ದಾಂಡೇಲಿಯ ಸಮಗ್ರ ಪ್ರಗತಿಗೆ ಕಾಂಗ್ರೆಸ್‌ ಬೆಂಬಲಿಸಿ: ಪ್ರಸಾದ ದೇಶಪಾಂಡೆ

0
27

ಕನ್ನಡಮ್ಮ ಸುದ್ದಿ-ದಾಂಡೇಲಿ: ದಾಂಡೇಲಿ ಜನತೆಯ ಬಹುವರ್ಷಗಳ ಕನಸು ನನಸು ಮಾಡುವಲ್ಲಿ ಸಚಿವ ದೇಶಪಾಂಡೆಯವರು ಶರವೇಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಗರಕ್ಕೆ ತರುವುದರ ಮೂಲಕ ಸದೃಢ ನಗರ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಬರಲಿರುವ ದಿನಗಳಲ್ಲಿ ನಗರದ ಸಮಗ್ರ ಮತ್ತು ಶಾಶ್ವತ ಅಭಿವೃದ್ಧಿಗೆ ಸಚಿವ ದೇಶಪಾಂಡೆಯವರ ಕೈ ಬಲಪಡಿಸಲು ನಗರ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಪ್ರಚಂಡ ಮತಗಳಿಂದ ಆರಿಸಿ, ನಗರ ಸಭೆಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಒದಗಿಸಿಕೊಡುವಂತೆ ಸಚಿವ ದೇಶಪಾಂಡೆಯವರ ಪುತ್ರ ಪ್ರಸಾದ ದೇಶಪಾಂಡೆಯವರು ಮತದಾರರಲ್ಲಿ ವಿನಂತಿಸಿದ್ದಾರೆ. ನಗರದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಬಾರಿಯೂ ನಗರ ಸಭೆಯಲ್ಲಿ ಪಕ್ಷಕ್ಕೆ ಅಧಿಕಾರವನ್ನು ನಗರದ ಮತದಾರರು ನೀಡಿ ಹರಸಿದ್ದಾರೆ.
ಮತದಾರರಿಟ್ಟ ನಂಬಿಕೆ, ವಿಶ್ವಾಸಕ್ಕೆ ಎಳ್ಳಷ್ಟು ಚ್ಯುತಿ ಬರದಂತೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿ ಸುಂದರ ಮತ್ತು ಸದೃಢ ನಗರ ನಿರ್ಮಾಣಕ್ಕೆ ಪಕ್ಷ ಕಟಿಬದ್ದವಾಗಿದೆ. ಚುನಾವಣೆಯ ಸಮಯದಲ್ಲಿ ಬಂದು ತಂತ್ರಗಾರಿಕೆಯ ಮಾತುಗಳಿಂದ ಮರಳು ಮಾಡಿ ಮತ ಯಾಚಿಸುವ ಗುಣವನ್ನು ಕಾಂಗ್ರೆಸ್‌ ಪಕ್ಷ ಯಾವತ್ತು ಮಾಡಲ್ಲ. ಅಭಿವೃದ್ಧಿಯನ್ನು ಮಾನದಂಡವಾಗಿಟ್ಟುಕೊಂಡು ಕಾಂಗ್ರೆಸ್‌ ಪಕ್ಷ ಚುನಾವಣೆಯನ್ನು ಎದುರಿಸುತ್ತಿದೆ. ದಾಂಡೇಲಿಯನ್ನು ಇನ್ನಷ್ಟು ಪರಿಪಕ್ವ ಅಭಿವೃದ್ಧಿಶೀಲ ನಗರವನ್ನಾಗಿಸುವ ಮಹತ್ವದ ಗುರಿಯನ್ನು ಇಟ್ಟುಕೊಂಡಿರುವ ಸಚಿವ ದೇಶಪಾಂಡೆಯವರ ಕೈ ಬಲಪಡಿಸಲು ನಗರ ಸಭೆಯ ಎಲ್ಲ ವಾರ್ಡ್‌ ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದೊಂದಿಗೆ ಆರಿಸಬೇಕೆಂದು ಪ್ರಸಾದ ದೇಶಪಾಂಡೆ ವಿನಂತಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ ತಂಗಳ ಅವರು ಮಾತನಾಡಿ, ನುಡಿದಂತೆ ನಡೆಯುವುದರ ಮೂಲಕ ಸಚಿವ ದೇಶಪಾಂಡೆಯವರು ನಗರಕ್ಕೆ ಹೆಚ್ಚಿನ ಅನುದಾನವನ್ನು ತಂದುಕೊಟ್ಟ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ನಗರಕ್ಕೆ ಅಗತ್ಯಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ದೇಶಪಾಂಡೆಯವರ ಪ್ರಯತ್ನ ಶ್ಲಾಘನೀಯ. ಚುನಾವಣೆಯ ಸಮಯದಲ್ಲಷ್ಟೆ ನಗರದಲ್ಲಿ ಸುತ್ತಾಡುವ ಮಾಜಿ ಶಾಸಕ ಸುನೀಲ ಹೆಗಡೆಯವರಿಗೆ ನಗರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯಿರಲಿಕ್ಕಿಲ್ಲ. ಹಾಗಾಗಿ ಸುಖ ಸುಮ್ಮನೆ ಆರೋಪಗಳನ್ನು ಮಾಡುವುದರ ಮೂಲಕ ಮತದಾರರನ್ನು ಒಲೈಸುವ ನಾಟಕ ಮಾಡುತ್ತಿರುವ ಸುನೀಲ ಹೆಗಡೆಯವರಿಗೆ ಇದು ಶೋಭೆ ತರುವಂತಹದ್ದಲ್ಲ. ಈಗಾಗಲೆ ಜಿ. ಪ್ಲಸ್‌ ಟು ಆಶ್ರಯ ಮನೆಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿರುವುದು ಸುನೀಲ ಹೆಗಡೆಯವರಿಗೆ ಮಾಹಿತಿಯಿರಲಿಕ್ಕಿಲ್ಲ. ಹಾಗಾಗಿ ಪದೇ ಪದೇ ಆಶ್ರಯ ಮನೆ ವಿತರಣೆಯ ಬಗ್ಗೆ ಹೇಳಿಕೆಗಳನ್ನು ನೀಡುವುದರ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಸುನೀಲ ಹೆಗಡೆಯವರು ಮುಂದಾಗಿದ್ದಾರೆ. ನಗರದ ಆಸ್ತಿಯನ್ನು ಸಚಿವ ದೇಶಪಾಂಡೆಯರು ವೈಯಕ್ತಿಕವಾಗಿ, ಖಾಸಗಿಯಾಗಿ ಪುಕ್ಕಟೆಯಾಗಿ ಮಾರಿಸಿಲ್ಲ. ಸರಕಾರದ ವಿವಿಧ ಕಚೇರಿಗಳಿಗೆ, ವಿವಿಧ ಯೋಜನೆಗಳಿಗೆ ಜಾಗವನ್ನು ಮಂಜೂರು ಮಾಡಿಸಿದ್ದಾರೆ. ಸಚಿವ ದೇಶಪಾಂಡೆಯವರು ಸಿ.ಎಸ್‌.ಆರ್‌ ಯೋಜನೆಯಡಿ ರಾಜ್ಯವೆ ಕೊಂಡಾಡುವಂತಹ ಅಭಿವೃದ್ಧಿ ಕಾರ್ಯಗಳನ್ನು, ಯೋಜನೆಗಳನ್ನು ನಗರಕ್ಕೆ ಮತ್ತು ಕ್ಷೇತ್ರಕ್ಕೆ ತಂದಿರುವುದನ್ನು ಸುನೀಲ ಹೆಗಡೆಯವರು ಮರೆತಿರಬಹುದು.
ಜನಸೇವೆಯ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ಶ್ರಮಿಸುವ ದೇಶಪಾಂಡೆಯವರ ಬಗ್ಗೆ ಸುನೀಲ ಹೆಗಡೆಯವರು ಹಗುರವಾಗಿ ಮಾತನಾಡುವುದನ್ನು ಇನ್ನಾದರೂ ಬಿಟ್ಟು ಬಿಡಬೇಕು. ನಗರದ ಸಮಗ್ರ ಅಭಿವೃದ್ಧಿಗಾಗಿ ಸಚಿವ ದೇಶಪಾಂಡೆಯವರು ಕಂಕಣಬದ್ದರಾಗಿದ್ದಾರೆ. ಈ ಬಾರಿಯ ನಗರ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ, ನಗರದ ಅಭಿವೃದ್ಧಿಗೆ ಹೊಸ ಬಾಷ್ಯವನ್ನು ಬರೆಯಬೇಕೆಂದು ಮತದಾರರಿಗೆ ಸೈಯದ ತಂಗಳ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರುಗಳಾದ ರಾಧಾಕೃಷ್ಣ ಕನ್ಯಡಿ, ಇಕ್ಬಾಲ್‌ ಶೇಖ, ಕರೀಂ ಅಜ್ರೇಕರ, ಬಾಬಾ ಮುಲ್ಲಾ, ಮುಸ್ತಾಕ ಮಿಶ್ರಿಕೋಟಿ, ದಿವಾಕರ ನಾಯ್ಕ, ರಾಮಲಿಂಗ ಜಾಧವ, ಅನಿಲ್‌ ನಾಯ್ಕರ್‌, ಮೌಲಾಲಿ ಮುಲ್ಲಾ, ರೇಣುಕಾ ಬಂದಂ, ಬಾಪು ಗೌಡ, ಫಾರೂಕು ಆಡೂರು ಮೊದಲಾದವರು ಉಪಸ್ಥಿತರಿದ್ದರು.

loading...