ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವತ್ತ ಭಾರತ ಚಿತ್ತ

0
3

ಜಮೈಕಾ:- ಮೊದಲ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ ನಾಳೆಯಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವ ತುಡಿತದಲ್ಲಿದೆ. ಉಭಯ ತಂಡಗಳ ಈ ಕಾದಾಟಕ್ಕೆ ಇಲ್ಲಿನ ಕಿಂಗ್ಸ್‌ಸ್ಟನ್ ಸಬೀನಾ ಪಾರ್ಕ್‌ ಅಂಗಳದಲ್ಲಿ ವೇದಿಕೆ ಸಿದ್ಧವಾಗಿದೆ.
ಟೀಮ್‌ ಇಂಡಿಯಾ ಚಿತ್ತ ಎರಡು ಪಂದ್ಯಗಳ ಟೆಸ್ಟ್‌ ಸರಣಿ ವೈಟ್‌ ವಾಶ್‌ ಮಾಡಿಕೊಳ್ಳುವತ್ತ ಇದೆ. ಆದರೆ, ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಆತಿಥೇಯ ವೆಸ್ಟ್‌ ಇಂಡೀಸ್‌, ಎರಡನೇ ಪಂದ್ಯ ಸರಣಿ ಡ್ರಾ ಮಾಡಿಕೊಂಡು ತವರು ಅಭಿಮಾನಿಗಳ ಎದುರು ಮುಖಭಂಗ ದಿಂದ ತಪ್ಪಿಸಿಕೊಳ್ಳುವ ಇರಾದೆಯಲ್ಲಿದೆ. ಒಂದು ವೇಳೆ ನಾಳೆಯಿಂದ ಆರಂಭವಾಗುವ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಗೆದ್ದರೆ 17 ವರ್ಷಗಳ ಬಳಿಕ ಭಾರತ ವಿರುದ್ಧ ಮೊದಲ ಗೆಲುವು ಇದಾಗಲಿದೆ. ಆದರೆ, ಇದು ಸುಲಭವಲ್ಲ.
ವೆಸ್ಟ್‌ ಇಂಡೀಸ್‌ ತಂಡಕ್ಕೆ ಬ್ಯಾಟಿಂಗ್‌ನದ್ದೆ ದೊಡ್ಡ ಸಮಸ್ಯೆ. ಟಿ-20 ಹಾಗೂ ಏಕದಿನ ಸರಣಿಗಳನ್ನೂ ಕೈ ಚೆಲ್ಲಿಕೊಂಡಿದ್ದ ವೆಸ್ಟ್‌ ಇಂಡೀಸ್‌ ತಂಡ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯಕ್ಕೆ ದುಬಾರಿ ದಂಡ ತೆತ್ತಬೇಕಾಗಿತ್ತು. ಸೋಲಿನ ನಡುವೆಯೂ ವಿಂಡೀಸ್‌ ತಂಡದ ವೇಗಿಗಳು ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ್ದರು. ಎರಡನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಪುಟಿದೇಳಬೇಕಾದರೆ ಬ್ಯಾಟಿಂಗ್‌ ಅಗ್ರ ಕ್ರಮಾಂಕ ಲಯಕ್ಕೆ ಮರಳಬೇಕು ಹಾಗೂ ಹೆಚ್ಚು ರನ್‌ ಕಲೆಹಾಕಬೇಕು.
ವಿಶ್ವ ಟೆಸ್ಟ್‌ ಚಾಂಪಿಯನ್‌ ಆರಂಭಿಕ ಸರಣಿ ಆಡುತ್ತಿರುವ ಭಾರತ ಮೊದಲ ಪಂದ್ಯ ಗೆದ್ದು ಉತ್ತಮ ಆರಂಭ ಕಂಡಿದೆ. ವಿದೇಶಿ ನೆಲದಲ್ಲಿ ಬಾರಿ ಅಂತರದಲ್ಲಿ ಜಯದ ನಗೆ ಬೀರಿದೆ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಎಲ್ಲ ಮೂರು ವಿಭಾಗಗಳಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದೆ. ಇದರ ಫಲವಾಗಿ ಟೀಮ್‌ ಇಂಡಿಯಾ ಮೊದಲ ಪಂದ್ಯ ದಾಖಲೆಯ ಜಯ ಸಾಧಿಸಿತ್ತು.
ಅಲ್ಲದೇ, ಮೊದಲನೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 183 ರನ್‌ ಗಳಿಸಿದ್ದ ಉಪ ನಾಯಕ ಅಜಿಂಕ್ಯಾ ರಹಾನೆ ಬ್ಯಾಟಿಂಗ್‌ ಲಯಕ್ಕೆ ಮರಳಿರುವುದು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇನ್ನಷ್ಟು ಬಲಗೊಂಡಿದೆ. ಎರಡನೇ ಇನಿಂಗ್ಸ್‌ನಲ್ಲಿ 93 ರನ್‌ ಗಳಿಸಿದ್ದ ಹನುಮ ವಿಹಾರಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ.
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭವಾಗುವ ಮುನ್ನ ಎಂಆರ್‌ಎಫ್‌ ಐಸಿಸಿ ತಂಡದ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನದಲ್ಲಿದ್ದ ಭಾರತ ತಂಡ ಇದೀಗ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲೂ ಅಗ್ರ ಸ್ಥಾನ ಅಲಂಕರಿಸಿದೆ.
ಮೊದಲ ಪಂದ್ಯದಲ್ಲಿ ಭಾರತ 25 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ವೇಳೆ ರಹಾನೆ ಅವರ 81 ರನ್‌ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಅಲ್ಲದೇ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 297 ರನ್‌ ದಾಖಲಿಸಿತ್ತು. ನಂತರ, ಇಶಾಂತ್‌ ಶರ್ಮಾ ಅವರ ಮಾರಕ ದಾಳಿಗೆ ನಲುಗಿ ವೆಸ್ಟ್‌ ಇಂಡೀಸ್‌ 222 ರನ್‌ಗಳಿಗೆ ಆಲೌಟ್‌ ಆಗಿತ್ತು. ಎರಡನೇ ಇನಿಂಗ್ಸ್‌ನಲ್ಲೂ ರಹಾನೆ ಶತಕ ಸಿಡಿಸಿದ್ದರು. ರಹಾನೆ ಹಾಗೂ ಹನುಮ ವಿಹಾರಿ ಅತ್ಯುತ್ತಮ ಬ್ಯಾಟಿಂಗ್‌ ಮಾಡುವ ಮೂಲಕ ಆತಿಥೇಯರಿಗೆ 419 ರನ್‌ ಗುರಿ ನೀಡಲಾಗಿತ್ತು. 2017ರ ಆಗಸ್ಟ್‌ರ ಬಳಿಕ ರಹಾನೆ ಅವರ ಮೊದಲ ಶತಕ ಇದಾಗಿತ್ತು.
ದ್ವಿತೀಯ ಇನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ ಕೇವಲ 100 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲು ಒಪ್ಪಿಕೊಂಡಿತ್ತು. ಜಸ್ಪ್ರಿತ್‌ ಬುಮ್ರಾ ಕೇವಲ ಏಳು ರನ್‌ಗಳಿಗೆ ಐದು ವಿಕೆಟ್‌ ಕಿತ್ತು ಮಿಂಚಿದ್ದರು.
“ನಮ್ಮ ತಂಡದಲ್ಲಿ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದ್ದೇವೆ. ಎಲ್ಲರೂ ಕೂಡ ಆಯಾ ವಿಭಾಗಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಪಂದ್ಯಕ್ಕೂ ಮುನ್ನ ತಂಡದ ಎಲ್ಲ ಆಟಗಾರರು ಚರ್ಚೆ ನಡೆಸುತ್ತೇವೆ. ಅದಕ್ಕೆ ತಕ್ಕಂತೆ ಪಂದ್ಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಟೀಮ್‌ ಮ್ಯಾನೇಜ್‌ಮೆಂಟ್ ಯಾವುದೇ ನಿರ್ಧಾರ ತೆಗೆದುಕೊಂಡರು ಎಲ್ಲರು ಅದಕ್ಕೆ ಬದ್ಧರಾಗಿರುತ್ತಾರೆ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.
ತಂಡದ ವೈಫಲ್ಯಕ್ಕೆ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳು ತಮ್ಮ ಪ್ರತಿಬಿಂಬವನ್ನು ಗಂಭೀರವಾಗಿ ನೋಡಿಕೊಳ್ಳುವ ಅಗತ್ಯವಿದೆ. ಎರಡನೇ ಪಂದ್ಯಕ್ಕೆ ನಾವು ನಿಜಕ್ಕೂ ಪರಿಹಾರವನ್ನು ಹುಡುಕಲೇ ಬೇಕಾದ ಅನಿವಾರ್ಯತೆಗೆ ಒಳಗಾಗಿದ್ದೇವೆ ಎಂದು ವೆಸ್ಟ್‌ ಇಂಡೀಸ್‌ ನಾಯಕ ಜೇಸನ್‌ ಹೋಲ್ಡರ್ ತಿಳಿಸಿದ್ದಾರೆ.
ತಂಡಗಳುಭಾರತ
ವಿರಾಟ್‌ ಕೊಹ್ಲಿ (ನಾಯಕ), ಮಯಾಂಕ್‌ ಅಗರ್ವಾಲ್‌, ಕೆ.ಎಲ್‌ ರಾಹುಲ್‌, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಅಜಿಂಕ್ಯಾ ರಹಾನೆ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌ (ವಿ.ಕೀ), ಕುಲ್ದೀಪ್‌ ಯಾದವ್‌, ರವಿಚಂದ್ರ ಅಶ್ವಿನ್‌, ರವೀಂದ್ರ ಜಡೇಜಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಜಸ್ಪ್ರಿತ್‌ ಬುಮ್ರಾ, ಉಮೇಶ್‌ ಯಾದವ್, ಭುವನೇಶ್ವರ್‌ ಕುಮಾರ್‌, ವೃದ್ಧಮಾನ್‌ ಸಾಹ(ವಿ.ಕೀ)
ವೆಸ್ಟ್‌ ಇಂಡೀಸ್‌

ಜೇಸನ್‌ ಹೋಲ್ಡರ್‌(ನಾಯಕ), ಕ್ರೈಗ್‌ ಬ್ರಾಥ್‌ ವೇಟ್‌, ಡೆರೆನ್‌ ಬ್ರಾವೊ, ಶಮರಹ್‌ ಬ್ರೂಕ್ಸ್‌, ಜಾನ್‌ ಕ್ಯಾಂಪ್‌ಬೆಲ್‌, ರೋಸ್ಟನ್‌ ಚೇಸ್‌, ರಕೀಮ್‌ ಕಾರ್ನ್‌ವಾಲ್‌, ಶೇನ್‌ ಡೌರಿಚ್‌, ಶನ್ನೋನ್‌ ಗ್ಯಾಬ್ರಿಯಲ್‌, ಶಿಮ್ರಾನ್‌ ಹೆಟ್ಮೇರ್‌, ಶಾಯ್‌ ಹೋಪ್‌, ಕಿಮೋ ಪಾಲ್‌, ಕೇಮರ್‌ ರೋಚ್‌
ಸಮಯ: ನಾಳೆ ರಾತ್ರಿ 08:00
ಸ್ಥಳ: ಸಬೀನಾ ಪಾರ್ಕ್‌, ಜಮೈಕಾ

loading...