ಡಾ. ಗಂಗೂಬಾಯಿ ಹಾನಗಲ್ಲರ ಶಾಸ್ತ್ತ್ರೀಯ ಸಂಗೀತದ ಸಿಡಿ ಬಿಡುಗಡೆ

0
26

ಧಾರವಾಡ : 22 ಡಾ. ಬಸವರಾಜ ರಾಜಗುರು ಮತ್ತು ಡಾ. ಗಂಗೂಬಾಯಿ ಹಾನಗಲ್ಲರ ಶಾಸ್ತ್ರೀಯ ಸಂಗೀತದ ಸಿಡಿಗಳನ್ನು ನಗರದ ಆಕಾಶವಾಣಿ ವತಿಯಿಂದ ಶನಿವಾರ ಬಿಡುಗಡೆ ಮಾಡಲಾಯಿತು.
ಪದ್ಮಭೂಷಣ ಡಾ. ಎನ್. ರಾಜಂ ಸಿಡಿಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧಾರವಾಡ ಸಂಗೀತದ ಗಾಳಿಯನ್ನು ಹೊಂದಿದೆ. ಇದು ಸಂಗೀತದ ತವರು. ಈ ನೆಲ ಇಲ್ಲಿಂದ ಸಾಕಷ್ಟು ಜನ ವಿಶ್ವಮಟ್ಟದ ಸಂಗೀತಗಾರರನ್ನು ಜಗತ್ತಿಗೆ ಉಡುಗೊರೆಯಾಗಿ ನೀಡಿದೆ. ಇಂಥ ನೆಲದಲ್ಲಿ ಖ್ಯಾತನಾಮರ ಗಾಯನದ ಸಿಡಿ ಬಿಡುಗಡೆ ಮಾಡುವುದು ನಿಜಕ್ಕೂ ಖುಷಿ ನೀಡಿದೆ ಎಂದರು.
ಇಂದಿನ ಯುವ ಪೀಳಿಗೆ ಶಾಸ್ತ್ರೀಯ ಸಂಗೀತದ ಆಸಕ್ತಿ ಬೆಳೆಸಿಕೊಳ್ಳಬೇಕು. ಆಕಾಶವಾಣಿ ಇಂಥದೊಂದು ಕಾರ್ಯ ಮಾಡುತ್ತಿದೆ. ಅಪರೂಪದ ಸಂಗೀತ ಸಿಡಿಗಳನ್ನು ಬಿಡುಗಡೆ ಮಾಡಿ ಜನರಿಗೆ ಸಂಗೀತದ ಸವಿಯುಣಿಸುವ ಆಕಾಶವಾಣಿ ಕಾರ್ಯ ಶ್ಲಾಘನೀಯ ಎಂದರು.
ಗಂಗೂಬಾಯಿ ಹಾನಗಲ್ಲರ ಪುತ್ರ ಬಾಬುರಾವ್ ಮಾತನಾಡಿ, ತಮ್ಮ ತಾಯಿ ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಲು ಆಕಾಶವಾಣಿಯೇ ಕಾರಣ ಎಂದರು. 1936ರಿಂದ ಮುಂಬಯಿ ಮತ್ತು 1950ರಿಂದ ಧಾರವಾಡ ಆಕಾಶವಾಣಿ ಕೇಂದ್ರಗಳಿಂದ ಸತತ 71 ವರ್ಷ ಹಾಡಿ ಜನಮಾನಸದಲ್ಲಿ ನೆಲೆಯೂರಿದ್ದರು.
ತಮ್ಮ ತಾಯಿ ದೇಶ ವಿಭಜನೆಗೂ ಮೊದಲು ಢಾಕಾ, ಪೇಶಾವರ, ಕರಾಚಿ ಆಕಾಶವಾಣಿ ಕೇಂದ್ರಗಳಷ್ಟೇ ಅಲ್ಲ ದೇಶದ ಕಟಕ್, ಲಖ್ನೊ, ಬರೋಡಾ, ಪಾಟ್ನಾ ಮೊದಲಾದ ಕೇಂದ್ರಗಳಿಂದಲೂ ಹಾಡಿ ಸಂಗೀತಾಸಕ್ತರ ಮನ ತಣಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿ ದಕ್ಷಿಣ ವಲಯ ಹೆಚ್ಚುವರಿ ಮಹಾ ನಿರ್ದೇಶಕ ಪಿ.ಕೆ. ಸುಭಾಷ ಮಾತನಾಡಿ, ಆಕಾಶವಾಣಿ 56 ಕೇಂದ್ರಗಳನ್ನು ಹೊಂದಿದ್ದು ಕೋಟ್ಯಂತರ ಜನರನ್ನು ತಲುಪುತ್ತಿದೆ. ಕರ್ನಾಟಕದಲ್ಲಿ ಗೋಪಾಲಸ್ವಾಮಿ ಎಂಬವರು 1923ರಲ್ಲಿ ಪ್ರಥಮ ಬಾರಿಗೆ ಆಕಾಶವಾಣಿ ಸ್ಥಾಪಿಸಿದ್ದರು. ಪ್ರಸಾರ ಭಾರತಿ ವತಿಯಿಂದ 1950ರಲ್ಲಿ ಆಕಾಶವಾಣಿ ಕರ್ನಾಟಕದಲ್ಲಿ ಸ್ಥಾಪನೆಯಾಯಿತು ಎಂದರು.
ಧಾರವಾಡ ಕೇಂದ್ರ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ನಾರಾಯಣರಾವ್ ಹಾನಗಲ್, ಭಾರತೀದೇವಿ ರಾಜಗುರು, ಆಕಾಶವಾಣಿ ದೆಹಲಿ ಕೇಂದ್ರ ಸಲಹಾಕಾರ ಡಾ. ಕೆ. ವಾಗೀಶ ಇದ್ದರು.
ಅನಿಲ ದೇಸಾಯಿ ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here