ಗೋಕಾಕ : ಅಧಿಕಾರ ಎಂದಿಗೂ ಶಾಶ್ವತವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಜನರ ಬವಣೆಗಳನ್ನು ನೀಗಿಸಲು ರಾಜಕೀಯಕ್ಕೆ ಬಂದೆ. ಆದರೆ ಅಧಿಕಾರದ ಬೆನ್ನಿಗಾಗಿ ಎಂದಿಗೂ ಬಿದ್ದವನಲ್ಲ. ನನಗೆ ನೀಡಿರುವ ಅಧಿಕಾರವನ್ನು ಜನರಿಗಾಗಿ ಉಪಯೋಗಿಸುತ್ತಿದ್ದೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
     ತಾಲೂಕಿನ ಗಣೇಶವಾಡಿ ಗ್ರಾಮದಲ್ಲಿ ಸೋಮವಾರದಂದು 2 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಅಡಿಗಲ್ಲನ್ನು ನೆರವೇರಿಸಿ ಅವರು ಮಾತನಾಡಿದರು.
     ಕಳೆದ 13 ವರ್ಷಗಳಲ್ಲಿ ಅರಭಾವಿ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಈ ಭಾಗದ ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಎಲ್ಲ ವರ್ಗದವರನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಆಧ್ಯತೆ ನೀಡುತ್ತಿದ್ದೇನೆ. ಹಣ, ಆಸ್ತಿ ಗಳಿಸಲು ರಾಜಕೀಯಕ್ಕೆ ಬಂದಿಲ್ಲ. ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆಯಿಂದ ಅರಭಾವಿ ಕ್ಷೇತ್ರವನ್ನು ನಂದನವನ ಮಾಡಲು ಹಗಲಿರುಳು ಶ್ರಮಿಸುತ್ತಿದ್ದೇನೆ. ಈ ಭಾಗದ ಶಾಸಕನಾಗಿ ಜನರ ನಿರೀಕ್ಷೆಗಿಂತ ಹೆಚ್ಚಾಗಿ ಕೆಲಸ ಮಾಡುತ್ತ ಅವರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಸ್ಮರಣೀಯ ಕಾರ್ಯಗಳನ್ನು ಮಾಡುವುದೇ ನನ್ನ ಧ್ಯೇಯವಾಗಿದೆ. ಅಧಿಕಾರ ಬರುತ್ತದೆ. ಹೋಗುತ್ತದೆ. ಆದರೆ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆಂದು ಅವರು ಹೇಳಿದರು.
     ಮುಂದಿನ ವರ್ಷದಿಂದ ಗಣೇಶವಾಡಿ ಗ್ರಾಮಕ್ಕೆ ಸರ್ಕಾರಿ ಪ್ರೌಢ ಶಾಲೆಯನ್ನು ಮಂಜೂರು ಮಾಡಿಸುತ್ತೇನೆ. ಗ್ರಾಮಸ್ಥರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವಂತೆ ಅವರು ತಿಳಿಸಿದರು.
     ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾಶುಗರ ನಿರ್ದೇಶಕ ಶಿವಲಿಂಗ ಪೂಜೇರಿ ಮಾತನಾಡಿ, ಗಣೇಶವಾಡಿ ಗ್ರಾಮದ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೇ ಅಭಿವೃದ್ಧಿ ಕಾರ್ಯಗಳಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಾಲಚಂದ್ರ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸೋಣ ಎಂದರು.
     ಹಿರಿಯ ಸಹಕಾರಿ ಬಸಗೌಡ ಪಾಟೀಲ(ನಾಗನೂರ), ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ(ಕಲ್ಲೋಳಿ), ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಎಪಿಎಂಸಿ ನಿರ್ದೇಶಕರಾದ ಶ್ರೀಪತಿ ಗಣೇಶವಾಡಿ, ಪರಸಪ್ಪ ಚೌಕಾಶಿ, ನ್ಯಾಯವಾದಿ ಸುರೇಶ ಜಾಧವ, ಪ್ರಭಾಶುಗರ ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ರಾಮಣ್ಣಾ ಬಂಡಿ, ಬಸವಂತ ಕಮತಿ, ವಿಠ್ಠಲ ಪಾಟೀಲ, ಮಹಾದೇವ ತುಕ್ಕಾನಟ್ಟಿ, ಮಾಳಪ್ಪ ಜಾಗನೂರ, ಶಂಕರ ಕಮತಿ, ದಂಡಾಪೂರ ಗ್ರಾಪಂ ಉಪಾಧ್ಯಕ್ಷೆ ಸಾಂವಕ್ಕ ಮೂಲಿಮನಿ, ಚಿರಾಕಲಿಶಾ ಮಕಾನದಾರ, ಭೀಮಶಿ ಹುಕ್ಕೇರಿ, ಬಸವರಾಜ ಸನದಿ, ಅಶೋಕ ಖಂಡ್ರಟ್ಟಿ, ರಾಮಕೃಷ್ಣ ಹೊರಟ್ಟಿ, ಕೆಂಚಪ್ಪ ಪಾಟೀಲ, ಯಲ್ಲಪ್ಪ ಪಾಟೀಲ, ಬಾಳೇಶ ಜಾಧವ, ಪರಸಪ್ಪ ಕುಡ್ಡಗೋಳ, ಅಧಿಕಾರಿಗಳಾದ ಎಫ್.ಜಿ. ಚಿನ್ನನ್ನವರ, ಎ.ಬಿ. ಹೊನ್ನಾವರ, ಎಂ.ಎಂ. ಘೂಳಪ್ಪನವರ, ಎಸ್.ವ್ಹಿ. ಕಲ್ಲಪ್ಪನವರ, ಶಿವರಾಯಿ, ಮುಂತಾದವರು ಉಪಸ್ಥಿತರಿದ್ದರು.
ಉದ್ಘಾಟನೆ : 1.06 ಕೋಟಿ ರೂ. ವೆಚ್ಚದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಕಾಮಗಾರಿ, 50 ಲಕ್ಷ ರೂ. ವೆಚ್ಚದ ಸಮಾಜ ಕಲ್ಯಾಣ ಇಲಾಖೆ ಹಾಗೂ ನೀರಾವರಿ ಇಲಾಖೆಯ ರಸ್ತೆ ಹಾಗೂ ಚರಂಡಿ ಕಾಮಗಾರಿ ಹಾಗೂ ಶಾಸಕರ ಅನುದಾನದಡಿ ಕುಡಿಯುವ ನೀರಿನ ಪೈಪಲೈನ್ ಕಾಮಗಾರಿಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು.
ಅಡಿಗಲ್ಲು : ಸಮಾಜ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಡಾ.ಅಂಬೇಡ್ಕರ ಭವನ, 25 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎಸ್‍ಸಿಪಿ ಯೋಜನೆಯಡಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಡಿಗಲ್ಲು ನೆರವೇರಿಸಿದರು.
ಕೋಟ್ : “ಜಿಎಲ್‍ಬಿಸಿ ಕಾಲುವೆ ದುರಸ್ತಿಯಲ್ಲಿದೆ. ಧುಪದಾಳ ಜಲಾಶಯದಿಂದ ಜಮಖಂಡಿವರೆಗೆ ದುರಸ್ತಿ ಮಾಡಬೇಕಾದ ಅಗತ್ಯವಿದೆ. ಘಟಪ್ರಭಾ ಕಾಲುವೆಯನ್ನು ನವೀಕರಣಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ನೀರು ಅಮೂಲ್ಯವಾದದ್ದು. ನೀರನ್ನು ಮಿತವಾಗಿ ಬಳಸಿ. ಎಲ್ಲರೂ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿರಿ.” -ಬಾಲಚಂದ್ರ ಜಾರಕಿಹೊಳಿ, ಶಾಸಕ
loading...