ಜನಪ್ರತಿನಿಧಿಗಳು ಸರ್ಕಾರಿ ಶಾಲೆಯ ಉನ್ನತೀಕರಣಕ್ಕೆ ಶ್ರಮಿಸಲಿ: ಹೊರಟ್ಟಿ

0
14

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಜನಪ್ರತಿನಿಧಿಗಳು ತಾವು ಓದಿದ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ಪ್ರಯತ್ನಿಸಬೇಕು. ಶಾಲೆಗಳನ್ನು ದತ್ತು ತೆಗೆದುಕೊಂಡು ಉನ್ನತೀಕರಿಸಿದಾಗ ಶಾಲೆಗಳಲ್ಲಿ ಹಾಜರಾತಿ ಹೆಚ್ಚಳವಾಗುತ್ತದೆ, ಆಗ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಮೆಯವೇ ಬರುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಹೇಳಿದರು.
ಹುಬ್ಬಳ್ಳಿಯ ಸರಕಾರಿ ಪ್ರಾಥಮಿಕ ಶಾಲೆ ಕೆಬಿಎಸ್ ನಂ.16ರಲ್ಲಿ ಏಕಸ್ ಪ್ರತಿಷ್ಠಾನವು ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಅಗಸ್ತ್ಯ ಇಂಟರ್‍ನ್ಯಾಷನಲ್ ಫೌಂಡೇಷನ್ ಪಾಲುದಾರಿಕೆಯಲ್ಲಿ ಸರಕಾರಿ ಮಕ್ಕಳಿಗೆ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಶಿಕ್ಷಣ ಒದಗಿಸಲು ನೂತನವಾಗಿ ಕಟ್ಟಿರುವ ಅನಸೂಯ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಸಿ ಅವರು ಮಾತನಾಡಿದರು. ಪ್ರಾಥಮಿಕ ಶಿಕ್ಷಣವನನು ಕನ್ನಡ ಮಾಧ್ಯಮದಲ್ಲಿ ಕಲಿತವರು ಇಂದು ಅನೇಕ ಉನ್ನತ ಹುದ್ದೆಗಳನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.
ಪಾಲಕರು ಇಂಗ್ಲೀಷ್ ಶಿಕ್ಷಣದಿಂದ ಮಾತ್ರ ಮಕ್ಕಳ ಏಳಿಗೆ ಸಾಧ್ಯ ಎಂದು ತಪ್ಪು ತಿಳಿಯಬಾರದು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕ ಸಿಬ್ಬಂದಿಗಳಿದ್ದಾರೆ. ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು. ಶಿಕ್ಷಕರು ಶಾಲೆಗಳಲ್ಲಿ ವಿಜ್ಞಾನ ತಂತ್ರಜ್ಞಾನದ ವಿಷಯಗಳನ್ನು ಮಕ್ಕಳಿಗೆ ಆಸಕ್ತಿದಾಯಕವಾಗಿ ಕಲಿಸುವುದುರ ಮೂಲಕ ವಿಜ್ಞಾನ ವಿಷಯದಲ್ಲಿ ಆಸಕ್ತಿ ಉಂಟಾಗುವ ರೀತಿ ಮಾಡಬೇಕು. ತಾಯಿ ಹಾಗೂ ಗುರುಗಳ ಋಣ ತೀರಿಸುವುದು ಕಷ್ಟ ಇಂದು ಅರವಿಂದ ಮೆಳ್ಳಿಗೇರಿಯವರು ತಮ್ಮ ತಾಯಿ ಹೆಸರಿನಲ್ಲಿ ತಾವು ಕಲಿತ ಶಾಲೆಗೆ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಕಟ್ಟಿಸಿ ಕೊಟ್ಟಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನವಲಗುಂದ ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪವರು ವಿಜ್ಞಾನ ತಂತ್ರಜ್ಞಾನದ ವಿಷಯಗಳನ್ನು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಪ್ರಾಯೋಗಿಕವಾಗಿ ಕಲಿಸುವುದರಿಂದ ಅವರು ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ. ಈ ವಿಜ್ಞಾನ ಕೇಂದ್ರದ ಸದುಪಯೋಗವನ್ನು ಎಲ್ಲಾ ಶಿಕ್ಷಕರು ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಸಂಪರ್ಕ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರಮೇಠ ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ವೈಜ್ಞಾನಿಕ ಮನೋಭಾವನ್ನು ಅಳವಡಿಸಿಕೊಂಡಿದ್ದರಿಂದ ಅವುಗಳು ಇಂದು ಮುಂದುವರಿದೆ. ನಮ್ಮ ದೇಶದಲ್ಲೂ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರಗಳು ನೆರವಾಗಿಲಿವೆ. ಶಿಕ್ಷಣ ಇಲಾಖೆಯು ಅನಸೂಯ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಗುಣಾತ್ಮಕವಾಗಿ ಬಳಸಿಕೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಏಕಸ್ ಪೌಂಡೇಷನ್‍ನ ಅರವಿಂದ ಮೆಳ್ಳಿಗೇರಿಯವರು ಸರಕಾರಿ ಶಾಳೆಗಳ ಮಕ್ಕಳಿಗೆ ಸ್ಟೆಮ್ ಶಿಕ್ಷಣ ಒದಗಿಸಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ವಿಜ್ಞಾನದ ಪ್ರಾಯೋಗಿಕ ಪಾಠಗಳು ಮತ್ತು ಡಿಜಿಟಲ್ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಅತ್ಯುತ್ತಮ ವಿಜ್ಞಾನ ಶಿಕ್ಷಣ ನೀಡಿವುದು ಹಾಗೂ ಮಕ್ಕಳಿಗೆ ಸಂತಸದಾಯ ಕಲಿಕೆಯ ವಾತಾವರಣವನ್ನು ಕೇಂದ್ರದಲ್ಲಿ ನಿರ್ಮಿಸಲಾಗಿದೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರದಲ್ಲಿ ವಿಷಯಗಳನ್ನು ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ಪ್ರಯೋಗದ ಮೂಲಕ ಕಲಿಸುವುದಕ್ಕೆ ಕೇಂದ್ರದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಸೃಜನಶೀಲ ಬರಹ, ಮಾಧ್ಯಮ ಕಲೆ, ರೊಬೋಟಿಕ್ಸ್ ಮತ್ತು ಐಟಿ ವಿಷಯಗಳ ಬಗ್ಗೆಯೂ ಕೇಂದ್ರದಲ್ಲಿ ತಿಳಿಸಿಕೊಡಲಾಗುವುದು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶಟ್ಟರ್, ಉಪಮಹಾಪೌರರಾದ ಮೇನಕಾ ಹುರುಳಿ, ಮಾಜಿ ಮಹಾಪೌರ ಶಿವು ಹಿರೇಮಠ, ಪಾಲಿಕೆ ಸದಸ್ಯೆ ಲೀನಾ ಸುನೀಲ ಮಿಸ್ಕಿ, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಅಗಸ್ತ್ಯ ಪೌಂಡೇಷನ್ ಮ್ಯಾನೇಜರ್ ಎಫ್ ಮಹಾವೀರ ಕುಮಾರ, ಬಿಇಓ ಅಶೋಕ ಬಿ ಕಮ್ಮಾರ ಸೇರಿದಂತೆ ಶಾಲೆಯ ಹಳೆಯ ಗುರುವೃಂದದವರು, ವಿದ್ಯಾರ್ಥಿಗಳು, ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.

loading...