‌ ಮನುಷ್ಯನೊಬ್ಬ ತೀರಾ ನೆನ್ನೆಯವರೆಗೂ ಆಗಾಗ ಬಂದು ಒಂದೆರಡು ವಾರವಿದ್ದು ಹೋಗುತ್ತಿದ್ದ. ಆತ ಏನು ಕೆಲಸ ಮಾಡುತ್ತಾನೆ, ಏಕೆ ಇಲ್ಲಿಗೆ ಬರುತ್ತಾನೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆತ ಬಿಳೀ ತೊಗಲಿನವನಾಗಿದ್ದು ಬಹುಶಃ ಬ್ರಿಟಿಷ್‌ ಇರಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಇಂತಹಾ ವಿದೇಶೀ ಪ್ರಜೆ ಈಗ ನಮ್ಮ ನೆಲದಲ್ಲಿ ಸತ್ತು ಮಲಗಿರುವುದು ಆಡಳಿತದ ತಲೆನೋವಿಗೆ ಕಾರಣವಾಗಿತ್ತು.
ಮೈಕೆಲ್‌ ಫಿಲಿಪ್‌ ಪ್ರವಾಸೀ ಮಂದಿರದ ಕೋಣೆಯಲ್ಲಿ ಸತ್ತು ಬಿದ್ದಿದ್ದ. ಲಾರಿ ಡ್ರೈವರ್‌ ಮಹಮದ್‌ ಬಂದು ಬಾಗಿಲು ತಟ್ಟುವವರೆಗೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ, ತುಂಬಾಹೊತ್ತಾದರೂ ಬಾಗಿಲು ತೆಗೆಯದಿದ್ದುದರಿಂದ ಅನುಮಾನಗೊಂಡ ಮಹಮದ್‌ ಕಿಟಕಿಯಿಂದ ಹಣಿಕಿ ನೋಡಿದಾಗ ನೆಲದ ಮೇಲೆ ಬಿದ್ದಿರುವ ಸ್ಥಿತಿಯಲ್ಲಿ ಫಿಲಿಪ್‌ ಕಂಡಿದ್ದರಿಂದ ಹೆದರಿ ಪೋಲಿಸರಿಗೆ ವಿಷಯ ತಿಳಿಸಿದ್ದ. ಪೋಲಿಸರು ನಂತರ ಫಿಲಿಪ್‌ ಸತ್ತಿರೋದಕ್ಕೆ ವಿಷಪ್ರಾಶನವೇ ಕಾರಣವೆಂದೂ, ನಿನ್ನೆ ರಾತ್ರಿ ಊಟ ಕೊಟ್ಟ ನಂತರ ಆಳು ಕಾಣಿಸುತ್ತಿಲ್ಲವಾದ್ದರಿಂದ ಆತನಿಗಾಗಿ ಬಲೆ ಬೀಸಲಾಗಿದೆಯೆಂದೂ ತಿಳಿಸಿದರು.
ಕೇಶವಮೂರ್ತಿ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಳಸದ ಡಿಗ್ರೀ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಉತ್ಸಾಹೀ, ಬುದ್ಧಿವಂತ ಯುವಕ. ಆತನ ವಯಸ್ಸಿನ ಯುವಕರು ಬೇರೆ ಬೇರೆ ಯೋಚನೆಗಳಲ್ಲಿ ತೊಡಗಿದ್ದರೆ ಈತ ಕುತೂಹಲಕಾರಿ ವಿಷಯಗಳ ಬಗ್ಗೆ ಜಿಜ್ಞಾಸೆ ಹೊಂದಿದವನಾಗಿದ್ದ, ಉದಾಹರಣೆಗೆ ದೊಣ್ಮೆಣಸು ಭಾರತಕ್ಕೆ ಬಂದಿದ್ದಾದರೂ ಹೇಗೆ, ಇತರೆ ಬೇರೆ ಬೇರೆ ಸಸ್ಯ ಪ್ರಭೇದ ಭಾರತಕ್ಕೆ ಬಂದಿದ್ದು, ಇಲ್ಲಿಂದ ಹೋಗಿದ್ದು ಹೇಗೆ.., ಇತ್ಯಾದಿ. ಇತಿಹಾಸ ಮತ್ತು ವಿಜ್ಞಾನ ವಿಶಿಷ್ಟ ಸಂಬಂಧ ಹೊಂದಿದ್ದು, ವಿಜ್ಞಾನ ನಮ್ಮಲ್ಲಿ ಬೆಳೆದಂತೆ ಇತಿಹಾಸದ ಪುಟಗಳು ನಮಗೆ ಇನ್ನೂ ಸ್ಪಷ್ಟವಾಗಿ ಗೋಚರಿಸಲಾರಂಭಿಸುತ್ತದೆ ಎಂದು ಕೇಶವ ಬಲ್ಲವನಾಗಿದ್ದ.
ಕಾಲೇಜಿನ ಅಧ್ಯಯನ ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಚಾರಣಕ್ಕೆ ಕರೆದುಕೊಂಡು ಹೋಗುವುದು ಕೇಶವನ ಅಚ್ಚುಮೆಚ್ಚಿನ ಕೆಲಸಗಳಲ್ಲೊಂದು. ಸುತ್ತಮುತ್ತಲಿನ ಎತ್ತರದ ಪ್ರದೇಶಗಳನ್ನು ಸುತ್ತಿ ಅದರಲ್ಲಿರುವ ಸಸ್ಯ, ಪ್ರಾಣಿ ಪ್ರಭೇದಗಳು, ಭೌಗೋಳಿಕ ಲಕ್ಷಣಗಳು, ವಿಶೇಷತೆ ಇವುಗಳನ್ನು ಕರಾರುವಕ್ಕಾಗಿ ತಿಳಿದುಕೊಂಡಿದ್ದ ಆತ ಸುತ್ತಮುತ್ತಲಿನ ಪರ್ವತಗಳಾದ ಶೀರ್ಲು, ಕುರಿಂಜಾಳ, ಮುಳ್ಳಯ್ಯನಗಿರಿ, ನರಸಿಂಹ ಪರ್ವತ ಮುಂತಾದವುಗಳನ್ನು ಅಧ್ಯಯನ ಮಾಡಿ ಹತ್ತಿರದಿಂದ ಬಲ್ಲವನಾಗಿದ್ದ. ಈ ಬಾರಿ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದ ವಿಷಯದ ಮೇಲೆ ಆಸಕ್ತಿ ಹೆಚ್ಚಾಗಲೆಂದು, ತಮ್ಮ ಕಾಲೇಜಿಗೆ ಹತ್ತಿರವೇ ಇರುವ ಕುದುರೆಮುಖ ಶಿಖರಕ್ಕೆ ಚಾರಣ ಏರ್ಪಡಿಸಿದ್ದ. ಸಂಸೆ ನಂತರದ ಊರಾಗಿರುವ ಬಾಳೆಗಲ್ಲು ಬಸ್ಟಾಪಿನಲ್ಲಿ ಇಳಿದು ಮುಳ್ಳೋಡು ಫಾರೆಸ್ಟ್‌ ಆಫೀಸರ್‌ ಶೆಡ್‌ನಲ್ಲಿ ಅನುಮತಿ ಪಡೆದುಕೊಂಡು ಕುದುರೆಮುಖ ಶಿಖರದ ಕಡೆಗೆ ಎಲ್ಲರೂ ನಡೆಯತೊಡಗಿದರು. ನಡೆಯುತ್ತಾ ಕೇಶವ ತನ್ನ ಶಿಷ್ಯರಿಗೆ ವಿವರ ನೀಡುತ್ತಾ ಹೋದ.
“ಈ ಶಿಖರವೇ ನಿಜವಾದ ಕುದುರೆ ಮುಖ, ಕಬ್ಬಿಣದ ಫ್ಯಾಕ್ಟರಿ ಇದ್ದ ಜಾಗ ಸ್ವಲ್ಪ ದೂರದಲ್ಲಿದೆ. ಈ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನ ಅಂತ ಬ್ರಿಟಿಷರು ಘೋಷಿಸಿದ್ದರು. ಸುಮಾರು 600 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿರುವ ಈ ಕಾಡಲ್ಲಿ ವಿಶೇಷವಾಗಿ ಇಲ್ಲಿ ಮಾತ್ರ ಕಾಣ ಸಿಗುವ ಸಸ್ಯ, ಪ್ರಾಣಿ ಪ್ರಭೇದಗಳಿವೆ ಇದನ್ನು ಹುಲಿ ರಕ್ಷಿತಾರಣ್ಯ ಮಾಡುತ್ತಿದಾರೆ ಅದಕ್ಕೂ ಮುಂಚೆ ಈಗಾಗಲೇ ಇಲ್ಲಿ ಚಿರತೆ, ಕಾಡೆಮ್ಮೆ, ಕಾಡುಕೋಣ, ಕಾಡುನಾಯಿ, ಸಿಂಹಬಾಲದ ಕೋತಿ ಮುಂತಾದ ಪ್ರಾಣಿಗಳಿವೆ. ಸುಪ್ರೀಂ ಕೋರ್ಟ 2005ರಲ್ಲಿ ನಿಸರ್ಗದ ಮೇಲಾಗುತ್ತಿದ್ದ ಅನಾಹುತದಿಂದ ಪರಿಸರವನ್ನು ,ಅರಣ್ಯವನ್ನು ರಕ್ಷಿಸಲು ಕಬ್ಬಿಣದ ಫ್ಯಾಕ್ಟರಿಗೆ ಬೀಗ ಜಡಿಯಿತು. ಶೋಲಾ ಹುಲ್ಲುಗಾವಲು, ಭಗವತೀ ಅರಣ್ಯ, ಗುಡ್ಡಗಾಡಿನ ಸಾಲುಗಳು, ಅನೇಕಾನೇಕ ಜಲಪಾತಗಳು, ಮನುಷ್ಯರ ಒಡನಾಟದಿಂದ, ಹಸ್ತಕ್ಷೇಪದಿಂದ ದೂರವಿರುವ ನೆಲಕ್ಕೆ ಬೆಳಕೇ ಬೀಳೋದಿಲ್ಲವೇನೋ ಎಂದು ಭಾಸವಾಗುವಂತಹಾ ದಟ್ಟವಾದ ಕಾಡುಗಳು ಇವೆಲ್ಲಾ ಕುದುರೆಮುಖ ಸುತ್ತಮುತ್ತಲಿನ ಕಾಡಿನ ವಿಶೇಷತೆ”, ಹೀಗೆ ಹೇಳುತ್ತಾ ಇರುವಾಗ ಕೇಶವನಿಗೆ ಹಿಂದೆ ಜರೀಗಿಡಗಳ ಬಗ್ಗೆ ತಾನು ಮಾಡಿದ್ದ ಕಿರು ಸಂಶೋಧನಾ ಪ್ರಬಂಧದ ಬಗ್ಗೆ ನೆನಪಾಯಿತು.
“ಪ್ಟೆರಿಡಿಯಂ ಅಕ್ಟಿಲಮ್‌ ಅಥವಾ ಬ್ರಾಕೆನ್‌ ಫೆರ್ನ ಬಗ್ಗೆ ನೆನಪಿಸಿಕೊಂಡಾಗ ಅದನ್ನು ಜರೀಗಿಡ ಎಂದು ಕನ್ನಡದಲ್ಲಿ ಕರೆಯಬಹುದೇನೋ ಎಂದುಕೊಂಡ. ಅದೊಂಥರಾ ಕಳೆ, ಬೇರೆ ಯಾವ ಗಿಡಗಳನ್ನೂ ಬದುಕಲು ಬಿಡದಂತಹ ಪಾರ್ಥೇನಿಯಂ ಅಥವಾ ಲಂಟಾನಾ ಜಿಗ್ಗಿನ ರೀತಿಯ ಹಟಮಾರೀ ಸ್ವಭಾವದ, ಬೇರೆ ಗಿಡಗಳೊಡನೆ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲದಂತಹ ಈ ಜರೀಗಿಡ ಒಮ್ಮೆ ಹುಟ್ಟಿದರೆ ಸುತ್ತಮುತ್ತ ಆವರಿಸಿಬಿಡುತ್ತದೆ. ಬೇರೆ ಗಿಡಗಳನ್ನು ಬದುಕಲು ಬಿಡದ ಇವು ಊರಿಡೀ ಆವರಿಸಿ ಕಾಡನ್ನೇ ಖಾಲಿ ಮಾಡಿಬಿಡುತ್ತದೆ. ಜಾನುವಾರು ತಿಂದರೆ ವಿಷಕಾರಿಯಾಗಿ ವರ್ತಿಸುವ ಈ ಗಿಡ ಸುಟ್ಟರೂ ಸಾಯಲ್ಲ, ವಿಷಕಾರೀ ಔಷಧಿಯಿಂದಲೂ ಸಾಯಲ್ಲ.”
ಜರೀಗಿಡದ ಬಗೆಗೆ ಯೋಚಿಸುತ್ತಾ ಮುಂದೆ ನಡೆಯಬೇಕಾದರೆ ಪತ್ತೇದಾರೀ ಕತೆಗಳನ್ನ ಓದಿಕೊಂಡಿರುವ ಈ ಹುಡುಗರು ನಿಧಿಯ ಬಗ್ಗೆ, ಹವಳದ ಬಗ್ಗೆ, ಕೆಂಪು ಕಲ್ಲಿನ ಬಗ್ಗೆ, ನದಿಯಲ್ಲಿರುವ ಕಲ್ಲು ಸಂದಿಗಳಲ್ಲಿರುವ ಹಸಿರು ಕಲ್ಲು ಪಚ್ಚೆಯ ಬಗ್ಗೆ ಹರಟುತ್ತಾ ಸಾಗಿದ್ದರು ಇವರ ಯೋಚನೆಯ ಬಗೆಗೆ ಕೇಶವ ತಲೆಕೆಡಿಸಿಕೊಳ್ಳತೊಡಗಿದ. ಒಮ್ಮೊಮ್ಮೆ ಅದ್ಭುತವಾದ ವಿಚಾರಗಳನ್ನ, ಅತೀ ದೊಡ್ಡ ರಹಸ್ಯಗಳನ್ನ ನಾವು ಹುಡುಕಿ, ಉತ್ಖನನ ಮಾಡಿ ತೆಗೆದು ನೋಡಬಯಸುತ್ತೇವೆ, ಅಗೆದು ಕಾಣಬಯಸುತ್ತೇವೆ ಆದರೆ ಅಷ್ಟು ದೊಡ್ಡ ರಹಸ್ಯವು ಇಷ್ಟು ಎದುರಾಎದುರು ಇರುವ ಸಾಧ್ಯತೆಯನ್ನು ನಮ್ಮ ಮನಸ್ಸು ಊಹಿಸಿಯೇ ಇರುವುದಿಲ್ಲ ಆದುದರಿಂದ ಬಹುಶಃ ಎದುರೇ ಇರುವ ನಿಧಿ ಪೆಟ್ಟಿಗೆಗಳನ್ನು ಜನ ತೆಗೆದೇ ನೋಡಿರಲಿಕ್ಕಿಲ್ಲ ಎನಿಸಿತು. ಮುಂದುವರೆಯುವುದು….
-ದೀಪಕ್‌ ಡೋಂಗ್ರೆ.
ಮೆಣಸೆ. ಶೃಂಗೇರಿ.
ಮೊ. +919 972721083

loading...

LEAVE A REPLY

Please enter your comment!
Please enter your name here