ದುಡಿಮೆಯೇ ದೇವರು ಕಾಯಕವೇ ಕೈಲಾಸ: ಸಿದ್ದೇಶ್ವರ ಶ್ರೀ

0
128

ಕನ್ನಡಮ್ಮ ಸುದ್ದಿ-ಧಾರವಾಡ : ನಮ್ಮ ಮನೆಗಳಿಗೆ ಕಳೆ ಬರಬೇಕೆಂದ್ರೆ ಮನೆಯ ಹೊರಗಡೆ ರಂಗವಲ್ಲಿಯೆಂಬ ಸೌಂದರ್ಯ ಹಾಗೂ ಒಳಗೆ ಒಂದಿಷ್ಟು ಸುವಾಸನೆ ಬರುವ ಹೂವಗಳನ್ನು ಇಡಬೇಕು. ಆಗ ಆ ಮನೆಯೇ ಸ್ವರ್ಗ. ಸ್ವಚ್ಛ ಸ್ವಚ್ಚ ಇಡುವುದೇ ಮಂತ್ರ. ಆಗ ನಮಗೆ ಒಂದಿಷ್ಟು ಸಂತೋಷ, ಆರೋಗ್ಯ ತಾನಾಗಿಯೇ ಸಿಗುತ್ತದೆ ಎಂದು ಶ್ರೀ ಸಿದ್ದೇಶ್ವರ ಸ್ವಾಮಿಜಿ ಹೇಳಿದರು.
ಕರ್ನಾಟಕ ಕಾಲೇಜ್ ಮೈದಾನದಲ್ಲಿ ಏರ್ಪಡಿಸಿದ ಪ್ರವಚನದಲ್ಲಿ ಮಾತನಾಡಿ, ಸದ್ಭಾವ ಯೋಗ ಅತ್ಯಂತ ಮಹತ್ವದ ಯೋಗ. ಇದು ಎಲ್ಲ ಯೋಗಗಳ ಆತ್ಮವಿದ್ದ ಹಾಗೆ. ಇದು ಹೃದಯ ಹಾಗೂ ದೃಷ್ಠಿಗೆ ಸಂಬಂಧಪಟ್ಟದು. ಇದು ಪರಿಶುದ್ಧ ಆಗಬೇಕು. ಆಮೇಲೆ ವಿಕಾಸಗೊಳ್ಳಬೇಕು. ಹಿಂದೆಲ್ಲಾ ಮುಂಜಾನೆ ಎದ್ದ ಕೂಡಲೇ ಮನೆ ಹೊರಗ ಹಾಗೂ ಒಳಗ ಕಸ ಹೊಡೆದು, ಸಗಣಿ ಸಾರಿಸಿ ಸ್ವಚ್ಛ ಸ್ವಚ್ಛ ಇಡುತ್ತಿದ್ದರು. ಈಗ ಎಲ್ಲಾದ ಅದು. ಈಗ ನಮ್ಮ ಮನೆ ಎದುರು ಬರೀ ರಸ್ತೆಗಳಾದವ. ಅದಕ್ಕೆ ಒಂದಿಷ್ಟು ಸೌಂದರ್ಯ ಬರಬೇಕಾದರೆ ಒಂದಿಷ್ಟು ಕೈ ತೋಟ. ಅದರಲ್ಲಿ ಒಂದಿಷ್ಟು ಹೂಗಳು, ಬಳ್ಳಿಗಳು ಇದ್ದರೂ ಮನೆಯಲ್ಲ ನಕ್ಕೋತ್ತ ನಕ್ಕೋತ್ತ ಇರ್ತಾದ. ಇವೆಲ್ಲಾ ಸದ್ಭಾವ ಯೋಗದ ಭಾಗ ಎಂದರು.
ಕೆಲಸ ಮಾಡಿದರೆ ಹೃದಯ, ಭಾವ ಸ್ವಚ್ಛ ಆಗ್ತಾದ, ವಿಕಾಸ ಆಗ್ತಾದ. ಹೀಂಗಾಗಿ ಕೆಲಸ ಬಹಳ ಮಹತ್ವದು. ಹೇಂಗಾರ ಮಾಡೋದು ಅಲ್ಲ. ಬಸವಣ್ಣನವರು ಹೇಳ್ತಾರ ಕಾಯವೇ ಕೈಲಾಸ. ಹಂಗ ಈ ಕಾಯದಿಂದ ಸುಂದರ ಕೆಲಸ ಆದ್ರ ದೇವನ ಆರಾಧನೆ ಆಗ್ತಾದ. ಅದರಿಂದ ಬದುಕನ್ನ ಶೃಂಗರಿಸೋದು. ಕೈ ಇರೋದು ಕೆಲಸ ಮಾಡುವುದಕ್ಕ ಹೊರತು ಉಂಗುರ ಹಾಕೋಕ ಅಲ್ಲ. ಬರೀ ಉಗುರ ಬೆಳೆಸಿದ್ರ ಏನ್ ಪ್ರಯೋಜನ. ಕೈ, ಮಾತು, ಬುದ್ದಿಯ ಕೆಲಸ ಜಗತ್ತು ಕಟ್ಟುವುದೇ ಕೆಲಸ, ಮನೆ, ಊರುಗಳನ್ನು ಕಟ್ಟೋದೇ ಕೆಲಸ ಎಂದರು.
ಮನೆಯಲ್ಲಿಯ ಒಬ್ಬ ತಾಯಿ ದಿನದ 24 ಗಂಟೆಗಳ ಕಾಲ ಯಾವ ಫಲಾಪೇಕ್ಷೆಯಿಲ್ಲದೇ ಕ್ಷಣ, ಕ್ಷಣವೂ ದುಡಿತಾಳಲ್ಲ. ಅವಳಿಗೆ ಯಾರಾದ್ರೂ ಸಂಬಳ ಕೊಟ್ಟಾರೇನು. ಅವರು ಕರ್ಮಯೋಗಿಯ ಹಾಗೆ ಕೆಲಸ ಮಾಡ್ತಾರೆ. ಹೆಣ್ಣು ಮಕ್ಕಳು ಮನೆಯನ್ನೇ ಸ್ವರ್ಗ ಮಾಡ್ತಾರ. ಆವಾಗ ಮನೆಯ ನಿಜವಾದ ಕಳಿ ಶುರುವಾಗ್ತಾದ. ಅಂತಹ ಕರ್ಮ ಹೃದಯ ಅರಳಿಸ್ತಾದ. ಭಾವ ವಿಶಾಲ ಮಾಡಿಸ್ತಾದ. ಇದೇ ಪೂಜೆ, ಆರಾಧನೆ. ಹೀಗಾಗಿ ಸದಾ ಕಾಲ ಕೆಲಸ ಮಾಡ್ತಾ ಇರೋದು. ಬುದ್ಧಿಯಿಂದ ಮಾಡಿದ ಕೆಲಸ ವಿಶ್ವಜ್ಞಾನವಾದರೆ, ಕೈಯಿಂದ ಮಾಡಿದ ಕೆಲಸ ಅನ್ನ, ನೀರು ಕೊಡ್ತಾದ. ಯಾರು ಶುದ್ಧ ಕೆಲಸ ಮಾಡ್ತಾರ ಅವರು ಕರ್ಮಯೋಗಿಗಳು ಎಂದರು.
ದುಡಿಮೆ ದೇವರಿಗೆ ಕೊಡುವ ಕಾಣಿಕೆ. ಹಾಗೆ ಬಯಸಿದ್ರೆ ಅದಕ್ಕ ಒಂದಿಷ್ಟು ಬೆಲೆ ಕೊಡಬೇಕು. ನಮ್ಮ ಪರಿಶ್ರಮವೇ ಡಾಲರ್. ಸುಮ್ಮನೇ ಕುತಕೊಂಡ ಅದು ಕೊಡು, ಇದು ಕೊಡು ಅಂದ್ರ ಎಲ್ಲಿಂದ ಕೊಡುದು. ಜಗತ್ತು ಯಾವಾಗಲೂ ಚಲಿಸ್ತಾ ಇರ್ತಾದ. ಎಷ್ಟು ದುಡಿತಾದ ನೋಡಿ, ಪ್ರಾಣಿ, ಪಕ್ಷಿಗಳು ದುಡಿತಾವ. ಕಾರ್ಯವನ್ನು ಪ್ರೀತಿಸು. ಸದ್ಭಾವ ಸಾಧನೆ. ಜಗತ್ತನ್ನೂ ಬದಲಿಸೋದು ನಿನ್ನ ಕೈಯಲ್ಲಿ ಅದ. ಕೆಲಸ ಮಾಡಕೋತ್ತ ಇರೋದು. ಏನೇ ಕೆಲಸ ಮಾಡು ಎಲ್ಲ ಅಷ್ಟೇ. ತಲೆ, ಕೈ, ಕಾಲು, ಮಾತನ್ನು ಬಳಸಬೇಕು. ಎಲ್ಲವೂ ಬೇಕಾಗ್ತದ. ಹಾಗಾಗಿ ಎಲ್ಲವನ್ನ ಗೌರವಿಸಬೇಕು ಎಂದರು.

loading...