ಕೊಡಗು ಸಂತ್ರಸ್ತರಿಗೆ ಜಿಲ್ಲೆಯ ನೌಕರರಿಂದ ಒಂದು ದಿನದ ವೇತನ

0
18

ಕನ್ನಡಮ್ಮ ಸುದ್ದಿ-ಹಾವೇರಿ: ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಹಾವೇರಿ ಜಿಲ್ಲೆಯ ಅಧಿಕಾರಿಗಳು ಹಾಗೂ ನೌಕರರ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದರು.
ಕೊಡಗು ನೆರೆ ಸಂತ್ರಸ್ತರಿಗಾಗಿ ನೀಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾವೇರಿ ನಿರ್ಮಿತಿ ಕೇಂದ್ರದಿಂದ ಐದು ಲಕ್ಷ ರೂ. ಚೆಕ್ ಹಾಗೂ ನೌಕರರ ಒಂದು ದಿನದ ವೇತನ ಕೊಡಿತಗೊಳಿಸುವ ಮನವಿ ಪತ್ರವನ್ನು ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.ನಿರ್ಮಿತಿ ಕೇಂದ್ರದ ಐದು ಲಕ್ಷ ರೂ. ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಲು ಚೆಕ್ ಸ್ವೀಕರಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಸಾವಿರ ನೌಕರರು ಒಂದು ದಿನದ ವೇತನ ನೀಡಲು ನಿರ್ಧರಿಸಿ ಪತ್ರ ನೀಡಿದ್ದಾರೆ. ಈ ವೇತನ ಸೇರಿದಂತೆ ಒಟ್ಟಾರೆ 32 ಲಕ್ಷ ರೂ. ಅಧಿಕ ಮೊತ್ತವನ್ನು ಜಿಲ್ಲೆಯಿಂದ ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯ ತುಂಗಭದ್ರಾ ಹಾಗೂ ವರದಾ ನದಿಯ ಪ್ರವಾಹದಿಂದ ನದಿಯ ಇಕ್ಕೆಲಗಳ ಕೃಷಿ ಭೂಮಿಗೆ ನೀರು ನುಗ್ಗಿ 3,227 ಹೆಕ್ಟೇರ್ ಕೃಷಿ ಬೆಳೆ ಹಾಗೂ 221 ಎಕರೆ ತೋಟಗಾರಿಕೆ ಬೆಳೆಹಾನಿ ಸಂಭವಿಸಿದೆ. ಅಂದಾಜು 2.27 ಕೋಟಿ ರೂ. ಕೃಷಿ ಬೆಳೆ ಹಾಗೂ 0.21 ಲಕ್ಷ ತೋಟಗಾರಿಕೆ ಬೆಳೆ ಹಾನಿಯಾಗಿರುವ ಕುರಿತಂತೆ ಕಂದಾಯ ಇಲಾಖಾ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಸರ್ಕಾರಕ್ಕೆ ಈ ಕುರಿತಂತೆ ಪರಿಹಾರ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ರಸ್ತೆಗಳು ಶಾಲಾ ಹಾಗೂ ಇತರ ಕಟ್ಟಡಗಳ ಹಾನಿ ಕುರಿತಂತೆ ಸರ್ವೇ ನಡೆಸಿ ಅನುದಾನ ಒದಗಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆರು ಕೋಟಿ ರೂ.ಪರಿಹಾರ: ಪ್ರಕೃತಿ ವಿಕೋಪ ನಿಧಿಯಿಂದ ಅತೀವೃಷ್ಟಿ ಪರಿಹಾರಕ್ಕಾಗಿ ಜಿಲ್ಲೆಗೆ 6.22 ಕೋಟಿ ರೂ. ಸರ್ಕಾರದಿಂದ ಬಿಡುಗಡೆಯಾಗಿದೆ. ಈಗಾಗಲೇ ಪರಿಹಾರ ಕಾರ್ಯಕ್ಕಾಗಿ ತಾಲೂಕಾ ಆಡಳಿತಕ್ಕೆ ಅನುದಾನ ಬಿಡುಗಡೆಮಾಡಲಾಗಿದೆ. ಪ್ರವಾಹ ಹಾಗೂ ಅತೀವೃಷ್ಟಿಯಿಂದ ತೊಂದರೆಗೊಳಗಾದ ಜನರಿಗೆ ತುರ್ತು ಪರಿಹಾರ ಬಿಡುಗಡೆ, ತಾತ್ಕಾಲಿಕವಾಗಿ ಅಗತ್ಯಬಿದ್ದರೆ ಸರ್ಕಾರಿ ಶಾಲೆಗಳಲ್ಲಿ ಪರಿಹಾರ ಕೇಂದ್ರ ತೆರೆದು ಊಟ, ವಸತಿ, ಕುಡಿಯುವ ನೀರು ಒದಗಿಸಲು ಸಮರೋಪಾದಿ ಕಾರ್ಯಕೈಗೊಳ್ಳಲು ಸೂಚಿಸಲಾಗಿದೆ. ನೆರೆ ಅತೀವೃಷ್ಟಿ ಎದುರಿಸಲು ಜಿಲ್ಲಾಡಳಿತ ಸಮಗ್ರವಾಗಿ ಸಮರ್ಥವಾಗಿ ನಿಭಾಯಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

loading...