ಕುಲ್ದೀಪ್ ಬೌಲಿಂಗ್ ಮೋಡಿ,ರಾಹುಲ್ ಶತಕದ ಪುಳಕ, ಇಂಗ್ಲೆಂಡ್ ಬಗ್ಗು ಬಡಿದ ವಿರಾಟ್ ಪಡೆ

0
51

ಮ್ಯಾಚೆಂಸ್ಟರ್: ಇಲ್ಲಿನ ಓಲ್ಡ್​ ಟಫರ್ಡ್​ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಭಾರತ ೮ ವಿಕೆಟಗಳ ರೋಚಕ ಗೆಲುವು ಬಾರಿಸಿದೆ.ಕುಲ್ದೀಪ್ ಬೌಲಿಂಗ್ ಮೋಡಿ,ಹಾಗೂ ಕನ್ನಡಿಗ ರಾಹುಲ್ ಭರ್ಜರಿ ಬ್ಯಾಟಿಂಗ್ ಪುಳುಕ ಗೆಲುವಿನ ಪ್ರಮುಖ ರೂವಾರಿ ಎನಿಸಿದರು.

ಸ್ ​ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡು ಇಂಗ್ಲೆಂಡ್​ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಇಳಿಸಿದರು. ಉತ್ತಮ ಆರಂಭ ಪಡೆದ ಇಂಗ್ಲೆಂಡ್​ ಮೊದಲ ವಿಕೆಟ್​ಗೆ 50 ರನ್​ಗಳ ಉತ್ತಮ ಜೊತೆಯಾಡವನ್ನು ಆಡಿತು. ಆದರೆ, ಅನಂತರದಲ್ಲಿ ಭಾರತದ ಕುಲ್ದೀಪ್​​ ಯಾದವ್​​ ಅವರ ದಾಳಿಗೆ ನಲುಗಿದ ಇಂಗ್ಲೆಂಡ್​ ತಂಡ ಒಂದೇ ಓವರ್​ನಲ್ಲಿ ಮೂರು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಭಾರತ ಪರ ಉತ್ತಮ ಬೌಲಿಂಗ್​ ದಾಳಿ ನಡೆಸಿದ ಕುಲ್ದೀಪ್ ಯಾದವ್​ 4 ಓವರ್​ಗಳಲ್ಲಿ 24 ರನ್ ನೀಡಿ ಇಂಗ್ಲೆಂಡ್​ನ ಪ್ರಮುಖ 5 ವಿಕೆಟ್​ಗಳನ್ನು ಪಡೆದುಕೊಂಡರು. ಈ ಮೂಲಕ ಟಿ-20 ಪಂದ್ಯದಲ್ಲಿ ತಮ್ಮ ಮೊದಲ 5 ವಿಕೆಟ್​ ಗೊಂಚಲನ್ನು ಪಡೆದುಕೊಂಡರು. ಜೊತೆಗೆ ಟಿ-20ಯಲ್ಲಿ ಎಡಗೈ ಬೌಲರ್​ ಒಬ್ಬರು ಇದೇ ಮೊದಲ ಬಾರಿಗೆ 5 ವಿಕೆಟ್​ ಪಡೆದ ಖ್ಯಾತಿಗೆ ಕಲ್ದೀಪ್ ಪಾತ್ರರಾದರು.

ಕೊನೆಗೆ ಇಂಗ್ಲೆಂಡ್​ ತಂಡ ನಿಗದಿತ 20 ಓವರ್​​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 159 ರನ್​ಗಳನ್ನು ಕಲೆ ಹಾಕಿತು. ಜೋಸ್​ ಬಟ್ಲರ್​​ 46 ಎಸೆತಗಳಲ್ಲಿ 69 ರನ್​ ಗಳಿಸಿ ಟಾಪ್​​ ಸ್ಕೋರರ್​ ಎನಿಸಿದರು.

ಇತ್ತ, 160 ರನ್​​​ ಗೆಲುವಿನ ಗುರಿ ಬೆನ್ನು ಹತ್ತಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು. ತಂಡದ ಮೊತ್ತ 7 ರನ್​ಗಳಾಗಿದ್ದಾಗ ವಿಲ್ಲಿ ಅವರ ಎಸೆತಕ್ಕೆ ಶಿಖರ್​​ ಧವನ್​ ಕ್ಲೀನ್​ ಬೌಲ್ಡ್​ ಆದರು. ಬೌಲರ್​ ಕಡೆಯಿಂದ ತೂರಿ ಬಂದ ಚೆಂಡಿನ ಗತಿಯನ್ನು ಗುರುತಿಸುವಲ್ಲಿ ವಿಫಲವಾದ ಧವನ್​ ವಿಕೆಟ್​ ಒಪ್ಪಿಸಿದರು. ಅನಂತರ ಕ್ರೀಸ್​ಗೆ ಬಂದ ಕನ್ನಡಿಗ ಲೋಕೇಶ್​ ರಾಹುಲ್​ ಮನಮೋಹಕ ಹೊಡೆತಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ರೋಹಿತ್​ ಜೊತೆಗೂಡಿ ಅಬ್ಬರಿಸಿದ ರಾಹುಲ್​ ವೇಗವಾಗಿ ರನ್​ ಕಲೆಹಾಕುತ್ತಾ ತಮ್ಮ ರನ್ ಗಳಿಕೆಯ ವೇಗವನ್ನೂ ಏರಿಸುತ್ತಿದ್ದರು.

ರೋಹಿತ್​ ಶರ್ಮಾ ಜೊತೆ 130 ರನ್​ಗಳ ಜೊತೆಯಾಟವಾಡಿದ ರಾಹುಲ್​ 54 ಎಸೆತಗಳಲ್ಲಿ 10 ಫೋರ್​ ಮತ್ತು 5 ಸಿಕ್ಸರ್​ಗಳ ಸಹಿತ 101 ರನ್​ ಕಲೆ ಹಾಕಿ ಟಿ-20ಯಲ್ಲಿ ತಮ್ಮ 2ನೇ ಶತಕವನ್ನು ಪೂರೈಸಿದರು. ಈ ಮೂಲಕ ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾ ಇಂಗ್ಲೆಂಡ್​ ಮೇಲೆ ಪಾರಮ್ಯ ಸಾಧಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತ ತಂಡ 18.2 ಓವರ್​ಗಳಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು 163 ರನ್​​ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಭಾರತ ಇಂಗ್ಲೆಂಡ್​ಗೆ ಸೋಲಿನ ರುಚಿಯನ್ನು ತೋರಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

loading...