ಗೊಂದಲದ ಗೂಡಾದ ತಾಪಂ ಸಾಮಾನ್ಯ ಸಭೆ

0
12

ಕನ್ನಡಮ್ಮ ಸುದ್ದಿ-ಹಿರೇಕೆರೂರು: ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಜರುಗಿದ ತಾಲೂಕು ಪಂಚಾಯತ ಸಾಮಾನ್ಯ ಸಭೆಯಲ್ಲಿ ತಾಲೂಕ ಪಂಚಾಯತ ಆವರಣದಲ್ಲಿದ್ದ ಖಾಲಿ ಜಾಗವನ್ನು ತಾಲೂಕು ಕೃಷಿಕ ಸಮಾಜಕ್ಕೆ ನೀಡಿದ ವಿಷಯಕ್ಕಾಗಿ ಚರ್ಚೆಗಳು ನಡೆದು ಕೆಲಹೊತ್ತು ಗೊಂದಲದ ವಾತಾವರಣ ಉಂಟಾಗಿತ್ತು. ತಾ.ಪಂ ಮಹಿಳಾ ಸದಸ್ಯೆಯರ ಪತಿಯಂದಿರರು ಸಭೆಗೆ ಆಗಮಿಸಿ ಚರ್ಚೆಯಲ್ಲಿ ಭಾಗವಹಿಸಿದ್ದು ಚರ್ಚೆಗೆ ಗ್ರಾಸವಾಯಿತು.
ತಾ.ಪಂ ಸದಸ್ಯ ರಾಜು ಬಣಕಾರ ಮಾತನಾಡಿ, ಕೃಷಿಕ ಸಮಾಜಕ್ಕೆ ತಾ.ಪಂ ಆವರಣದಲ್ಲಿ ಲಭ್ಯವಿದ್ದ ಖಾಲಿ ಜಾಗ ನೀಡಿರುವುದಕ್ಕೆ ನಮ್ಮದು ವಿರೋಧವಿಲ್ಲ. ಆದರೆ 06-08-2018ರಂದು ನಡೆದ ಸಭೆಯಲ್ಲಿ 17ಸದಸ್ಯರು ಹಾಜರಿದ್ದ ಸಂದರ್ಭದಲ್ಲಿ ತಾ.ಪಂ ಅಧಿಕಾರಿಗಳು ಉಲ್ಲೇಖ ಪ್ರಕಾರ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಜಾಗ ನೀಡಲು ಬರುವುದಿಲ್ಲ ಎಂದು ಈ ಬಗ್ಗೆ ಉಪ ವಿಭಾಗಾದಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು. ಮತ್ತೊಮ್ಮೆ ತಾ.ಪಂ ಸಭೆಯನ್ನು ಕರೆದು ಜಾಗ ಕೊಡುವ ವಿಚಾರವಾಗಿ ಚರ್ಚೆ ಮಾಡದೆ ನೀಡಿದ್ದಕ್ಕೆ ನಮಗೆ ಅಸಮದಾನವಿದೆ. ತಾ.ಪಂ ಆವರಣದಲ್ಲಿರುವ ಖಾಲಿ ಜಾಗವನ್ನು ಕೃಷಿಕ ಸಮಾಜಕ್ಕೆ ನೀಡುವುದಾದರೆ ಸರಕಾರದ ಆಸ್ತಿಯನ್ನು ಹಾಗೆ ನೀಡದೆ ತಾ.ಪಂ ನಿಧಿಗೆ 10ಲಕ್ಷ ರೂ.ಗಳನ್ನು ಕೃಷಿಕ ಸಮಾಜದಿಂದ ತುಂಬಿಸಿಕೊಡುವಂತೆ ಠರಾವು ಮಾಡಲಾಗಿತ್ತು ಎಂದು ಹೇಳಿದರು. ತಾ.ಪಂ ಸದಸ್ಯ ಬಸವರಾಜ ಭರಮಗೌಡ್ರ ಮಾತನಾಡಿ, ಈಗಾಗಲೆ ಖಾಲಿಜಾಗ ಕೃಷಿಕ ಸಮಾಜಕ್ಕೆ ನೊಂದಣಿಯಾಗಿದೆ. ಇಲ್ಲಿಗೆ ಈ ಚರ್ಚೆಯನ್ನು ಕೈಬಿಟ್ಟು ತಾಲೂಕಿನ ಅಭಿವೃದ್ದಿಯ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ತಾ.ಪಂ ಸದಸ್ಯ ಮಹೇಶ ಗುಬ್ಬಿ ಮಾತನಾಡಿ, ಕೃಷಿಕ ಸಮಾಜಕ್ಕೆ ಜಾಗ ನೀಡಲು ನಮ್ಮದು ವಿರೋಧವಿಲ್ಲ. ಆದರೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ತಾ.ಪಂ ಸಭೆಯಲ್ಲಿ ಜಾಗ ಕೊಡಲು ಬರುವುದಿಲ್ಲ ಎಂದು ಹೇಳಿ ಮತ್ತೊಮ್ಮೆ ಸಭೆಯನ್ನು ಕರೆಯದೆ ಜಾಗ ಕೊಡುವ ಮೂಲಕ ನಮಗೆ ದಾರಿ ತಪ್ಪಿಸಿದ್ದಾರೆ ಎಂದು ದೂರಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ.ಮನೋಹರ ದ್ಯಾಬೇರಿ ಸದಸ್ಯರ ಪ್ರಶ್ನೆಗೆ ಉತ್ತರಿಸಿ ತಾಲೂಕು ಪಂಚಾಯತಿ ಆಸ್ತಿ ಕಾಪಾಡುವುದು ನನ್ನ ಕರ್ತವ್ಯವವಾಗಿದೆ. ನಾನು ಯಾವುದೆ ಕಾನೂನು ಉಲ್ಲಂಘನೆ ಮಾಡಿಲ್ಲ. ನೀವು ಸಭೆಯಲ್ಲಿ ಮಾಡಿದ ಠರಾವನ್ನು ಜಿಲ್ಲಾ ಪಂಚಾಯತಿಗೆ ಕಳಿಸಿದ್ದೇನೆ. ಜಿ.ಪಂ ಸಭೆಯಲ್ಲಿ ಆಡಳಿತಾತ್ಮಕ ಅನುಮೋಧನೆಯಾಗಿದೆ. ಇದರಲ್ಲಿ ನನ್ನ ಪಾತ್ರ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.
ತಾ.ಪಂ ಅಧ್ಯಕ್ಷ ಹೇಮಣ್ಣ ಮುದಿರೆಡ್ಡಿ ಮಾತನಾಡಿ, ಖಾಲಿ ಜಾಗ ಎಲ್ಲಾ ಕಡೆ ಮಂಜೂರಾಗಿದೆ. ಈಗ ಇಲ್ಲಿ ಗುದ್ದಾಟ ನಡೆಯುತ್ತಿದೆ. ಇದೆ ವಿಚಾರವಾಗಿ ತುರ್ತು ಸಭೆ ಕರೆದದ್ದು ನನಗೆ ಗೊತ್ತಿಲ್ಲ. ಸದಸ್ಯರು ನೀವು ಹೇಳಿದ ಹಾಗೆ ಸಭೆಯಲ್ಲಿ ಠರಾವು ಮಾಡೋಣ ಎಂದು ಹೇಳಿ ಠರಾವು ಬರೆಸಿ ಸಭೆಯಲ್ಲಿ ನಡೆಯುತ್ತಿದ್ದ ವಾಗ್ವಾದಕ್ಕೆ ತೆರೆ ಎಳೆದರು. ತಾ.ಪಂ ಸದಸ್ಯೆ ಪಾರಿಬಾಯಿ ಲಮಾಣಿ ಮಾತನಾಡಿ, ನಾನು ಸ್ಥಾಯಿ ಸಮಿತಿ ಸಮಿತಿ ಅಧ್ಯಕ್ಷೆಯಾಗಿದ್ದೆ ಆದರೆ ನನಗೆ ಗೊತ್ತಿಲ್ಲದೆ ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ನನಗೆ ನೊಟೀಸ್ ನೀಡದೆ, ನನಗೆ ಗೊತ್ತಿಲ್ಲದೆ ಹೇಗೆ ಮಾಡಿದ್ದೀರಿ ಎಂದು ಏರು ದ್ವನಿಯಲ್ಲಿ ಕೇಳಲು ಆರಂಭಿಸುತ್ತಿದ್ದಂತೆಯೆ ಅವರ ಪತಿ ಸಭೆಗೆ ಎಂಟ್ರಿ ಹೊಡೆದು ಪತ್ನಿಯ ಪರವಾಗಿ ಮಾತನಾಡಿದ್ದು ಹಾಗೂ ಜಾಗ ಕೊಟ್ಟ ವಿಷಯದ ಕುರಿತು ಇದು ತಾ.ಪಂ ಮನೆ ವಿಷಯ.
ತಾ.ಪಂ ಉಪಾಧ್ಯಕ್ಷೆ ಕವಿತಾ ಬಿದರಿ, ತಾ.ಪಂ ಸದಸ್ಯ ದಿಳ್ಳೆಪ್ಪ ಹಳ್ಳಳ್ಳಿ ಮಾತನಾಡಿ, ತಾ.ಪಂ ಸದಸ್ಯೆ ರತ್ನಮ್ಮ ಕೆರೂಡಿ, ಸುಧಾ ಪಾಟೀಲ್, ಸುಜಾತಾ ಕೊಟಗಿಮನಿ ಮಾತನಾಡಿದರು. ಇಲಾಖಾವಾರು ಯಾವುದೆ ವಿಷಯ ಚರ್ಚೆಯಾಗದೆ ಸಭೆ ಮುಕ್ತಾಯ : ಬೆಳಿಗ್ಗೆ 11.30ಕ್ಕೆ ಸಭೆ ಆರಂಭ ಆಗುತ್ತಿದ್ದಂತೆಯೆ ಕೃಷಿಕ ಸಮಾಜಕ್ಕೆ ನೀಡಿದ್ದ ಜಾಗದ ವಿಷಯದ ಮೇಲೆ ಸುಮಾರು 3ತಾಸಿಗು ಹೆಚ್ಚು ಚರ್ಚೆಗಳು ನಡೆದವು. ಇದರಿಂದ ಯಾವುದೆ ಇಲಾಖೆಯ ಪ್ರಗತಿಯ ಪರಿಶೀಲನೆ ನಡೆಯದೆ ಸಭೆ ಮದ್ಯಾಹ್ನ 2ಗಂಟೆಗೆ ಮುಕ್ತಾಯಗೊಂಡಿತು. ಸಭೆಗೆ ಆಗಮಿಸಿದ್ದ ನಾನಾ ಇಲಾಖೆಯ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂತೆ ಬಂದ ದಾರಿಗೆ ನಿರ್ಗಮಿಸಿದರು.
ಮಲ್ಲಪ್ಪ ಚಲವಾದಿ, ಗೀತಾ ದನವಿನಮನಿ, ಬಸವರಾಜ ಭರಮಗೌಡ್ರ, ದಿಳ್ಳೆಪ್ಪ ಹಳ್ಳಳ್ಳಿ, ರಾಜು ಬಣಕಾರ, ಪುಷ್ಪಾ ಕಲ್ಲಜ್ಜನವರ, ಮಹಬೂಬ್‍ಸಾಬ್ ಮುಲ್ಲಾ, ಮಹೇಶ ಗುಬ್ಬಿ, ಸುಜಾತಾ ಕೊಟಗಿಮನಿ, ಬಂಗಾರಪ್ಪ ಇಕ್ಕೇರಿ, ರೇವಣೆಪ್ಪ ಯರಳ್ಳಿ, ಸುಲೋಚನಾ ಶಾಂತನಗೌಡ್ರ, ರತ್ನಮ್ಮ ಕೆರೂಡಿ, ಪಾರಿಬಾಯಿ ಲಮಾಣಿ, ಪಾರವ್ವ ಸೂಡಂಬೇರ, ಹನುಮವ್ವ ಜಡಿಯಣ್ಣನವರ ಇದ್ದರು.

loading...