ಧರ್ಮ ಸಂಸದ್ ಸಮಾವೇಶಕ್ಕೆ ಸಂಪೂರ್ಣ ಬೆಂಬಲ ನೀಡಿ: ಶಾಸಕ ದಿನಕರ

0
17

ಕನ್ನಡಮ್ಮ ಸುದ್ದಿ-ಕುಮಟಾ: ಧರ್ಮಸ್ಥಳ ನಿತ್ಯಾನಂದನಗರದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವ ನಿಮಿತ್ತ ಸೆ.3ರಂದು ನಡೆಯಲಿರುವ ಧರ್ಮ ಸಂಸದ್ ಸಮಾವೇಶಕ್ಕೆ ಎಲ್ಲರೂ ಜಾತ್ಯಾತೀತವಾಗಿ ಸಂಪೂರ್ಣ ಬೆಂಬಲ ನೀಡಬೇಕೆಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ರವಿವಾರ ಧರ್ಮ ಸಂಸದ್‍ನ ದೇಣಿಗೆ ಪುಸ್ತಕವನ್ನು ಬಿಡುಗಡೆಗೊಳಿಸಿ ಪತ್ರಕರ್ತರೊಂದಿಗೆ ಮಾತನಾಡಿ, ರಾಷ್ಟ್ರೀಯ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾದ ಈ ಧರ್ಮ ಸಂಸದ್‍ನಲ್ಲಿ ರಾಷ್ಟ್ರದಲ್ಲಿರುವ ನಾಗ ಸಾಧುಗಳು, ಸೀತಾರಾಮ ಪರಂಪರೆ, ನಾಥ್ ಪಂತ, ತ್ಯಾಗಿ, ಬೈರಾಗಿ ಇನ್ನಿತರೆ ಎಲ್ಲ ಸನಾತನ ಹಿಂದೂ ಧರ್ಮದ ವಿವಿಧ ಪರಂಪರೆಗಳ ಆಚಾರ್ಯರನ್ನು, ಗುರುಗಳನ್ನು ಮತ್ತು ಮಹಾಮಂಡಲೇಶ್ವರರನ್ನು ಒಟ್ಟಿಗೆ ಸೇರಿಸಿ “ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಿಂದು ಪಂರಂಪರೆಯನ್ನು ಬೆಳೆಸುವ ಸದುದ್ದೇಶ ಹೊಂದಿದೆ. ಈ ಧರ್ಮ ಸಂಸದ್‍ಗೆ ಕುಮಟಾ-ಹೊನ್ನಾವರ ಕ್ಷೇತ್ರದ ಜನತೆ ಪಕ್ಷಾತೀತ, ಜಾತ್ಯಾತೀತವಾಗಿ ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು.

ಉದ್ಯಮಿ ಮುರಳೀಧರ ಪ್ರಭು ಮಾತನಾಡಿ, ದೇಶದಲ್ಲಿ ನೈತಿಕತೆ ಕಳೆದುಹೋಗುತ್ತಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ಭಾರತ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಧರ್ಮ ಸಂಸದ್ ರಾಜಕೀಯ ಸಂಸದಕ್ಕಿಂತ ಒಂದು ಹಂತದಲ್ಲಿ ಮೇಲಿರಬೇಕು. ಧರ್ಮ ಸಂಸದ್ ನೀಡುವ ಸೂಚನೆಯನ್ನು ಪಾಲಿಸುವಂತಾಗಬೇಕು. 2 ಸಾವಿರ ಸಂತರು ಈ ಧರ್ಮ ಸಂಸದ್‍ನಲ್ಲಿ ಪಾಲ್ಗೊಳ್ಳಲಿರುವುದರಿಂದ ಎಲ್ಲ ಸಮಾಜದವರೂ ಒಗ್ಗಟ್ಟಾಗಿ ಈ ಕಾರ್ಯಕ್ರಮದ ಯಶಸ್ಸಿಗೆ ತನು, ಮನ, ಧನದಿಂದ ಸಹಕಾರ ನೀಡುಬೇಕು. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ತಮ್ಮ ಮಠದಲ್ಲಿ ಸುಮಾರು 4 ನೂರಕ್ಕು ಅಧಿಕ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿದ್ದಾರೆ. ಇದರಲ್ಲಿ ಎಲ್ಲ ಸಮಾಜದ ಬಡ ವಿದ್ಯಾರ್ಥಿಗಳು ಪಾರಂಪರಿಕ ಶಿಕ್ಷಣ ಪಡೆಯುತ್ತಿದ್ದಾರೆ. ಇಂಥ ಒಳ್ಳೆಯ ವಿಚಾರಗಳನ್ನಿಟ್ಟುಕೊಂಡು ದೇಶದ ಸನಾತನ ಪರಂಪರೆಯನ್ನು ಮುನ್ನಡೆಸುವ ಕಾರ್ಯ ಮಾಡುತ್ತಿರುವ ಶ್ರೀಗಳ ಸಂಕಲ್ಪಕ್ಕೆ ನಾವೆಲ್ಲ ಸಾತ್ ನೀಡಬೇಕು ಎಂದರು.
ಡಾ ಸುರೇಶ ಹೆಗಡೆ ಮತ್ತು ಮಲ್ಲಾಪುರ ಗುರು ಪ್ರಸಾದ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಂ ಟಿ ಗೌಡ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕರು ಧರ್ಮ ಸಂಸದ್‍ಗೆ ಸಂಬಂಧಿಸಿದ ದೇಣಿಗೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ರತ್ನಾಕರ ನಾಯ್ಕ, ತಾಪಂ ಸದಸ್ಯ ಜಗನ್ನಾಥ ನಾಯ್ಕ, ಪ್ರಮುಖರಾದ ಸೂರಜ ನಾಯ್ಕ ಸೋನಿ, ಧೀರೂ ಶಾನಭಾಗ, ಹರೀಶ ಶೇಟ್, ಹೊನ್ನಪ್ಪ ನಾಯಕ, ಆರ್ ಜಿ ನಾಯ್ಕ, ಅಶೋಕ ಗೌಡ, ಭಾಸ್ಕರ ಆಚಾರಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

loading...