ಗೆಲುವು ಸಾಧನೆಯಲ್ಲ, ಸೋಲು ಕೊನೆಯಲ್ಲ

0
216

 
ಫಲಿತಾಂಶಕ್ಕಾಗಿ ಪ್ರತಿ ನಿಮಿಷವನ್ನು ಕಾತುರದಿಂದ ಕಾಯುತ್ತಿರುವ ಪಿ.ಯು.ಸಿ.ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸುಸಂದರ್ಭ ಬಂದೇಬಿಟ್ಟಿದೆ. ವರ್ಷಪೂರ್ತಿ ಕಷ್ಟ ಪಟ್ಟು ಓದಿದ ಪ್ರತಿಫಲವಾಗಿ ಇಂದು ಪಿ.ಯು.ಸಿ ಮತ್ತು ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬೀಳಲಿದೆ. ನಮ್ಮ ಫಲಿತಾಂಶ ಏನಾಗುವುದೋ ಎಂದು ಕಾದುಕುಳಿತ ವಿದ್ಯಾರ್ಥಿಗಳ ಪರೀಕ್ಷೆಯ ಭವಿಷ್ಯ ಇಂದು ಮತ್ತು ನಾಳೆ ತಿಳಿಯಲಿದೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸಂಭ್ರಮಿಸಿದರೆ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿಕೊಂಡು ತಮ್ಮ ಅತ್ಯಮೂಲ್ಯ ಜೀವನವನ್ನು ಕಳೆದುಕೊಳ್ಳುವ ದಾವಂತದಲ್ಲಿರುತ್ತಾರೆ. ಪ್ರತಿ ವರ್ಷ ಪಿ.ಯು.ಸಿ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬಿದ್ದ ಕೂಡಲೇ, ಕಡಿಮೆ ಅಂಕ ಪಡೆದೆ ಎನ್ನುವ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ನಮ್ಮಲ್ಲಿ ಸಾಕಷ್ಟಿವೆ. ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಬಹುದೆಂಬ ನಂಬಿಕೆಯನ್ನು ವಿದ್ಯಾರ್ಥಿಗಳು ಕೈ ಬಿಡಬೇಕು.
ಕಡಿಮೆ ಅಂಕವನ್ನು ಪಡೆದುಕೊಂಡು ಉತ್ತಮ ಜೀವನವನ್ನು ನಡೆಸಿಕೊಂಡು, ಸಮಾಜದಲ್ಲಿ ಉನ್ನತ ಹುದ್ದೆಗೇರಿದವರಿಗೇನು ಕೊರತೆ ಇಲ ್ಲನಮ್ಮಲ್ಲಿ. ಓದದೇ ಇದ್ದವರಿಗೂ ಕೂಡಾ ಬದುಕಿದೆ, ಅವರೂ ಇತರರಂತೆ ಬದುಕುತ್ತಿದ್ದಾರೆ. ಪರೀಕ್ಷೆ ಮತ್ತು ಫಲಿತಾಂಶ ಜೀವನದ ಒಂದು ಭಾಗವಷ್ಟೆ, ಫಲಿತಾಂಶವೇ ಜೀವನವಲ್ಲ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡರೆ ಯಾವ ಅನಾಹುತವೂ ನಡೆಯುವುದಿಲ್ಲ.
ಸೋಲೆ ಗೆಲುವಿನ ಸೋಪಾನ: ಜೀವನವೆಂಬ ಹೆದ್ದಾರಿಯಲ್ಲಿ ಅನೇಕ ತಿರುವುಗಳು ಬರುತ್ತವೆ. ಇದರಲ್ಲಿ ಪರೀಕ್ಷೆ ಎಂಬುವುದು ಒಂದು ಆಕಸ್ಮಿಕ ತಿರುವು ಮಾತ್ರ. ಜೀವನದ ದಾರಿಯೇ ಮುಕ್ತಾಯವಾಯಿತು ಎಂದು ಅಂದುಕೊಳ್ಳಬೇಡಿ. ಬದಲಾಗಿ ಇಲ್ಲಿಂದಲೇ ಪ್ರಾರಂಭವಾಯಿತು ಎಂದು, ಹಲವಾರು ಪರೀಕ್ಷೆಗಳನ್ನು ಎದುರಿಸಿ ನೋಡಿ,ಅವಾಗ ಒಂದಲ್ಲ ಒಂದುಪರೀಕ್ಷೆಯಲ್ಲಿ ಗೆಲುವು ನಿಮ್ಮ ಪಾಲಿಗಿರುತ್ತದೆ. ಗೆಲುವು ಸಾಧನೆಯಲ್ಲ, ಸೋಲು ಕೊನೆಯಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಬೇಡಿ. ಪರೀಕ್ಷೆಯ ಫಲಿತಾಂಶವನ್ನು ಅರಗಿಸಿಕೊಳ್ಳಂಡರೆ ಮಾತ್ರ ಜೀವನೆಂಬ ಅಗ್ನಿಪರೀಕ್ಷೆಯಲ್ಲಿ ನೀವು ಗೆಲ್ಲಲು ಸಾಧ್ಯ.
ಮಕ್ಕಳ ಮೇಲೆ ಒತ್ತಡ ಹೇರದಿರಿ: ಎಷ್ಟೋ ತಂದೆ ತಾಯಿಗಳು ತಮ್ಮ ಮಕ್ಕಳು ಉತ್ತಮ ಅಂಕಗಳನ್ನು ತೆಗೆದುಕೊಂಡರೇ ಮಾತ್ರ ತಮ್ಮ ಪ್ರತಿಷ್ಠೆ, ಗೌರವ ಹೆಚ್ಚಾಗುತ್ತದೆಂಬ ಕಾರಣಕ್ಕಾಗಿ ಮಕ್ಕಳ ಮೇಲೆ ಒತ್ತಡ ಹೇರಲು ಪ್ರಾರಂಭಿಸುತ್ತಾರೆ. ಹೀಗೆ ಮಕ್ಕಳ ಮೇಲೆ ಒತ್ತಡ ಹೇರುವುದರಿಂದಲೇ ಮಕ್ಕಳ ಮೇಲೆಕೆಟ್ಟ ಪರಿಣಾಮಬೀರಬಹುದು ಎಚ್ಚರ. ಆದಷ್ಟು ಪಾಲಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಫೇಲಾಗಲಿ ಅಥವಾ ಪಾಸಾಗಲಿ ನಿಮ್ಮ ಪ್ರತಿಕ್ರೀಯೆ ಮಾತ್ರ ಒಂದೆಯಾಗಿರಲಿ. ಪರೀಕ್ಷೆಯಲ್ಲಿ ಫೇಲಾದರೆ ಮತ್ತೆ ಮತ್ತೆ ಪರೀಕ್ಷೆಬರೆದು ಪಾಸು ಮಾಡಬಹುದು. ಆದರೆ, ಜೀವವೇ ಹೋದರೇ ತಂದೆ-ತಾಯಿಗಳು ಏನು ಮಾಡಲು ಸಾಧ್ಯ ಹೇಳಿ?.
ಮಕ್ಕಳ ಜೀವಅಮೂಲ್ಯವಾದದ್ದು,ಅದನ್ನು ಜೋಪಾನ ಮಾಡುವ ಜವಾಬ್ದಾರಿ ತಂದೆ-ತಾಯಿಗಳ ಮೇಲಿದೆ. ಒಂದು ವೇಳೆ ಮಕ್ಕಳು ಕಡಿಮೆ ಅಂಕ ಪಡೆದರೆ ಅಥವಾ ಫೇಲಾದರೆ, ತಂದೆ-ತಾಯಿಗಳು ಮಕ್ಕಳಿಗೆ ಬುದ್ದಿ ಮಾತುಹೇಳಿ ಅವರಿಗೆ ಧೈರ್ಯ ತುಂಬುವ ಕೆಲಸಮಾಡಬೇಕು.
ಹೀಯಾಳಿಸದಿರಿ: ಸ್ನೇಹಿತರು ಕೂಡಾ ಕಡಿಮೆ ಅಂಕವನ್ನು ಪಡೆದಿದ್ದಾರೆ ಎಂದು ಹೀಯಾಳಿಸುವುದರಿಂದ ಅವರ ಮನಸಿನ ಮೇಲೆ ನಿಮ್ಮಗಳ ಮಾತು ಪ್ರಭಾವ ಬೀರಿ ಜೀವಕ್ಕೆ ಏನಾದರೂ ಮಾಡಿಕೊಳ್ಳಬಹುದು. ಅದಕ್ಕಾಗಿ ಸ್ನೇಹಿತರು ಕಡಿಮೆ ಅಂಕ ಪಡೆದವನ್ನು ಹೀಯಾಳಿಸದೇ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿ.
ಸಕಾರಾತ್ಮಕವಾಗಿ ಸ್ವೀಕರಿಸಿ: ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಹೇಗೆ ಇರಲಿ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಏನೇ ಬಂದರೂ ಧೈರ್ಯದಿಂದ ಅದನ್ನು ಎದುರಿಸುತ್ತೇನೆಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಒಂದು ವೇಳೆ ಕಡಿಮೆ ಅಂಕ ಪಡೆದಿದ್ದಕ್ಕೆ ಯಾರಾದರೂ ಅವಮಾನಿಸಿದರೆ, ಅವರ ಮಾತನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ. ಜೀವನವೆಂಬ ಪರೀಕ್ಷೆಯಲ್ಲಿ ಹಲವಾರು ಸಾಧನೆಯ ಘಟ್ಟಗಳಿವೆ ಅದನ್ನು ತಲುಪಲು ಪ್ರಯತ್ನಿಸಿ. ಗುಡ್ ಲಕ್ ಫಾರ್ ಆಲ್ ಸ್ಟುಡೆಂಟ್ಸ್.

ಲೇಖನ

ಲಕ್ಷ್ಮೀ ಗಾಣಿಗೇರ

loading...