ಕೊರೊನಾ : ಆಫ್ರಿಕಾದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಸೋಂಕು !?

0
39

ನೈರೋಬಿ:- ಆಫ್ರಿಕಾದಲ್ಲಿ ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಸುಮಾರು ಎರಡು ಲಕ್ಷ ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಆತಂಕ ವ್ಯಕ್ತಪಡಿಸಿದೆ.

ಅಲ್ಲದೇ ಇನ್ನೂ ಹೆಚ್ಚುವರಿಯಾಗಿ 4 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲುವ ಅಪಾಯವಿದೆ ಎಂದೂ ಡಬ್ಲ್ಯು ಎಚ್ ಒ ಆತಂಕ ಹೊರಹಾಕಿದೆ.

ಇತರೆಡೆಗಳಂತೆ ಆಫ್ರಿಕಾದಲ್ಲಿ ಕೊರೊನಾ ಸೋಂಕು ದಿನದಿನಕ್ಕೆ ದ್ವಿಗುಣಗೊಳ್ಳದೇ ಹಾಟ್ ಸ್ಪಾಟ್ ಗಳಲ್ಲಿ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಡಬ್ಲ್ಯು ಎಚ್ ಒ ನ ಆಫ್ರಿಕಾ ಪ್ರಾದೇಶಿಕ ನಿರ್ದೇಶಕಿ ಮತ್ಸಿಡಿಸೋ ಮೋತಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈ ಪ್ರದೇಶಗಳಲ್ಲಿನ ಸರ್ಕಾರಗಳು ಸೋಂಕಿತರನ್ನು ಗುರುತಿಸಿ, ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಬೇಕಿದೆ ಎಂದರು.

ಆಫ್ರಿಕಾದಲ್ಲಿ ಸಾಮಾನ್ಯ ಜನರ ಆರೋಗ್ಯ ಸೇವೆಗೆ ಅಗತ್ಯ ಮೂಲಸೌಕರ್ಯಗಳಿಲ್ಲವಾಗಿದೆ. ಈಗಾಗಲೇ ಕೊರೊನಾ ಸೋಂಕು ಆಫ್ರಿಕಾದ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು ಕೂಡಲೇ ಅಗತ್ಯ ಸದೃಢ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ ಎಂದು ಅವರು ಹೇಳಿದ್ದಾರೆ.

loading...