ಜಿಲ್ಲೆಯಲ್ಲಿ ಭಾರಿ ಮಳೆ

0
25

ರೈತಾಪಿ ವರ್ಗದಲ್ಲಿ ಸಂತಸ:ಇನ್ನೊಂದೆಡೆ ಪ್ರವಾಹ ಭೀತಿ

ದುಂಡೇಶ ನಂದಿ
ಗೋಕಾಕ: ಮಹಾರಾಜ್ಯ ಹಾಗೂ ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ರೈತಾಪಿ ವರ್ಗ ಹಾಗೂ ನಾಗರಿಕರಲ್ಲಿ ಸಂತಸ ತಂದಿದೆ. ಮುಂಗಾರು ಹಂಗಾಮು ಆರಂಭವಾಗಿ ತಿಂಗಳು ಕಳೆದರು ತಾಲೂಕಿನ ಹಳ್ಳಿಗಳಲ್ಲಿರುವ ರೈತರು ಮಳೆಯ ಭರವಸೆಯ ಮೇಲೆ ಒಣ ಭೂಮಿಯಲ್ಲಿ ಬಿತ್ತನೆ ಮಾಡಿ, ಇನ್ನೊಂದಿಷ್ಟು ಜನ ಮಳೆ ಕೊರತೆಯಿಂದಾಗಿ ರೈತರು ಭೂಮಿಯಲ್ಲಿ ಭಿತ್ತನೆ ಮಾಡಿರುವದಿಲ್ಲ. ಹೀಗಾಗಿ ಈಗ ಹಗಲಿರುಳು ಜಿಟಿ ಜಿಟಿ ಮಳೆ ಸುರಿಯುತ್ತಿರುವದರಿಂದ ಕೃಷಿ ಚಟುವಟಿಕೆಯಲ್ಲಿ ರೈತರು ನಿರತರಾಗಿದ್ದಾರೆ.
ತುಂತುರು ಮಳೆ ಹಗಲಿರುಳು ಆಗಾಗ ಸುರಿದು ರೈತಾಪಿವರ್ಗದಲ್ಲಿ ಮಂದಹಾಸ ಮೂಡಿಸಿದರೆ. ಜಿಟಿ ಜಿಟಿ ಮಳೆಯು ಶಾಲಾ ಮಕ್ಕಳಿಗೆ ಮೋಜು ನೀಡುತ್ತಿರುವದು ಒಂದೆಡೆಯಾದರೇ ಇನ್ನೊಂದೆಡೆ ಇಲ್ಲಿಯ ಜನಜೀವನ ಅಸ್ಥವ್ಯಸ್ಥಗೊಂಡಿದ್ದರು ಸಹ ಲೆಕ್ಕಿಸದೇ ಹಳ್ಳ ಕೊಳ್ಳ ತುಂಬಿ ಹರಿಯಲಿ, ಹೊಲ ಗದ್ದೆಗಳಲ್ಲಿ ನೀರು ಸಾಕಷ್ಟು ನಿಂತುಕೊಂಡರು ಪರವಾಗಿಲ್ಲ ಆದರೆ ಇನ್ನೂ ಸಾಕಷ್ಟು ಮಳೆ ಆಗಲಿ ಅಂಬುವದು ರೈತಾಪಿವರ್ಗ ಹಾಗೂ ನಾಗರಿಕರ ಅನಿಸಿಕೆಯಾಗಿದೆ.
ಈ ಜಿಟಿ ಜಿಟಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಣ್ಣಿನಿಂದ ನಿರ್ಮಿತಗೊಂಡ, ಮಣ್ಣಿನ ಮೇಲ್ಛಾವಣಿ ಹೊಂದಿದ, ಹಳೆಯ ಶೀಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸವಾಗಿರುವ ಗ್ರಾಮಗಳ ನಾಗರಿಕರು ಪ್ರಾಣದ ಭಯ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.
ತುಂಬಿ ಹರಿಯುತ್ತಿರುವ ನದಿಗಳು: ಜಿಲ್ಲೆಯಾಧ್ಯಂತ ಎಡೆಬಿಡದೇ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನಗರದ ಬಳಿ ಹರಿಯುತ್ತಿರುವ ಮಾರ್ಕಂಡೇಯ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಈ ನದಿಗಳ ಮೂಲಕ ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳ ಕೆಳ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇನ್ನೂ ಕೆಲದಿನಗಳ ವರೆಗೆ ಹೀಗೆ ಮಳೆಯಾದರೇ ಪ್ರಮುಖ ಸೇತುವೆಯಾದ ಲೊಳಸೂರ ಸೇತುವೆಯ ಮೇಲಿನ ಸಂಚಾರ ಸಹ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಈ ನದಿಗಳ ಹರಿಯುವ ದಡದಲ್ಲಿ ವಾಸವಾಗಿರುವ ತಾಲೂಕು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ವಾಸವಾಗಿರುವ ನಾಗರಿಕರು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷೀತ ಸ್ಥಳ ಸೇರುವುದು ಅನಿವಾರ್ಯ ಸಂಗತಿಯಾಗಿದೆ.
ಪ್ರವಾಹ ಭೀತಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಆಣೆಕಟ್ಟುಗಳು ತುಂಬಿದ್ದು ಶಿರೂರು ಡ್ಯಾಮ್‌ನಿಂದ ಮಾರ್ಕಂಡೇಯ ನದಿಗೆ ನೀರು ಹರಿಸುವದಾಗಿ ಈಗಾಗಲೇ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಘಟಪ್ರಭಾ ನದಿಯ ದಡದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಎಚ್ಚರಿಕೆವಹಿಸಬೇಕಿದೆ.
ಅಲ್ಲದೇ ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಹೆಚ್ಚೆಚ್ಚು ನೀರು ಹರಿದು ಬರುತ್ತಿದ್ದು ಹೀಗಾಗಿ ಮಾರ್ಕಂಡೇಯ ನದಿಗೆ ಶೀರೂರು ಜಲಾಶಯದಿಂದ ನೀರು ಹರಿಸಿದಲ್ಲಿ ಗೋಕಾಕ ನಗರದಲ್ಲಿ ಈ ಮಾರ್ಕಂಡೇಯ ನದಿ ನೀರು ಘಟಪ್ರಭಾ ನದಿಗೆ ಸೇರಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವು ಉಂಟಾಗುವದರಿಂದ ಪ್ರವಾಹ ಭೀತಿ ಎದುರಾಗಲಿದೆ. ಹೀಗಾಗಿ ಘಟಪ್ರಭಾ ನದಿಯ ನದಿದಡದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಮುಂಜಾಗ್ರತಾ ಕ್ರಮವಾಗಿ ಬೇರೆಡೆಗಡ ಸ್ಥಳಾಂತರವಾಗುವದು ಉತ್ತಮ ಎನ್ನಲಾಗಿದೆ.

“ಪ್ರವಾಹ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಕಂಟ್ರೋಲ್‌ ರೂಮ್‌ ಸ್ಥಾಪಿಸಲಾಗಿದ್ದು, ತಹಶೀಲ್ದಾರ ಕಚೇರಿ ದೂರವಾಣಿ ಸಂಖ್ಯೆ, 08332-225073, ಮೂಡಲಗಿ ತಹಶೀಲ್ದಾರ ಕಚೇರಿ ದೂರವಾಣಿ ಸಂಖ್ಯೆ, 08334-251212, ತಾಲೂಕ ಪಂಚಾಯತ ಕಾರ್ಯಾಲಯ ಗೋಕಾಕ ದೂರವಾಣಿ ಸಂಖ್ಯೆ, 08332-225063, ಹೆಸ್ಕಾಂ ಕಚೇರಿ ಗೋಕಾಕ ದೂರವಾಣಿ ಸಂಖ್ಯೆ, 08332-228968, ಹೆಸ್ಕಾಂ ಕಚೇರಿ ಘಟಪ್ರಭಾ ದೂರವಾಣಿ ಸಂಖ್ಯೆ, 08332-286240 ಸಂಪರ್ಕಿಸಬಹುದಾಗಿದೆ.”

ಮಾರ್ಕಂಡೇಯ ನದಿಗೆ ಈಗಾಗಲೇ ಶೀರೂರು ಜಲಾಶಯದಿಂದ ನೀರು ಬಿಡುವದಾಗಿ ನೀರಾವರಿ ಇಲಾಖೆಯಿಂದ ಮಾಹಿತಿ ಬಂದಿದ್ದು, ಘಟಪ್ರಭಾ ನದಿಯ ತಟದಲ್ಲಿರುವ ಗ್ರಾಮಸ್ಥರು ನದಿಯ ತಟದಿಂದ ಬೇರೆಡೆಗೆ ಸ್ಥಾಳಂತರಗೊಳ್ಳಲು ಸೂಕ್ತ ಕ್ರಮಕೈಗೊಳ್ಳಲಾಗಿದೆ.
-ಜಿ ಎಸ್‌ ಮಾಳಗಿ ತಹಶೀಲ್ದಾರ ಗೋಕಾಕ.
ಮಣ್ಣಿನಿಂದ ನಿರ್ಮಿತಗೊಂಡ ಹಾಗೂ ಮಣ್ಣಿನ ಮೇಲ್ಛಾವಣಿಹೊಂದಿದ ಹಳೆಯ ಶೀಥಿಲಾವಸ್ಥೆಯಲ್ಲಿರುವ ಹಳ್ಳಿಗಳಲ್ಲಿರುವ ನಾಗರಿಕರು ವಾಸವಾಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. -ಅಡಿವೆಪ್ಪ ಕಂಕಾಳಿ, ಅಡಿಬಟ್ಟಿ ಗ್ರಾಮಸ್ಥ.

ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಚಿಂತಿತರಾಗಿದ್ದ ರೈತರ ಮುಖದಲ್ಲಿ ಈ ಜಿಟಿ ಜಿಟಿ ಮಳೆ ಹಗಲಿರುಳು ಸುರಿಯುತ್ತಿರುವುದು ಸಂತಸ ತಂದಿದೆ.
-ಭರಮಣ್ಣಾ ಉಪ್ಪಾರ ಗ್ರಾಪಂ ಸದಸ್ಯ ತುಕ್ಕಾನಟ್ಟಿ.

loading...