ಧೋನಿಯ ಸ್ಥಾನ ಬೇರೊಬ್ಬರಿಂದ ತುಂಬಲು ಅಸಾಧ್ಯ: ಆಟಗಾರರ ಸಮರ್ಥನೆ

0
6

ಲಂಡನ್‌:- 2019 ರ ವಿಶ್ವಕಪ್ ಟೂರ್ನಿಯು ಮುಕ್ತಾಯದ ಹಂತದಲ್ಲಿರುವಾಗ ಕೆಲವು ಕ್ರೀಡಾತಜ್ಞರು ತಂಡದಲ್ಲಿ ಎಂ.ಎಸ್ ಧೋನಿಯ ಸ್ಥಾನ ಹಾಗೂ ಅವರ ಪ್ರದರ್ಶನದ ಕುರಿತಾಗಿ ಅಪಸ್ವರ ಎತ್ತಿದ್ದಾರೆ. ಧೋನಿಯ ಪ್ರತಿಯೊಂದು ಹೊಡೆತವೂ ಹೋರಾಟದಂತಿದೆ ಎಂದು ಅಣಕಿಸಿದ್ದಾರೆ. ಆದರೆ, ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ತಂಡದ ಎಲ್ಲಾ ಆಟಗಾರರು ಧೋನಿ ತಂಡದ ಆಧಾರ ಸ್ತಂಭವಿದ್ದಂತೆ ಎನ್ನುವ ಮೂಲಕ ಮಾಜಿ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.

ಪ್ರತಿಯೊಬ್ಬರೂ ಧೋನಿಯ ಸ್ಟ್ರೈಕ್ ರೇಟ್ ಕಡೆ ಗಮನ ಹರಿಸುತ್ತಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಧೋನಿ ದೀರ್ಘ ಕಾಲದವರೆಗೆ ಬ್ಯಾಟಿಂಗ್ ಮಾಡಿದ್ದನ್ನು ಅವರು ಮರೆತಂತಿದೆ ಎಂದು ತಂಡದ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ ಬ್ಯಾಟಿಂಗ್ ವಿಚಾರವಾಗಿ ನಮ್ಮದು ಇಂಗ್ಲೆಂಡ್ ತಂಡದಷ್ಟು ಬಲಿಷ್ಟವಾಗಿಲ್ಲ. ಇಂಗ್ಲೆಂಡ್ ತಂಡದಲ್ಲಿ 10 ನೇ ಸ್ಥಾನದವರೆಗೂ ಬ್ಯಾಟಿಂಗ್ ಆಡುವ ಆಟಗಾರರಿದ್ದಾರೆ. ಆದರೆ ನಮ್ಮಲ್ಲಿ ಹಾಗಿಲ್ಲ. ಹೆಚ್ಚಿನ ಸಂಧರ್ಭದಲ್ಲಿ ಧೋನಿ ಮೈದಾನಕ್ಕಿಳಿಯುವ ಸಮಯ ಧೋನಿಯ ನಂತರದ ಸ್ಥಾನಗಳು ಬೌಲರ್‌ಗಳಾಗಿರುತ್ತಾರೆ. ಹಾಗಾಗಿ, ಇದನ್ನವರು ಮನಸಿನಲ್ಲಿಟ್ಟುಕೊಂಡು ಆಟವಾಡಬೇಕಾಗುತ್ತದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ಧೋನಿ ಔಟಾದ ಬಳಿಕ ಬಹುಬೇಗ ಎರಡು ವಿಕೆಟ್ ಕಳೆದುಕೊಂಡೆವು ಎಂಬುದು ತಂಡದ ಸದಸ್ಯರ ವಾದವಾಗಿದೆ.
ಧೋನಿಗಿರುವ ಅನುಭವದಿಂದಲೇ ನಮ್ಮ ಪ್ರತಿ ಪ್ರಶ್ನೆಗೂ ಅವರು ಉತ್ತರಿಸುತ್ತಾರೆ. ಒಂದು ವೇಳೆ ಪ್ಲ್ಯಾನ್ A ಕೆಲಸ ಮಾಡದಿದ್ದಲ್ಲಿ ಆತನ ಬಳಿ ಪ್ಲ್ಯಾನ್ B, C ಹಾಗೂ ಪ್ಲ್ಯಾನ್ D ವರೆಗೂ ಸಿದ್ಧವಿರುತ್ತದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ರಿಷಭ್‌ ಪಂತ್ ಗೆ ಮೈದಾನದಲ್ಲಿ ನಿರಂತರವಾಗಿ ಮಾರ್ಗದರ್ಶನ ನೀಡಿದ್ದನ್ನು ನೋಡಿದ್ದೀರಿ, ಈ ಅನುಭವವನ್ನೆಲ್ಲಾ ನೀವು ಮಾರುಕಟ್ಟೆಯಲ್ಲಿ ಖರೀದಿಸಲು ಸಾಧ್ಯವಿಲ್ಲ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಧೋನಿಯ ಉಪಸ್ಥಿತಿಯಿಂದಲೇ ನಾಯಕ ವಿರಾಟ್ ಕೊಹ್ಲಿ ಸಹ ಮೈದಾನದಲ್ಲಿ ಸಂತೋಷದಿಂದಿರಬಹುದು ಹಾಗೂ ತಂಡದಲ್ಲಿ ಅಗತ್ಯ ಬದಲಾವಣೆಗಳಿದ್ದಲ್ಲಿ ಮಾಜಿ ನಾಯಕನನ್ನು ಅವಲಂಬಿಸಬಹುದು ಎಂದು ತಂಡದ ಮತ್ತೊಬ್ಬ ಸದಸ್ಯ ಬೆಂಬಲ ಸೂಚಿಸಿದ್ದಾರೆ.
ಧೋನಿ ವಿಕೆಟ್ ಹಿಂಬದಿಯಲ್ಲಿ ನಿಂತು ಬೌಲರ್ ಗಳಿಗೆ ನಿರಂತರ ಮಾರ್ಗದರ್ಶನ ನೀಡುತ್ತಾರೆ. ನಾವು ಮೈದಾನಕ್ಕೆ ಕಾಲಿಟ್ಟ ಕೆಲವೇ ಓವರ್ ಗಳ ನಂತರ ಬೌಲರ್ ಗಳು ತಮ್ಮ ವೇಗ ಮತ್ತು ವ್ಯತ್ಯಾಸಗಳ ಮೇಲೆ ಹೇಗೆ ಕೆಲಸ ಮಾಡಬೇಕು ಹಾಗೂ ಚೆಂಡನ್ನು ಯಾವ ಜಾಗದಲ್ಲಿ ಎಸೆಯುವ ಮೂಲಕ ಕರಾರುವಕ್ಕಾಗಿ ದಾಳಿ ನಡೆಸಬೇಕೆಂಬುದನ್ನು ಧೋನಿ ತಿಳಿಸುತ್ತಾರೆ. ಇದು ಬೇರೆಯವರಿಂದ ಅಸಾಧ್ಯ ಎಂದು ಆಟಗಾರರು ವಿವರಿಸುತ್ತಾರೆ.

ತಂಡ ದೊಡ್ಡ-ದೊಡ್ಡ ಟೂರ್ನಿಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಕೇವಲ ಧೋನಿಯಂತಹ ದೃಢ ವ್ಯಕ್ತಿಯ ಉಪಸ್ಥಿತಿಯಿಂದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬುದು ಮತ್ತೊಬ್ಬ ಆಟಗಾರನ ಪ್ರತಿಕ್ರಿಯೆಯಾಗಿದೆ. ಆ ಮೂಲಕ ಧೋನಿ ಪರವಾಗಿ ಟೀಮ್‌ ಇಂಡಿಯಾ ಎಲ್ಲ ಸದಸ್ಯರು ಬ್ಯಾಟ್‌ ಬೀಸಿದ್ದಾರೆ.

loading...