ಗ್ರಾಮೀಣ ಅಂಚೇ ನೌಕರರ ಗೋಳು ಕೇಳುವವರಿಲ್ಲ !

0
860

ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ | ದುಡಿಮೆಗೆ ತಕ್ಕ ವೇತನ ಇಲ್ಲ
| ಚಂದ್ರಶೇಖರ ಸೋಮಣ್ಣವರ
ಶಿರಹಟ್ಟಿ: ಜೀತದಾಳು ಪದ್ದತಿ ವಿಮೋಚನೆಯಾಗಿ ದಶಕಗಳೇ ಕಳೆದಿವೆ ಆದರೆ ಸರಕಾರಿ ಇಲಾಖೆಯಲ್ಲಿ ಜೀತಪದ್ದತಿಯೊಂದು ಇಂದಿಗೂ ಸಹ ಜೀವಂತವಾಗಿದೆ ಎಂಬುದಕ್ಕೆ ಅಂಚೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಆರು ಲಕ್ಷ ನೌಕರರಲ್ಲಿ ಅರ್ಧದಷ್ಟು ಅಂದರೆ ಮೂರು ಲಕ್ಷ ನೌಕರರು ಕೇವಲ ಪುಡಿಗಾಸಿಗಾಗಿ ಸರಕಾರಿ ಗುಲಾಮರಂತೆ ಕೆಲಸ ಮಾಡುತ್ತಿರುವುದು ಅನ್ಯಾಯದ ಪರಮಾವದಿ ಸರಿ.
ರಾಜ್ಯ ಸರಕಾರದ ವಿವಿದ ಇಲಾಖೆಗಳಲ್ಲಿ ನಿನ್ನೆ ಮೊನ್ನೆ ದಿನಗೂಲಿ ನೆಲೆಗಳಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡ ಲಕ್ಷಾಂತರ ನೌಕರರು ಸೇವೆ ಖಾಯಂಗೊಂಡಿದ್ದಾರೆ. ಆದರೆ ಗ್ರಾಮೀಣ ಅಂಚೇ ನೌಕರರ ಅಳಲು ಮಾತ್ರ ಕೇಂದ್ರ ಸರ್ಕಾರ ಕೇಳಿಯು ಕೇಳದಂತೆ ಇರುವುದು ದುರ್ಧೈವದ ಸಂಗತಿಯಾಗಿದೆ.
ಗ್ರಾಮೀಣ ಅಂಚೇ ನೌಕರರ ಇಂತಹ ಶೋಚನೀಯ ಪರಸ್ಥಿತಿಯನ್ನು ಅಧಿವೇಶನದಲ್ಲಿ ಸಂಸತ್ ಸದಸ್ಯರು ಪ್ರಸ್ತಾಪಿಸಿ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಸಂಪರ್ಕ ಖಾತೆಯ ಸಚಿವರಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಒತ್ತಡ ಹಾಕುವ ಇಚ್ಚಾಶಕ್ತಿ ತೋರದೆ ಇದ್ದಾರೆ.
ಸಂಸತ್ ಸದಸ್ಯರಿಗೆ ಇಂದಿನ ಆಧುನಿಕ ಸಂಪರ್ಕ ಜಾಲಗಳ ಭರಾಟೆಯಲ್ಲಿ ಅಂಚೇ ಸೇವೆಯು ಇನ್ನೂ ಜೀವಂತವಾಗಿದೆ ಎನ್ನುವುದು ಪಾಪ ಅವರಿಗೆ ಗೊತ್ತಿರಲಿಕ್ಕಿಲ್ಲ ಹೀಗಾಗಿ ಅಂಚೇ ನೌಕರರ ಕಣ್ಣೀರಿನ ಕಥೆಯು ಅವರಿಗೆ ಗೊತ್ತಿದಿಯೋ ಇಲ್ಲವೋ ಆ ಭಗವಂತನಿಗೆ ಗೊತ್ತು.
ಕಾರ್ಮಿಕರ ಹಿತಚಿಂತಕರೆಂದು ಹೇಳುವ ರಾಜಕಾರಣಿಗಳು ಈ ಅಂಚೇ ಜೀತದಾಳುಗಳ ಬಗ್ಗೆ ಗಮನ ಹರಿಸದಿರುವುದು ಅವರ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿಯಾಗಿದೆ. ಸ್ವಾತಂತ್ರ್ಯೋತ್ತರದ ಏಳೂ ದಶಕಗಳಲ್ಲಿ ಲೋಕಸಭಾ ಸದಸ್ಯರು ತಮ್ಮ ಸಂಬಳ ಹಾಗೂ ಭತ್ಯಗಳನ್ನು ಹನ್ನೊಂದು ಭಾರಿ ಹೆಚ್ಚಿಸಿಕೊಂಡಿದ್ದಾರೆ. ಆದರೆ ತುಳಿತಕ್ಕೊಳಗಾದ ಮೂರು ಲಕ್ಷ ಅಂಚೇ ಗುಲಾಮರ ಗೋಳು ಮಾತ್ರ ಇವರಾರಿಗೂ ಕೇಳಿಸಿಲ್ಲ.
ಹೀಗಾಗಿ ಈ ಬಡಪಾಯಿ ನೌಕರರ ಗೋಳು ರಕ್ತ ಕಣ್ಣೀರಿನ ಕಥೆಯಾಗಿ ಹಾಗೆಯೆ ಉಳಿದಿದೆ. ಗ್ರಾಮೀಣ ಅಂಚೇ ನೌಕರರನ್ನು ನೇಮಕಾತಿಯ ಸಮಯದಲ್ಲಿ ಮೂರೂ ನಾಲ್ಕು ಗಂಟೆಗಳ ಕೆಲಸಕ್ಕೆಂದು ಹಾಗೂ ಇಲಾಖೇತರ ನೌಕರರೆಂದು ಮತ್ತು ಅರೆಕಾಲಿಕ ಕೆಲಸವೆಂದು ನೇಮಿಸಿಕೊಂಡು ಪ್ರತಿನಿತ್ಯವೂ ಏಳೆಂಟು ಗಂಟೆಗಳ ಅವಧಿಯ ಕೆಲಸವನ್ನು ನೀಡಿ ದುಡಿಸಿಕೊಳ್ಳಲಾಗುತ್ತಿದೆ.
ಕೇಂದ್ರ ಸರಕಾರದ ನೌಕರರಿಗೆ ಸಿಗುತ್ತಿರುವ ಯಾವುದೇ ಸ್ಥಾನಮಾನಗಳು ಮತ್ತು ಸೌಲಭ್ಯಗಳು ಸಹ ಇವರಿಗಿಲ್ಲ. ಹಾಗೂ ಇಲಾಖೆ ಇವರನ್ನು ಖಾಯಂ ನೌಕರರೆಂದು ಸಹ ಪರಿಗಣಿಸುತ್ತಿಲ್ಲ. ಒಟ್ಟಾರೆ ಸರಕಾರದ ಹಂತದಲ್ಲಿಯೇ ಇವರ ಶೋಷಣೆ ನಡೆಯುತ್ತಿದ್ದು ಇದೊಂದು ಸಂವಿಧಾನಕ್ಕೆಸಗಿದ ಅಪಚಾರ.
ಒಂದು ಹೋಟೆಲ್ಲನಲ್ಲಿ ಕೆಲಸ ಮಾಡುವ ಹುಡುಗನಿಗೆ ಇಂತಿಷ್ಟೇ ಸಂಬಳವನ್ನು ಕೊಡಬೇಕೆಂದು ತಾಕೀತು ಮಾಡುವ ಸರಕಾರ ಈ ಅಂಚೇ ಇಲಾಖೆಯ ಜೀತದಾಳುಗಳ ಬಗ್ಗೆ ಏಕೆ ಗಮನಹರಿಸಿಲ್ಲ ? ಇವರು ಮನುಷ್ಯರಲ್ಲವೆ ? ಕೆಲಸಕ್ಕೆ ಸಮಾನ ವೇತನವನ್ನು ಏಕೆ ನೀಡುತ್ತಿಲ್ಲವೆಂದು ಇಲ್ಲಿ ಪ್ರಶ್ನೆ ಮೂಡುತ್ತಿದ್ದು ಇದಕ್ಕೆ ಉತ್ತರ ಹುಡುಕಬೇಕಾಗಿದೆ.
ಗ್ರಾಮೀಣ ಅಂಚೇ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಿದ ಕಮಲೇಶಚಂದ್ರ ನೇತೃತ್ವದ ಸಮಿತಿಯು ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ಕಳೆದ ವರ್ಷ ನ. 24 ರಂದು ವರದಿ ಸಲ್ಲಿಸಿದ್ದರೂ ಸಹ ಸರಕಾರ ಈ ವರೆಗೂ ಸಹ ಅನುಷ್ಟಾನಗೊಳಿಸಲು ಹಿಂದೇಟು ಹಾಕುತ್ತಿರುವುದು ಖಂಡನೀಯವೆಂದೇ ಹೇಳಬಹುದು.
ಏಳನೆಯ ವೇತನದ ಆಯೋಗದ ಅನ್ವಯ ಕೇಂದ್ರ ಸರಕಾರ ಗ್ರಾಮೀಣ ಅಂಚೇ ನೌಕರರನ್ನು ಹೊರತುಪಡಿಸಿ ಉಳಿದೆಲ್ಲಾ ನೌಕರರ ಸಂಬಳವನ್ನು ಏರಿಕೆ ಮಾಡಿ ಸರಕಾರವೆ ತಾರತಮ್ಯ ಮಾಡಿ ಅನ್ಯಾಯವೆಸಗಿದೆ.
ಒಟ್ಟಾರೆಯಾಗಿ ಇಲಾಖೇತರ ಅಂಚೇ ನೌಕರರು ಕೇವಲ ಒಂಬತ್ತು-ಹತ್ತು ಸಾವಿರ ರೂ. ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾಗಿದ್ದು ಅವರು ತಮ್ಮ ಇಡೀ ಜೀವನವನ್ನು ಅತಂತ್ರ ಬದುಕಾಗಿ ಕಳೆಯುತ್ತಿದ್ದು ಈ ದಿಸೆಯಲ್ಲಿ ಗಾಡ ನಿದ್ರೆಯಲ್ಲಿರುವ ಕೇಂದ್ರ ಸರಕಾರ ಪ್ರಧಾನ ಮಂತ್ರಿಗಳು ಕೇಂದ್ರ ಸಂಪರ್ಕ ಖಾತೆಯ ಮಂತ್ರಿಗಳು ಹಾಗೂ ಸಂಸತ್ ಸದಸ್ಯರುಗಳು ಈಗಲಾದರೂ ಸಹ ಎಚ್ಚೆತ್ತುಕೊಂಡು ಇವರ ಸಮಸ್ಯೆಗಳನ್ನು ಇದೇ ಅಗಸ್ಟ ತಿಂಗಳ ಹದಿನೈದರೊಳಗಾಗಿ ಪರಿಹರಿಸದಿದ್ದಲ್ಲಿ ಬೇರೆ ಯಾವ ಉಪಾಯ ಕಾಣದೆ ಅಸಹಾಯಕರಾದ ಇವರು ಮುಂಬರುವ ಅಗಸ್ಟ 16 ರಿಂದ ಅನಿರ್ಧಿಷ್ಟ ಮುಷ್ಕರ ಆರಂಭಿಸಲಿದ್ದಾರೆ.

loading...