ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಶೇ.61.68 ವಿದ್ಯಾರ್ಥಿಗಳು ತೇರ್ಗಡೆ, ಉಡುಪಿಗೆ ಪ್ರಥಮ ಸ್ಥಾನ

0
30

ಬೆಂಗಳೂರು:- 2018-2019ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ 61. 68ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಪ್ರಥಮ ಸ್ಥಾನ ಉಡುಪಿ ಪಾಲಾದರೆ, ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.

ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶಕ್ಕಿಂತ ಉತ್ತಮ ಸಾಧನೆ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಫಲಿತಾಂಶ ಪ್ರಕಟಿಸಿದ್ದು,
ಒಟ್ಟು 80 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. 98 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಕನ್ನಡ ಮಾಧ್ಯಮದ ಶೇ.55.8 ಹಾಗೂ ಇಂಗ್ಲಿಷ್‌ ಮಾಧ್ಯಮ ಶೇ.66.90ರಷಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಉಡುಪಿ ಶೇ. 92.20, ದಕ್ಷಿಣ ಕನ್ನಡ 90.91, ಕೊಡಗು 83.31 ಫಲಿತಾಂಶ ಪಡೆದು ಮೊದಲ ಮೂರು ಸ್ಥಾನ ಅಲಂಕರಿಸಿವೆ. ಯಾದಗಿರಿ ಶೇ 53.02, ಚಿತ್ರದುರ್ಗ ಶೇ 51.42 ರಷ್ಟು ಫಲಿತಾಂಶ ಬಂದಿದ್ದು, ಕೊನೆಯ ಎರಡು ಸ್ಥಾನಗಳನ್ನು ಪಡೆದಿವೆ ಎಂದು ತಿಳಿಸಿದರು.

ಕಲಾ ವಿಭಾಗದಲ್ಲಿ ಶೇ.50.53, ವಾಣಿಜ್ಯ ವಿಭಾಗದಲ್ಲಿ ಶೇ. 66.39, ವಿಜ್ಞಾನ ವಿಭಾಗದಲ್ಲಿ ಶೇ 66.58 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ಮಾರ್ಚ್‌ 1 ರಿಂದ 18ರವರೆಗೆ ರಾಜ್ಯಾದ್ಯಂತ 1,013 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ನಡೆದಿತ್ತು. ಮಾ.25 ರಿಂದ ಏ.7 ರವರೆಗೆ 27,746 ಉಪನ್ಯಾಸಕರು ಮೌಲ್ಯ ಮಾಪನ ನಡೆಸಿದ್ದರು.ಈ ಬಾರಿ ಒಟ್ಟು 6 ಲಕ್ಷದ 71 ಸಾವಿರದ 653 ವಿದ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 4 ಲಕ್ಷದ 14 ಸಾವಿರ 587 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 61.73 ಫಲಿತಾಂಶ ದಾಖಲಿಸಿದ್ದಾರೆ.3 ಲಕ್ಷದ 37 ಸಾವಿರದ 668 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, ಅವರ ಪೈಕಿ 1,86, 690 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 55. 29 ಫಲಿತಾಂಶ ದಾಖಲಿಸಿದ್ದಾರೆ. 3,33,985 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು 2, 27,897 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 68 ರಷ್ಟು ಫಲಿತಾಂಶ ದಾಖಲಿಸಿದ್ದಾರೆ.ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದರು.

loading...