ಜಿಲ್ಲೆಯಲ್ಲಿ ಗೊಂದಲದ ಗೂಡಾದ ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆ

0
22

ದೀಪಕ ಶೆಟ್ಟಿ
ಕನ್ನಡಮ್ಮ ಸುದ್ದಿ-ಕಾರವಾರ: ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರು ಸಶಕ್ತರಾಗಿರಬೇಕು ಎಂಬ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆರಂಭಿಸಿರುವ ಎರಡು ಪ್ರತ್ಯೇಕ ಯೋಜನೆಲ್ಲಿ ರಾಜ್ಯ ಸರಕಾರದ ಮಾತೃಪೂರ್ಣ ಯೋಜನೆ ಇಲ್ಲಿನ ಭೌಗೋಳಿಕತೆಗೆ ಹೊಂದಿಕೊಳ್ಳದೆ ವಿಫಲವಾಗುತ್ತಿದ್ದರೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮಾತೃವಂದನ ಯೋಜನೆ ಗೊಂದಲಗಳಿಲ್ಲದೇ ಯಶಸ್ವಿಯಾಗುತ್ತಿದೆ.

ರಾಜ್ಯ ಸರಕಾರವು ಕಳೆದ 2017ರಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸುವ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡಲು ಹಾಗೂ ರೋಗಗಳಿಂದ ದೂರವಿಡಲು ಮಾತೃಪೂರ್ಣ ಯೋಜನೆ ಪ್ರಾರಂಭಿಸಿತ್ತು. ಅಂಗನವಾಡಿ ಕೇಂದ್ರಗಳಲ್ಲಿ ಈ ಪೌಷ್ಠಿಕ ಆಹಾರವನ್ನು ತಯಾರಿಸಲಾಗುತ್ತಿದ್ದು ಬಾಣಂತಿಯರು ಹಾಗೂ ಗರ್ಭಿಣಿಯರಯು ಅಲ್ಲಿಗೆ ಬಂದು ಊಟ ಮಾಡಬೇಕು. ಇನ್ನು ಕೇಂದ್ರ ಸರಕಾರವು ಪ್ರಸಕ್ತ ವರ್ಷದಲ್ಲಿ ಪ್ರಧಾನ ಮಂತ್ರಿ ಮಾತೃವಂದನ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಈ ಯೋಜನೆಯಡಿ ಮಹಿಳೆಯರ ಮೊದಲ ಪ್ರಸವದ ಬಳಿಕ ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಪ್ರೋತ್ಸಾಹಧನದ ರೂಪದಲ್ಲಿ ನೀಡಲಾಗುತ್ತದೆ. ತಮ್ಮ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಾತೃವಂದನ ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ರೋತ್ಸಾಹಧನವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹೀಗಾಗಿ ಯೋಜನೆ ಯಶಸ್ವಿಯಾಗಿ ಮುಂದುವರೆದಿದೆ. ಆದರೆ ಮಾತೃಪೂರ್ಣ ಯೋಜನೆಯಡಿ ಫಲಾನುಭವಿಗಳು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಅಥವಾ ಮಳೆಯಲ್ಲಿ ಒಪ್ಪತ್ತಿನ ಊಟಕ್ಕಾಗಿ ಅಂಗನವಾಡಿಗೆ ಬಂದು ಊಟ ಮಾಡಬೇಕಾದ ಅನಿವಾರ್ಯತೆ ಇದೆ. ಬಹುತೇಕ ಅಂಗನವಾಡಿಗಳು ಕಿ.ಮೀ.ಗಟ್ಟಲೇ ದೂರವಿರುವುದರಿಂದ ಭೌಗೋಳಿಕವಾಗಿ ವಿಶಾಲವಾಗಿರುವ ಉತ್ತರ ಕನ್ನಡ ಜಿಲ್ಲೆಯ ಫಲಾನುಭವಿಗಳಿಗೆ ಹೊಂದಾಣಿಕೆಯಾದಿರುವ ಕಾರಣ ಅಧಿಕ ಸಂಖ್ಯೆಯ ಮಹಿಳೆಯರು ತಮಗೆ ಅಂಗನವಾಡಿಯಲ್ಲಿ ನೀಡುವ ಊಟ ಬೇಡ ಎಂದು ಬರೆದು ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಈ ಯೋಜನೆ ಪ್ರಗತಿ ಕಂಡಿಲ್ಲ.
ಮಾತೃಪೂರ್ಣ ಶೇ.50: ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯಡಿ ಒಟ್ಟೂ 2687 ಅಂಗನವಾಡಿ ಕೇಂದ್ರಗಳಲ್ಲಿ 9981 ಗರ್ಭಿಣಿಯರಿಗೆ ಹಾಗೂ 9150 ಬಾಣಂತಿಯರಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ಗುರಿ ಹೊಂದಲಾಗಿತ್ತು. ಆದರೆ ಈ 9981 ಗರ್ಭಿಣಿಯರಲ್ಲಿ ಕೇವಲ 5210 ಮಂದಿ ಮಾತ್ರ ಊಟ ಸ್ವೀಕರಿಸುತ್ತಿದ್ದು ಶೇ.52ರಷ್ಟು ಮಾತ್ರ ಸಾಧನೆ ಕಂಡಿದೆ. ಇನ್ನು 9150 ಬಾಣಂತಿಯರಲ್ಲಿ 4668 ಮಂದಿ ಮಾತ್ರ ಆಹಾರ ಸ್ವೀಕರಿಸುತ್ತಿದ್ದು ಶೇ.51 ರಷ್ಟು ಮಾತ್ರ ಸಾಧನೆಯಾಗಿದೆ. ಒಟ್ಟಾರೆಯಾಗಿ ಗಮನಿಸಿದಾಗ ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯು ಶೇ.50ರಷ್ಟು ಮಾತೃ ಪ್ರಗತಿಯಾಗಿರುವುದು ಕಂಡು ಬರುತ್ತದೆ.

ಯಶಸ್ವಿಯತ್ತ ಮಾತೃವಂದನ: ಕೇಂದ್ರ ಸರಕಾರದ ಮಾತೃವಂದನ ಯೋಜನೆಯಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಸಹಾಯಧನ ಸಂದಾಯವಾಗುವ ಕಾರಣ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗುತ್ತಿದೆ. 3 ಕಂತುಗಳಲ್ಲಿ ಫಲಾನುಭವಿಗಳಿಗೆ ಆರ್ಥಿಕ ನೆರವು ದೊರೆಯುತ್ತದೆ. ಮೊದಲ ಕಂತಿನಲ್ಲಿ ಒಂದು ಸಾವಿರ, ಎರಡನೇ ಕಂತಿನಲ್ಲಿ 2 ಸಾವಿರ ಹಾಗು 3ನೇ ಕಂತಿನಲ್ಲಿ 2 ಸಾವಿರ ಸೇರಿ ಒಟ್ಟೂ 5 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ಯೋಜನೆಯಡಿ ಜಿಲ್ಲೆಯ 11,670 ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ಅಲ್ಲದೆ ಫಲಾನುಭವಿಗಳಿಂದ 28,313 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅವುಗಳಲ್ಲಿ ಮೂರು ಕಂತುಗಳು ಸೇರಿ 20,945 ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ, 4,880 ಅರ್ಜಿಗಳು ವಿಚಾರಣೆ ಪ್ರಕ್ರಿಯೆಯಲ್ಲಿದ್ದು 2,487 ಅರ್ಜಿಗಳು ಮಾತ್ರ ತಿರಸ್ಕøತಗೊಂಡಿವೆ. ಈ ಯೋಜನೆಯಡಿ ಈಗಾಗಲೇ ಮೂರೂವರೆ ಕೋಟಿ ರೂ. ಸಹಾಯಧನವನ್ನು ಫಲಾನುಭವಿಗಳೆಗೆ ಹಂಚಿಕೆ ಮಾಡಲಾಗಿದೆ.

loading...