ಕೌಟುಂಬಿಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ: ಜಿಲ್ಲಾಧಿಕಾರಿ

0
26

ಕನ್ನಡಮ್ಮ ಸುದ್ದಿ-ಕಾರವಾರ: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕೆಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಎಲ್ಲಾ ತಾಲೂಕುಗಳ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳು ಬಾಕಿ ಇರದಂತೆ ನೋಡಿಕೊಳ್ಳಬೇಕು. ಸಕ್ರೀಯ ಆಪ್ತಸಮಾಲೋಚನೆಯ ಮೂಲಕ ಪ್ರಕರಣಗಳನ್ನು ಬಗೆ ಹರಿಸಬೇಕೆಂದು ಸೂಚಿಸಿದರು. ಜಿಲ್ಲೆಯಲ್ಲಿ 2017-18 ರಲ್ಲಿ ದಾಖಲಾದ 237 ಪ್ರಕರಣಗಳಲ್ಲಿ 212 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 25 ಪ್ರಕರಣಗಳು ವಿಚಾರಣೆಯ ಹಂತದಲ್ಲಿರುತ್ತವೆ. 2018-19ನೇ ಸಾಲಿನಲ್ಲಿ (ಜೂನ್‌ ಅಂತ್ಯದವರೆಗೆ) 60 ಪ್ರಕರಣಗಳು ದಾಖಲಾಗಿರುತ್ತವೆ. 38 ಪ್ರಕರಣ ಇತ್ಯರ್ಥಪಡಿಸಿದ್ದು 22 ಪ್ರಕರಣಗಳು ವಿಚಾರಣೆಯ ಹಂತದಲ್ಲಿರುತ್ತವೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್‌ ಸಭೆಗೆ ಮಾಹಿತಿ ನೀಡಿದರು.
ಬಾಲ್ಯ ವಿವಾಹ ನಡೆಯುವ ಸಂದರ್ಭಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್‌ ಪೇದೆಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಅಂತಹ ಮದುವೆಗಳಲ್ಲಿ ಉಂಡುಬಂದಂತಹ ನಿದರ್ಶನಗಳಿವೆ. ಇಂತಹ ನಿದರ್ಶನಗಳು ಮರುಕಳಿಸಬಾರದು. ಇಲ್ಲದಿದ್ದಲ್ಲಿ ಇವರೂ ಕೂಡ ಬಾಲ್ಯ ವಿವಾಹದಲ್ಲಿ ಭಾಗಿದಾರರು ಎಂದು ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪದ್ಮಾ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಪ್ರತಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪೋಷಕರ ಶಿಬಿರಗಳಲ್ಲಿ, ಗ್ರಾಮ ಸಭೆ, ವಾರ್ಡ ಸಭೆಗಳಲ್ಲಿ ಬಾಲ್ಯ ವಿವಾಹದಿಂದಾಗುವ ದುಷ್ಟಪರಿಣಾಮ ಮತ್ತು ಕಾನೂನು ಬಗ್ಗೆ ಅರಿವು ಮೂಡಿಸಲಾಗುತ್ತಿದೆ. 2017-18 ರಲ್ಲ 4 ಬಾಲ್ಯ ವಿವಾಹ ಪ್ರಕರಣಗಳನ್ನು ಯಶಸ್ವಿಯಾಗಿ ತಡೆದಿದ್ದು, 1 ಬಾಲ್ಯ ವಿವಾಹ ಪ್ರಕರಣಕ್ಕೆ ಎಫ್‌ಐಆರ್‌ ದಾಖಲಾಗಿದೆ. 2018-19 ರಲ್ಲಿ 3 ಬಾಲ್ಯ ವಿವಾಹ ಪ್ರಕರಣಗಳು ಹಳಿಯಾಳ ತಾಲೂಕಿನಲ್ಲಿ ತಡೆದಿದ್ದು, ಸಿದ್ದಾಪುರ ತಾಲೂಕಿನಲ್ಲಿ ನಡೆದ 1 ಬಾಲ್ಯ ವಿವಾಹ ಪ್ರಕರಣಕ್ಕೆ ಎಫ್‌ಐಆರ್‌ ದಾಖಲಾಗಿರುತ್ತದೆ ಎಂದು ತಿಳಿಸಿದರು ಸಭೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಗೋವಿಂದಯ್ಯ, ಪೊಲೀಸ್‌ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಾಂತ್ವನ ಕೇಂದ್ರಗಳ ಮುಖ್ಯಸ್ಥರರು ಉಪಸ್ಥಿತರಿದ್ದರು.

loading...