ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದ ನನಗೆ ಶ್ರೀರಕ್ಷೆ: ಶಾಸಕಿ ಹೆಬ್ಬಾಳ್ಕರ್

0
76

ಬೆಳಗಾವಿ
ಜನ್ಮ ನೀಡಿದ ತಾಯಿ ಕೈ ತುತ್ತು ನೀಡಿ ಬೆಳಸಿದಳು. ಆದರೆ ತಾಯಿಗಿಂತ ಹೆಚ್ಚು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರು ಜೀವನ ನೀಡಿದ್ದಾರೆ ಅವರ ಆಶೀರ್ವಾದ ನನಗೆ ದೊಡ್ಡದು  ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಭಾನುವಾರ ಬೆಳಗಾವಿ ಕ್ಲಬ್ ನಲ್ಲಿ ಹೆಬ್ಬಾಳ್ಕರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ರಾಜಕೀಯವಾಗಿ ಮರು ಜನ್ಮ ನೀಡಿದ ಗ್ರಾಮೀಣ ಕ್ಷೇತ್ರದ ಜನರ ಸಲುವಾಗಿ ಹಗಲಿರುಳು ದುಡಿಯುತ್ತೇನೆ. ಕಳೆದ ಎರಡು ಚುನಾವಣೆಯಲ್ಲಿ ಸೋಲು ಕಂಡಿದ್ದೆ. 12 ಮೇ.2018 ರ ವಿಧಾನ ಸಭಾ ಫಲಿತಾಂಶದಂದು ಬೆಳಗ್ಗೆ ನನ್ನ ಎದೆ ಢವಢವ ಎನ್ನುತ್ತಿತ್ತು. ಫಲಿತಾಂಶ ಎನು ಆಗುತ್ತದೆಯೋ ಭಯವಾಗಿತ್ತು. ಕೊಲ್ಲಾಪುರ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೊರಟ ಸಂದರ್ಭದಲ್ಲಿ ನನ್ನ ಸಹೋದರ ಕರೆ ಮಾಡಿ‌ ಮೊದಲ‌ ಸುತ್ತಿನಲ್ಲಿಯೇ ಎರಡೂವರೆ ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದೇವೆ ಎಂದ ಕೂಡಲೇ ಪೂರ್ಣ ಫಲಿತಾಂಶ ಬಂದ ಮೇಲೆ ದೇವರಿಗೆ ಹೋಗಲು ನಿರ್ಧರಿಸಿದ್ದೆ ಎಂದು ಸ್ಮರಿಸಿಕೊಂಡರು.
ನಾನು ಚುನಾವಣೆಯಲ್ಲಿ ಸೋಲು ಕಂಡಿದ್ದರೆ. ನನಗೆ ಶಕ್ತಿ ಉಳಿದಿರಲಿಲ್ಲ. ಆದರೆ ನೀವು  ನನಗೆ ಗ್ರಾಮೀಣ ಭಾಗದ ಜನರು ಹೊಸ‌ ಬದುಕು ಕೊಟ್ಟರು. ಮುಂದಿನ ವರ್ಷದಿಂದ ಮೇ.11 ಹಾಗೂ 12 ರಂದು ಗ್ರಾಮೀಣ ಕ್ಷೇತ್ರದ ಉತ್ಸವ ಮಾಡಲು ತೀರ್ಮಾನಿಸಲಾಗಿದೆ‌ ಎಂದು ಹೇಳಿದರು.
ಗ್ರಾಮೀಣ ಕ್ಷೇತ್ರದ ಜನರ ಪ್ರೀತಿ ಹಾಗೂ ವಿಶ್ವಾಸ ಎಂದಿಗೂ ಮರೆಯುವುದಿಲ್ಲ. ನೀವು ನನಗೆ ಹಿರಿಯರು  ನಿಮ್ಮ ಮನೆ ಮಗಳಾಗಿ, ಮಕ್ಕಳು ನನಗೆ ತಾಯಿ ರೂಪದಲ್ಲಿ ನೋಡಿ, ಸಹೋದರರು ಅಕ್ಕಾ ಎಂದು ಭಾವಿಸಿ ನೋಡಿದರೆ ನನ್ನ ಕೈಯಾಲದಷ್ಟು ಸಹಾಯ ಮಾಡುತ್ತೇನೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಉತ್ತರ ಕರ್ನಾಟಕದ‌ ಶಾಸಕಿ 750 ಕೋಟಿ ರು. ಅನುದಾನ ತಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡಿ ತೋರಿಸಿದ ದಿಟ್ಟ ಮಹಿಳೆ ಹೆಬ್ಬಾಳ್ಕರ್. ಗ್ರಾಮೀಣ ಭಾಗದ 830 ಕೆರೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಫೆ.14 ತಾಯಿ ನೀಡಿದ ಜನ್ಮ. ಮೇ 12 ಬೆಳಗಾವಿ ಗ್ರಾಮೀಣ ಭಾಗದ ಜನರು ರಾಜಕೀಯದಲ್ಲಿ ಪುನರುಜ್ಜೀವನ ನೀಡಿದ ದಿನದಂದು ಜನ್ಮ ದಿನಾಚಾರಣೆ ಆಚರಿಸಿಕೊಳ್ಳುತ್ತಿರುವ ಹೆಬ್ಬಾಳ್ಕರ್ ಅವರು ಇನ್ನೂ ಗ್ರಾಮೀಣ ಜನರ ಕಷ್ಟ ಸುಖಗಳನ್ನು ಆಲಿಸುವಂತಾಗಲಿ ಎಂದು ಆಶೀರ್ವದಿಸಿದರು.
ಕೇದಾರ ಪೀಠ ಮುತ್ನಾಳದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹುಲ್ಲಾಗು ಬೆಟ್ಟದಲ್ಲಿ ಮಲ್ಲಿಗೆಯಾಗು ಮನೆಗೆ, ಕಲ್ಲಾಗು ಕಷ್ಟಗಳ ಸುರಿಮಳೆಗೆ, ಕಲ್ಲು ಸಕ್ಕರೆಯಾಗು ದೀನ ದುರ್ಬಲರಿಗೆ ಎನ್ನುವ ಹಾಗೆ ಕೆಲಸ‌ ಮಾಡುವ ಮಹಿಳೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಇನ್ನೂ ಹೆಚ್ಚಿನ ಕಾರ್ಯ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
 ಬಡೇಕೋಳ‌ ಮಠದ ಶ್ರೀ ನಾಗೇಂದ್ರ ಸ್ವಾಮೀಜಿ,  ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿದ್ಯ‌ ವಹಿಸಿದ್ದರು. ಸಿ.ಸಿ.ಪಾಟೀಲ, ಯುವರಾಜ ಕದಂ, ಡಾ.ವಿ.ಎಸ್.ಸಾಧುನವರ, ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

loading...