ತಾಕತ್ತಿದ್ದರೆ ಪ್ರಲ್ಹಾದ ಜೋಶಿ ಗೋಕಾಕ ಕ್ಷೇತ್ರಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲಿ

0
36

ಗೋಕಾಕ: ತಾಕತ್ತಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಅವರು ಗೋಕಾಕ ಕ್ಷೇತ್ರಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ. ಆವಾಗ ಹುಲಿ ಯಾರು? ಇಲಿ ಯಾರು? ಎಂಬುದು ಜೋಶಿ ಅವರಿಗೆ ಮನವರಿಕೆಯಾಗುತ್ತದೆ ಎಂದು ಕಾಂಗ್ರೇಸ್ ಮುಖಂಡರು ಸವಾಲೆಸೆದಿದ್ದಾರೆ.
ಬುಧವಾರದಂದು ಜಂಟಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡುತ್ತಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಟಿ.ಆರ್.ಕಾಗಲ, ಜಿಪಂ ಸದಸ್ಯ ನಿಂಗಪ್ಪ ಗಡಜನವರ, ಎಪಿಎಂಸಿ ಅಧ್ಯಕ್ಷ ಮಡ್ಡೆಪ್ಪ ತೋಳಿನವರ ಅವರು, ಕಾಂಗ್ರೇಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರಲ್ಹಾದ ಜೋಶಿ ಮತ್ತು ಜಗದೀಶ ಶೆಟ್ಟರ ಅವರು ಎಂತಹವರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇಂತಹವರಿಂದ ಪಾಠ ಕಲಿಯಬೇಕಾದ ಅಗತ್ಯತೆ ನಮಗಿಲ್ಲ. ಬೇಕಾದರೆ ಗೋಕಾಕ ಕ್ಷೇತ್ರಕ್ಕೆ ಬಂದು ಇವರಿಬ್ಬರಲ್ಲಿ ಯಾರಾದರೂ ಬಂದು ಚುನಾವಣೆಗೆ ಸ್ಪರ್ಧಿಸಲಿ. ಆವಾಗ ನಿಜಬಣ್ಣ ಗೊತ್ತಾಗುತ್ತದೆ. ಇವರೆಂದೂ ರಾಜಕೀಯದಲ್ಲಿ ಹುಲಿಯಾಗುವುದಿಲ್ಲ. ಹುಲಿಯಂತಹವರನ್ನು ಎದುರಿಸುವ ಶಕ್ತಿ ಸಾಮಥ್ರ್ಯ ಇವರಿಗಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಗೆ ಪ್ರಾಮುಖ್ಯತೆವಿದೆ. ಜನರ ಪ್ರೀತಿ-ವಿಶ್ವಾಸದಿಂದಲೇ ಗೋಕಾಕ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರು ಸತತ 4 ಬಾರಿ ಕಾಂಗ್ರೇಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಂತಹ ಜನಾನುರಾಗಿ ಶಾಸಕರ ಬಗ್ಗೆ ಟೀಕೆ ಮಾಡಿರುವುದು ಸರಿಯಲ್ಲವೆಂದು ಮುಖಂಡರು ತಿಳಿಸಿದ್ದಾರೆ.
ಕಳೆದ 2013 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಅವರು ತಮ್ಮ ಧಾರವಾಡ ತವರು ಜಿಲ್ಲೆಯಲ್ಲಿ ಕೇವಲ ಇಬ್ಬರನ್ನು ಮಾತ್ರ ಗೆಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಕೇವಲ ಸುಳ್ಳು ಭರವಸೆ ಹಾಗೂ ಡಂಬಾಚಾರದ ರಾಜಕೀಯ ಮಾಡುತ್ತಿದ್ದಾರೆ. ಇಂತಹವರು ನಮ್ಮ ಶಾಸಕರ ವಿರುದ್ಧ ಮಾತನಾಡಿರುವುದು ಖಂಡನೀಯ. ಕೂಡಲೇ ಇವರಿಬ್ಬರೂ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳುವಂತೆ ಮುಖಂಡರು ಒತ್ತಾಯಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕಳಸಾ ಬಂಡೂರಿ ನೀರಾವರಿ ಯೋಜನೆಗಾಗಿ ರೈತರು ಹಗಲಿರುಳು ಹೋರಾಟ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಕೇವಲ ಮೇಲ್ನೋಟಕ್ಕೆ ಮಾತ್ರ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮಾಜಿ ಸಿಎಂ ಆಗಿರುವ ಜಗದೀಶ ಶೆಟ್ಟರ ಹಾಗೂ ಪ್ರಲ್ಹಾದ ಜೋಶಿ ಅವರು ಮನಸ್ಸು ಮಾಡಿದರೇ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬಹುದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಬಹುದಿತ್ತು. ನಿಜ ಹೇಳಬೇಕೆಂದರೆ ರೈತರ ಬಗ್ಗೆ ಒಂಚೂರು ಕಣಿಕರ ಇಲ್ಲದ ಇಂತಹ ನಾಯಕರು ನಮ್ಮ ಪಕ್ಷದ ವಿರುದ್ಧ ಟೀಕೆ ಮಾಡಬಾರದು. ಮೊದಲು ತಮ್ಮ ಬಿಜೆಪಿಯಲ್ಲಿ ಉದ್ಭವಿಸಿರುವ ಆಂತರಿಕ ಕಚ್ಚಾಟವನ್ನು ಬಗೆಹರಿಸಿಕೊಳ್ಳಬೇಕು. ನಾಯಕತ್ವ ಗೊಂದಲ ಇನ್ನೂ ಬಿಜೆಪಿಯಲ್ಲಿದೆ. ಆದರೆ ನಮ್ಮ ಪಕ್ಷದಲ್ಲಿ ಹೈಕಮಾಂಡ ತೆಗೆದುಕೊಳ್ಳುವ ತೀರ್ಮಾಣವೇ ಅಂತಿಮವಾಗಿದೆ. 125 ವರ್ಷಗಳ ಇತಿಹಾಸವಿರುವ ಕಾಂಗ್ರೇಸ್ ಪಕ್ಷ ಬಿಜೆಪಿಯಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಕಳೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖವಾಡ ಬಯಲಾಗಿದೆ ಎಂದು ಹೇಳಿದ್ದಾರೆ.
ಸರಳ ಸಜ್ಜನಿಕೆಯ ರಾಜಕಾರಣಿ ಎಂದು ತಮ್ಮನ್ನು ತಾವು ಘೋಷಿಸಿಕೊಳ್ಳುತ್ತಿರುವ ಜಗದೀಶ ಶೆಟ್ಟರ ಅವರು ಊಸರೊಳ್ಳಿ ಇದ್ದಂತೆ. ಯಾವುದೇ ರಾಜಕೀಯ ಬಂಡವಾಳ ಇವರಿಗಿಲ್ಲ. ತಮ್ಮ ಸ್ವ-ಹಿತಕ್ಕಾಗಿ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಬಲಿ ಕೊಡುವ ಮಹಾನುಭಾವರು. ಕಳೆದ ಡಿ.27 ರಂದು ಕರ್ನಾಟಕ ವಿಧಾನ ಪರಿಷತ್ತಿಗ ನಡೆದ ಚುನಾವಣೆಯಲ್ಲಿ ಶೆಟ್ಟರ ತಮ್ಮ ಸಹೋದರ ಪ್ರದೀಪ ಅವರನ್ನು ಗೆಲ್ಲಿಸಲು ಕಾಂಗ್ರೇಸ್ಸಿಗರನ್ನು ಕೈಕಾಲು ಹಿಡಿದು ನಾಗರಾಜ ಛಬ್ಬಿ ಅವರನ್ನು ಚುನಾವಣೆ ಕಣದಿಂದ ಹಿಂದಕ್ಕೆ ಸರಿಸಿ ತಮ್ಮನ ಪ್ರಯಾಸದ ಗೆಲುವಿಗೆ ಕಾರಣರಾದರು. ಜಗದೀಶ ಶೆಟ್ಟರ ಅವರು ಕಾಂಗ್ರೇಸ್ ಪಕ್ಷದೊಂದಿಗೆ ಮ್ಯಾಚ್ ಫಿಕ್ಸಿಂಗ್ ನಡೆಸಿರುವುದು ಶೆಟ್ಟರ ಅವರ ರಾಜಕೀಯ ಬಂಡವಾಳ ತೋರಿಸುತ್ತದೆ. ಶೆಟ್ಟರ ಹಾಗೂ ಜೋಶಿ ಅವರದು ಕೃಪಾಪೋಷಿತ ನಾಟ್ಯ ಸಂಘವಾಗಿದೆ. ಇವರಿಬ್ಬರೂ ಬಿಜೆಪಿಯ ನಕಲಿ ಡಾನ್‍ಗಳು ಎಂದು ಲೇವಡಿ ಮಾಡಿದ್ದಾರೆ.
ಇನ್ನೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಯಾವಾಗ ಬೇಕಾದರೂ ಗೋಕಾಕ ತಾಲೂಕಿಗೆ ಬಂದು ರಾಜಕೀಯ ಮಾಡಬಹುದು. ಅವರನ್ನು ನಾವು ಸ್ವಾಗತಿಸುತ್ತೇವೆ. ಲಕ್ಷ್ಮಣ ಸವದಿ ಅವರು ಮುಂದಿನ 2018 ರ ವಿಧಾನಸಭೆ ಚುನಾವಣೆಯಲ್ಲಿ ತಾಕತ್ತಿದ್ದರೆ ಗೆದ್ದು ತೋರಿಸಲಿ. ಇವರ ಕೀಳು ಮಟ್ಟದ ರಾಜಕೀಯಕ್ಕೆ ಅಥಣಿ ತಾಲ್ಲೂಕಿನವರು ಬೇಸತ್ತಿದ್ದಾರೆ. ದಬ್ಬಾಳಿಕೆ, ಹಣದ ದರ್ಫದಿಂದ ರಾಜಕೀಯ ಮಾಡುತ್ತಿರುವ ಸವದಿ ಅವರ ಚಾರಿತ್ರ್ಯ ಎಂತದ್ದು ಎಂಬುದನ್ನು ಇಡೀ ವಿಧಾನಸಭೆಯ ಅಧಿವೇಶನದಲ್ಲಿಯೇ ತೋರಿಸಿದ್ದಾರೆ. ಇವರು ಲಕ್ಷ್ಮಣ ಸವದಿ ಅಲ್ಲ. ಸೆಕ್ಸಮನ್ ಸವದಿ ಆಗಿದ್ದಾರೆಂದು ಕಾಂಗ್ರೇಸ್ ಮುಖಂಡರು ವ್ಯಂಗ್ಯ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರಾಧ್ಯಕ್ಷ ಎಸ್.ಎ. ಕೋತವಾಲ, ಗಿರೀಶ ಖೋತ, ಶಿವಾನಂದ ಹತ್ತಿ, ಚಂದ್ರಕಾಂತ ಇಳಿಗೇರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಜೀರ ಶೇಖ ಮುಂತಾದ ಕಾಂಗ್ರೇಸ್ ಮುಖಂಡರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here